ಸಕಲೇಶಪುರ: ಜನಿಸಿದ ಕೆಲವೇ ಗಂಟೆಗಳಲ್ಲಿ ಭತ್ತದ ಗದ್ದೆಯ ಕೆಸರಿನಲ್ಲಿ ಸಿಲುಕಿ ಕಾಡಾನೆಯ ಮರಿ ಯೊಂದು ಮೃತಪಟ್ಟಿದ್ದು, ಇದರಿಂದ ದುಖ ತಾಳಲಾರದೇ ತಾಯಿ ಆನೆ ಮೃತದೇಹದ ಸಮೀಪವೇ ರೋದಿಸುತ್ತಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಕೊತ್ತನಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಯಸಳೂರು ಹೋಬಳಿ ಕೊತ್ತನಹಳ್ಳಿ ಸಮೀಪದ ತಿಮ್ಮೇಗೌಡರ ಭತ್ತದ ಗದ್ದೆಯಲ್ಲಿ ಮಂಗಳವಾರ ರಾತ್ರಿ ಕಾಡಾನೆಯೊಂದು ಮರಿ ಹಾಕಿದ್ದು, ಕೆಲವೇ ಗಂಟೆಗಳಲ್ಲಿ ಮರಿ ಕೆಸರಿನಲ್ಲಿ ಸಿಲುಕಿ ಹೊರ ಬರಲು ಸಾಧ್ಯವಾಗದೆ ಸಾವನ್ನಪ್ಪಿದೆ. ಇದರಿಂದ ನೊಂದ ತಾಯಿ ಆನೆ ಸ್ಥಳ ಬಿಟ್ಟು ಹೋಗದೆ ಅಕ್ರಂದನ ಮಾಡುತ್ತಿತ್ತು. ಬುಧವಾರ ಮಧ್ಯಾಹ್ನ ತಾಯಿ ಆನೆ ಮರಿಯಾನೆಯ ಮೃತ ದೇಹವನ್ನು ಕೆಸರಿನಿಂದ ಹೊರಗೆಳೆದು ಪಕ್ಕದ ಬದಿಗೆ ತಂದು ರೋದಿಸುತ್ತಿತ್ತು. ಹತ್ತಿರಕ್ಕೆ ಯಾರನ್ನೂ ಬಿಟ್ಟಿಕೊಳ್ಳಲಿಲ್ಲ.
ಕಾಡಾನೆ ಹಿಂಡು: ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಮುಂಜಾನೆಯಿಂದಲೇ ಕಾಡಾನೆಗಳ ಹಿಂಡನ್ನು ಓಡಿಸಲು ಪಟಾಕಿ ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿದರೂ ಸಹ ತಾಯಿ ಆನೆ ಸ್ಥಳದಿಂದ ಕದಲಲಿಲ್ಲ. ತಾಯಿ ಆನೆಯೊಂದಿಗೆ ಇದ್ದ ಕಾಡಾನೆಗಳ ಹಿಂಡು ಮಧ್ಯಾಹ್ನದ ವೇಳೆಗೆ ಗುಂಪಿನಿಂದ ಬೇರ್ಪಟಿದ್ದು, ಪುನಃ ಸಂಜೆಯ ವೇಳೆಗೆ ಇತರ ಕಾಡಾನೆಗಳ ಹಿಂಡು ತಾಯಿ ಆನೆಯೊಂದಿಗೆ ಸೇರಿದ್ದರಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳನ್ನು ಓಡಿಸಲು ಹರ ಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ.
ಮತ್ತೂಂದು ಘಟನೆ: ಕಳೆದ 15 ದಿನಗಳ ಹಿಂದೆ ಯಷ್ಟೆ ಚಿಕ್ಕಕಲ್ಲೂರು ಸಮೀಪ ಇದೇ ರೀತಿಯ ಕೆಸರಿನಲ್ಲಿ ಸಿಲುಕಿ ಮರಿಯಾನೆಯೊಂದು ಮೃತ ಪಟ್ಟಿತ್ತು. ಇದು ಜನಮಾನಸದಿಂದ ಹೊರ ಬರುವ ಮುನ್ನವೇ ಮತ್ತೂಮ್ಮೆ ಈ ರೀತಿಯ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಕಾರ್ಯಾಚರಣೆ ಮುಂದೂಡಿಕೆ: ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಲಿಂಗರಾಜು, ಯಸಳೂರು ವಲಯ ಅರಣ್ಯಾಧಿಕಾರಿ ಅಭಿಷೇಕ್, ಅರಣ್ಯ ಇಲಾಖೆ ವೈದ್ಯಾಧಿಕಾರಿ ಮುರಳಿ ಸೇರಿದಂತೆ ಇನ್ನಿತ ರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಸಂಜೆಯ ವೇಳೆಗೆ ಕತ್ತಲು ಆವರಿಸಿದ್ದರಿಂದ ಕಾರ್ಯಾ ಚರಣೆಯನ್ನು ಗುರುವಾರಕ್ಕೆ ಮುಂದೂಡಲಾಯಿತು.