ವಾಷಿಂಗ್ಟನ್: ಬೇಬೀಸ್ ಡೇ ಔಟ್ ಹಾಲಿವುಡ್ ಸಿನಿಮಾ ಈಗಲೂ ಸಿನಿ ಪ್ರಿಯರ ನೆಚ್ಚಿನ ಚಿತ್ರವಾಗಿದೆ. ಇಂದಿಗೂ ಕೂಡಾ ಆ ಸಿನಿಮಾದ ಜನಪ್ರಿಯತೆ ಕಡಿಮೆಯಾಗಿಲ್ಲ. ಇದೀಗ ಅಮೆರಿಕದ ಶ್ವೇತಭವನದ ಆವರಣದಲ್ಲಿ ಅಂತಹದ್ದೇ ಒಂದು ಘಟನೆ ನಡೆದಿರುವುದು ವರದಿಯಾಗಿದೆ.
ಇದನ್ನೂ ಓದಿ:ಗಲಭೆಪೀಡಿತ ದಕ್ಷಿಣ ಆಫ್ರಿಕಾದ ಸೂಡಾನ್ ನಲ್ಲಿ ಸಿಲುಕಿದ ದಾವಣಗೆರೆಯ 40 ಕ್ಕೂ ಜನ
ಮಂಗಳವಾರ (ಎ.18) ಶ್ವೇತಭವನದ ಸುತ್ತ ಅಳವಡಿಸಲಾಗಿದ್ದ ಲೋಹದ ಬೇಲಿಯ ಕೆಳಗಿನಿಂದ ನುಸುಳಿ ಮಗುವೊಂದು ಉತ್ತರಭಾಗದಿಂದ ಹುಲ್ಲಿಹಾಸಿನ ಪ್ರದೇಶದೊಳಗೆ ಪ್ರವೇಶಿಸಿತ್ತು. ಕೂಡಲೇ ಜಾಗೃತರಾದ ಅಮೆರಿಕದ ಸೀಕ್ರೆಟ್ ಸರ್ವೀಸ್ ಅಧಿಕಾರಿಗಳು ಮಗುವನ್ನು ತಮ್ಮ ವಶಕ್ಕೆ ಪಡೆದು ಪೋಷಕರ ವಶಕ್ಕೆ ಒಪ್ಪಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಶ್ವೇತಭವನದ ಉತ್ತರಭಾಗದ ಬೇಲಿಯ ಮೂಲಕ ಅಂಬೆಗಾಲಿಡುತ್ತಾ ಒಳ ಪ್ರವೇಶಿಸಿದ್ದ ಮಗುವನ್ನು ಪೆನ್ಸಿಲ್ವೇನಿಯಾ ಅವೆನ್ಯೂ ಮೂಲದ ಪೋಷಕರಿಗೆ ಒಪ್ಪಿಸಲಾಗಿದೆ. ಈ ಭದ್ರತಾಲೋಪವಾದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಶ್ವೇತಭವನದ ಒಳಗೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಶ್ವೇತಭವನದ ಆವರಣದೊಳಗೆ ಪ್ರವೇಶಿಸಿದ್ದ ಮಗುವನ್ನು ಅಧಿಕಾರಿಗಳು ಹುಡುಕುವ ಸಂದರ್ಭದಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಮಗುವನ್ನು ಪೋಷಕರಿಗೆ ಹಸ್ತಾಂತರಿಸಿದ ನಂತರ ಅವರನ್ನು ತೀವ್ರ ವಿಚಾರಣೆ ನಡೆಸಲಾಗಿತ್ತು ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.