ಬೀದರ್ :ಜಿಲ್ಲೆಯಲ್ಲಿ ಒಂದೂವರೆ ತಿಂಗಳಿನ ಮಗುವೊಂದು ಕೋವಿಡ್-19 ಸೋಂಕಿನಿಂದ ಗುಣಮುಖವಾದ ವಿಚಾರ ಬೆಳಕಿಗೆ ಬಂದಿದೆ, ಬೀದರಿನ ಕೋವಿಡ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿ ಮಗುವನ್ನು ರಕ್ಷಿಸಲಾಗಿದೆ.
ಮಕ್ಕಳ ವಿಭಾಗದ ಮುಖಸ್ಥೆ ಡಾ. ಶಾಂತಲ ಕೌಜಲಗಿ ಅವರ ಮಾರ್ಗದರ್ಶನದಲ್ಲಿ ಡಾ. ಶರಣ ಬುಳ್ಳಾ, ಡಾ. ಪ್ರಿಯಾಂಕ, ಡಾ.ರವಿಕಾಂತ, ಡಾ. ಜಗದೀಶ ಕೋಟೆ ಮತ್ತು ಡಾ. ಸೈಫ್ ಉದ್ದಿನ್ ಮತ್ತು ಶುಶ್ರೂಷಕ- ಶುಶ್ರೂಷಿಕಿಯರು ಅತಿ ಕಾಳಜಿಯಿಂದ ಮಗುವನ್ನು ಮೃತ್ಯುವಿನಿಂದ ಕಾಪಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಕೋವಿಡ್ ಕಳವಳ ಜು.16: 4169 ಸೋಂಕಿತರು ; 1263 ಚೇತರಿಕೆ ಮತ್ತು 104 ಸಾವು
ಘಟನೆಯ ಹಿನ್ನೆಲೆ: ಜೂನ್ 30ರಂದು ಬಸವಕಲ್ಯಾಣ ತಾಲ್ಲೂಕಿನ ಖಾನಪೂರದ ರಸ್ತೆ ಬದಿಯಲ್ಲಿ ಅಂದಾಜು ಒಂದು ತಿಂಗಳು ಹದಿನೈದು ದಿವಸದ ಅಪರಿಚಿತ ಹೆಣ್ಣು ಮಗು ಪತ್ತೆಯಾಗಿತ್ತು ಆ ಮಗುವನ್ನು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬ್ರೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಈ ಸಂದರ್ಭ ಮಗು ತುಂಬಾ ನಿತ್ರಾಣವಾಗಿತ್ತಲ್ಲದೇ ಹೊಟ್ಟೆ ಊದಿಕೊಂಡಿತ್ತು, ತಪಾಸಣೆ ನಂತರ ಮಗು ರಕ್ತಹೀನತೆ ಹಾಗೂ ಕೋವಿಡ್ ಸೋಂಕಿನಿಂದ ಬಳಲುತ್ತಿರುವುದು ಕಂಡುಬಂದಿತ್ತು.
ಮಕ್ಕಳ ವಿಭಾಗದ ಪ್ರತ್ಯೇಕ ಶಿಶು ತೀವ್ರ ನಿಗಾ ಘಟಕದಲ್ಲಿ ಮಗುವನ್ನು ದಾಖಲಿಸಿ ರಕ್ತ ಹೀನತೆ ಸಲುವಾಗಿ ರಕ್ತವನ್ನು ನೀಡಲಾಗಿರುವುದಲ್ಲದೇ ಸಪ್ಸಿಸ್ ಚಿಕಿತ್ಸೆಯನ್ನು ಕೂಡ ಪರಿಣಾಮಕಾರಿಯಾಗಿ ನೀಡಿರುತ್ತಾರೆ. ನಂತರ ಮಗುವಿಗೆ ಕೋವಿಡ್ ದೃಢವಾದ ಹಿನ್ನಲೆ ಸೂಕ್ತ ಚಿಕಿತ್ಸೆ ನೀಡಿ ಮಗುವನ್ನು ಗುಣಮುಖಮಾಡಲಾಯಿತು. ನಂತರ ಜುಲೈ 14ರಂದು ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಗೌರಿ ಶಂಕರ ಅವರಿಗೆ ಒಪ್ಪಿಸಲಾಗಿದೆ.