ವಿಜಯಪುರ: ಗರ್ಭಿಣಿ ಮಹಿಳೆಗೆ ಆರೋಗ್ಯ ಕವಚ ವಾಹನದಲ್ಲೇ ಹೆರಿಗೆಯಾದ ಅಪರೂಪದ ಘಟನೆ ವಿಜಯಪುರ ಜಿಲ್ಲೆಯಲ್ಲಿ ಜರುಗಿದೆ.
ಭಾನುವಾರ ರಾತ್ರಿ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಣಮೇಶ್ವರ ಗ್ರಾಮದ ದಿಲಶಾದ್ ಹಚಡದ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿ ಕೊಂಡಿದೆ. ಮೊದಲ ಹೆರಿಗೆ ಸಿಸೇರಿಯನ್ ಆಗಿದ್ದರಿಂದ ಸುರಕ್ಷತಾ ದೃಷ್ಟಿಯಿಂದ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು.
ಗರ್ಭಿಣಿ ದಿಲಶಾದ್ ಅವರನ್ನು ಸಿಂದಗಿ ತಾಲೂಕಿನ ಯಂಕಂಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು 108 ಆರೋಗ್ಯ ಕವಚ ವಾಹನದಲ್ಲಿ ಸಾಗಿಸುತ್ತಿದ್ದಾಗ ತೀರ್ವ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಆರೋಗ್ಯ ಕವಚ ಸಿಬ್ಬಂದಿ ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ಬಳಿ ಬರುತ್ತಲೇ 108 ವಾಹನದಲ್ಲೆ ಸುರಕ್ಷಿತವಾಗಿ ಸಹಜ ಹೆರಿಗೆ ಮಾಡಿಸಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಿರುವ ದಿಲಶಾದ್ ಹಾಗೂ ಮಗು ಆರೋಗ್ಯವಾಗಿದ್ದು, ತಾಯಿ-ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಂಡ ತುರ್ತು ವೈದ್ಯಕೀಯ ತಜ್ಞೆ ಶೋಭಾ ಕೋಳಿ ಹಾಗೂ 108 ಪೈಲಟ್(ಚಾಲಕ) ಬಾವುರಾಜ ಮಂಗಳವೆಡೆ ಅವರಿಗೆ ದಿಲಶಾದ ಹಚಡದ ಹಾಗೂ ಅವರ ಕುಟುಂಬ ಧನ್ಯವಾದ ಹೇಳಿ ಕೃತಜ್ಞತೆ ಸಲ್ಲಿಸಿದೆ.