Advertisement

ದೇವೇಗೌಡ ಕರಿನಾಗರ ಎಂದಿದ್ದ ಬಚ್ಚೇಗೌಡ ಗಪ್‌ಚುಪ್‌

02:37 PM Apr 06, 2019 | Vishnu Das |

ಚಿಕ್ಕಬಳ್ಳಾಪುರ: ಒಂದು ಕಾಲಕ್ಕೆ ಆತ್ಮೀಯ ಸ್ನೇಹಿತರು, ಜನತಾ ಪರಿವಾರವನ್ನು ಜೊತೆ ಜೊತೆಯಾಗಿ ಕಟ್ಟಿ ಬೆಳೆಸಿದವರಲ್ಲಿ ಜೆಡಿಎಸ್‌
ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಚಿವ ಹೊಸಕೋಟೆಯ ಬಿ.ಎನ್‌.ಬಚ್ಚೇಗೌಡ ಮೊದಲಿಗರು.ಆದರೆ ಇಬ್ಬರ ನಡುವಿನ ರಾಜಕೀಯ ವೈಮನಸ್ಸು ಸ್ಫೋಟಗೊಂಡ ಬಳಿಕ ಬಚ್ಚೇಗೌಡ ದೇವೇಗೌಡರನ್ನು ನೇರವಾಗಿ ಹೀನಮಾನವಾಗಿ ಟೀಕಾ ಪ್ರಹಾರ ನಡೆಸಿದವರು.

Advertisement

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಸಚಿವರಾಗಿದ್ದ ಬಚ್ಚೇಗೌಡರು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಆರ್‌.ಅಶೋಕ್‌ ಜೊತೆ ಕುಳಿತು ದೇವೇಗೌಡರನ್ನು ಕರಿನಾಗರ ಹಾವು, ಅವರು ಹೆಗಲ ಮೇಲೆ ಕೈಇಟ್ಟವರು ಹಾಳಾಗಿ ಹೋಗಿದ್ದಾರೆ, ಪಕ್ಷದ ಕೆಲ ನಾಯಕರ ಸಾವಿಗೆ ಇವರೇ ಕಾರಣ, ದೇವೇಗೌಡರ ಜೊತೆಗೆ ನಾಲ್ಕು ಜನ ಪುತ್ರರ ವಿರುದ್ಧ ಹೀನಮಾನವಾಗಿ ಬೈದಿದ್ದ ಬಚ್ಚೇಗೌಡರು ಇದೀಗ ದೇವೇಗೌಡರ ವಿರುದ್ಧ ಗಪ್‌ಚುಪ್‌ ಎನ್ನುತ್ತಿದ್ದಾರೆ.

ಹೌದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಎರಡನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಬಿ.ಎನ್‌.ಬಚ್ಚೇಗೌಡ ಈಗ ಅಖಾಡದಲ್ಲಿ ಜೆಡಿಎಸ್‌ ವರಿಷ್ಠರ ಬಗ್ಗೆ ಮೌನರಾಗ ತಾಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಚ್ಚೇಗೌಡರು 1978 ರ ಕಾಲಕ್ಕೆ ಜನತಾ ದಳದಿಂದ ಸ್ಪರ್ಧಿಸಿ ಹೊಸಕೋಟೆ ಕ್ಷೇತ್ರದ ಶಾಸಕರಾಗಿದ್ದವರು. ಆದರೆ ದೇವೇಗೌಡರ
ಕುಟುಂಬದೊಂದಿಗೆ ರಾಜಕೀಯ ವೈಮನಸ್ಸು ಬೆಳೆಸಿಕೊಂಡು ಜನತಾ
ಪರಿವಾರ ಬಿಟ್ಟು ಬಳಿಕ 2008 ರಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ
ವಿಧಾನಸಭೆಗೆ ಕಮಲದಿಂದ ಸ್ಪರ್ಧಿಸಿ ಗೆದ್ದು ಬಿಜೆಪಿ ಸರ್ಕಾರದಲ್ಲಿ
ಕಾರ್ಮಿಕ ಸಚಿವರಾಗಿಯು ಬಚ್ಚೇಗೌಡ ಕೆಲಸ ಮಾಡಿದರು.ಆದರೆ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂಟಿಬಿ ನಾಗರಾಜ್‌ ವಿರುದ್ಧ ಸೋತ ಬಚ್ಚೇಗೌಡ 2018ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸದೇ ತನ್ನ ಪುತ್ರ ಶರತ್‌ ಬಚ್ಚೇಗೌಡರನ್ನು ಕಣಕ್ಕೆ ಇಳಿಸಿದರೂ ಸೋತರು.

ಲೋಕಸಭೆ ಚುನಾವಣೆಗೆ ಸ್ಪರ್ಧೆ

Advertisement

2013ರಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಆದ ಸೋಲಿನ ಕಹಿಯಿಂದ ಪಾರಾಗಲು 2014 ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ  ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಬಚ್ಚೇಗೌಡ ಮುಂದಾದರು. ಆದರೆ ಕೊನೆ ಗಳಿಗೆಯಲ್ಲಿ ಕ್ಷೇತ್ರದಲ್ಲಿ ಈಗಿನ ಸಿಎಂ
ಹೆಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದರಿಂದ ಕ್ಷೇತ್ರದಲ್ಲಿ ತ್ರೀಕೋನ
ಸ್ಪರ್ಧೆ ಏರ್ಪಟ್ಟು ಕಾಂಗ್ರೆಸ್‌ನ ಎಂ.ವೀರಪ್ಪ ಮೊಯ್ಲಿ ಗೆಲುವು ಸಾಧಿಸಿದ್ದರು.
ಅಪ್ಪ, ಮಕ್ಕಳ ವಿರುದ್ಧ ವಾಗ್ಧಾಳಿ: ಜೆಡಿಎಸ್‌ ಸ್ಪರ್ಧೆಯಿಂದ ಒಕ್ಕಲಿಗ ಮತಗಳು ವಿಭಜನೆಯಾಗಿ ಮೊಯ್ಲಿ ಸುಲಭವಾಗಿ ಗೆಲುವು ಸಾಧಿಸಿದ್ದರು. ಜೆಡಿಎಸ್‌ ಸ್ಪರ್ಧೆಯಿಂದಲೇ ಕಳೆದ ಬಾರಿ ನಾನು ಸೋತೆ ಎನ್ನುವ ಬಚ್ಚೇಗೌಡ ಆಗ ಚುನಾವಣಾ ಅಖಾಡದಲ್ಲಿ ತಮ್ಮ ರಾಜಕೀಯ ಕಡು ವಿರೋಧಿಗಳಾದ ಜೆಡಿಎಸ್‌ ನಾಯಕರ ವಿರುದ್ಧ ಮಾತಿನ ಸಮರ ಸಾರಿದ್ದರು.

ದೇವೇಗೌಡರ ಕುಟುಂಬ ನನ್ನಿಂದಲೇ ಬೆಳೆಯಿತು ಎನ್ನುವ ರೀತಿಯಲ್ಲಿ ಜೆಡಿಎಸ್‌ ಪಕ್ಷ ಅಪ್ಪ, ಮಕ್ಕಳ ಪಕ್ಷವಾಗಿದೆ ಎಂದೆಲ್ಲಾ ವೀರಾವೇಶದ ಮಾತುಗಳನ್ನಾಡಿದ್ದರು. ಆದರೆ ಇದೀಗ ಬಚ್ಚೇಗೌಡ ಎರಡನೇ ಬಾರಿಗೆ ಲೋಕಸಭಾ ಚುನಾವಣೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿದ್ದರೂ ಜೆಡಿಎಸ್‌ ವರಿಷ್ಠರಾದ ದೇವೇಗೌಡರ ಕುಟುಂಬದ ವಿರುದ್ದ ಅಖಾಡದಲ್ಲಿ ಮೌನ ವಹಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿನ ಒಕ್ಕಲಿಗರ ಮತಗಳ ಮೇಲೆ ಕಣ್ಣು ಇಟ್ಟು ಚುನಾವಣಾ ಪ್ರಚಾರದಲ್ಲಿ ಕೇವಲ ಬಿಜೆಪಿ ಸಾಧನೆ, ಮೋದಿ ಹವಾ ಮೇಲೆ ಮತಯಾಚನೆ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಬಚ್ಚೇಗೌಡರ ಈ ತಂತ್ರಗಾರಿಕೆಗೆ ಒಕ್ಕಲಿಗರು ಯಾವ ರೀತಿ ಸ್ಪಂದಿಸುತ್ತಾರೆ, ಸಿಎಂ ಕುಮಾರಸ್ವಾಮಿ ಮುಖ ನೋಡಿ ಮೈತ್ರಿ ಅಭ್ಯರ್ಥಿ ಮೊಯ್ಲಿಗೆ ಬಲ ತುಂಬುತ್ತಾರಾ ಅಥವಾ ಜಾತಿಯ ಮುಖ ನೋಡಿ ಬಚ್ಚೇಗೌಡರ ಪರ ಒಲವು ತೋರುತ್ತಾರಾ ಎನ್ನುವುದು ಕಾಲವೇ ಮೇ.23ರವರೆಗೆ ಕಾಯಬೇಕು.

ದೇವೇಗೌಡ ಎಂದರೆ ಕೈ ಮುಗಿದಿದ್ದರು
ಇತ್ತೀಚೆಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡ ಜೆಡಿಎಸ್‌ ವರಿಷ್ಠ ದೇವೇಗೌಡರ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಏನು ಉತ್ತರಿಸದೇ ಎರಡು ಕೈ ಮುಗಿದರು. ಅಲ್ಲದೇ ದೇವೇಗೌಡರ ಬಗ್ಗೆ ಏನು ಮಾತನಾಡಬೇಡ ಎಂದು ತನ್ನ ಪತ್ನಿ ನನಗೆ ಹೇಳಿದ್ದಾರೆಂದು ಬಚ್ಚೇಗೌಡ ಒಮ್ಮೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು.

ಕ್ಷೇತ್ರದಲ್ಲಿನ ಒಕ್ಕಲಿಗ ಜನಾಂಗದ ಮತಗಳ ಮೇಲೆ ಕಣ್ಣು

ಕಳೆದ ಬಾರಿ ಲೋಕಸಭಾ ಚುನಾವಣೆ ಯಲ್ಲಿ ಒಕ್ಕಲಿಗ ಮತಗಳ ವಿಭಜನೆ
ಯಿಂದಲೇ ನಾನು ಸೋತೆ ಎಂದು ಅರಿತಿ ರುವ ಬಚ್ಚೇಗೌಡ, ಈ ಬಾರಿ ಒಕ್ಕಲಿಗ ಮತಗಳ ಮೇಲೆ ಕೇಂದ್ರೀಕರಿಸಿ ದೇವೇಗೌಡರ ಕುಟುಂಬವನ್ನು ಎದುರು ಹಾಕಿ ಕೊಳ್ಳದೇ ಅವರ ವಿರುದ್ಧ ಏನು ಮಾತ ನಾಡದೇ ಮೌನ ವಹಿಸಿದ್ದಾರೆ. ಕ್ಷೇತ್ರದಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಒಕ್ಕಲಿಗ
ಮತಗಳು ಇವೆ ಎಂದು ಅಂದಾಜಿಸ ಲಾಗಿದೆ. ಅಭ್ಯರ್ಥಿಗಳ ಸೋಲು, ಗೆಲುವಿ ನಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕ ಎಂಬ ಕಾರಣಕ್ಕೆ ಎದುರಾಳಿಗಳ ಬಗ್ಗೆ ಮೃದು ಧೋರಣೆ ವಹಿಸಿ ಗಪ್‌ಚುಪ್‌
ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಎಂ.ವೀರಪ್ಪ ಮೊಯ್ಲಿ
ಹಾಗೂ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್‌ ಬಿಜೆಪಿ ಅಭ್ಯರ್ಥಿ ಒಕ್ಕಲಿಗ ಎಂಬ ಕಾರಣಕ್ಕೆ ಬಿಜೆಪಿಗೆ ಒಕ್ಕಲಿಗರು ಮತ ಹಾಕಿದರೆ ಸಿಎಂ ಕುರ್ಚಿಗೆ ಕಂಟಕ ಎನ್ನುತ್ತಿದ್ದಾರೆ. ಸುಧಾಕರ್‌ ಅಂತೂ ಚಿಕ್ಕಗೌಡ ಬೇಕಾ ನಿಮಗೆ ದೊಡ್ಡ ಗೌಡ ಇರಬೇಕಾ ಎನ್ನುವ ಮೂಲಕ ಕುಮಾರಸ್ವಾಮಿ ಸಿಎಂ ಹುದ್ದೆ
ಯಲ್ಲಿ ಉಳಿಯಬೇಕಾದರೆ ಕೈ, ಜೆಡಿಎಸ್‌ ಅಭ್ಯರ್ಥಿ ಮೊಯ್ಲಿಗೆ ಮತ ಕೊಡಿ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next