ಎದೆಹಾಲು ಅಮೃತ. ಚೆನ್ನಾಗಿ ಮತ್ತು ಹೆಚ್ಚಾಗಿ ಎದೆಹಾಲು ಕುಡಿದು ಬೆಳೆಯುವ ಮಕ್ಕಳು ಎಲ್ಲ ರೀತಿಯಿಂದಲೂ ಗಟ್ಟಿಮುಟ್ಟಾಗಿ ಇರುತ್ತಾರೆ. ಎದೆಹಾಲು ಕುಡಿಸಿದ ಸಂದರ್ಭದಲ್ಲಿ ತಾಯಿಗೆ ಧನ್ಯತಾಭಾವವೂ, ಮಗುವಿಗೆ ಅಮೃತ ಸವಿದಂಥ ಸಂತೋಷವೂ ಜೊತೆಯಾಗುತ್ತದೆ.
ಹಾಲುಣಿಸುವುದು ಎಂದರೆ ಮಗುವಿನ ಬಾಯಿ ಮೊಲೆಗೆ ತಾಕುವಂತೆ ಮಲಗಿಸಿಕೊಳ್ಳುವುದಷ್ಟೇ ಅಲ್ಲ. ಅದು ದೈಹಿಕ ಸ್ಪರ್ಶಕ್ಕಿಂತ ಮಿಗಿಲಾದ ಪ್ರಕ್ರಿಯೆ. ಎರಡು ಹೃದಯಗಳ ನಡುವಿನ ಮೌನ ಸಂಭಾಷಣೆ ಅದು. ಇಂದು ಮಾರ್ಕೆಟಿಂಗ್ ಅನ್ನೋದು ಯಾವ ಹಂತ ಮುಟ್ಟಿದೆಯೆಂದರೆ ಅನಾದಿ ಕಾಲದಿಂದಲೂ ಮಗುವಿಗೆ ಹಾಲೂಡಿಸಿಕೊಂಡು ಬಂದಿರುವ ನಮಗೆ ಇವತ್ತು, ತಾಯಿ ಹಾಲಿಗಿಂತ ಖಾಸಗಿ ಕಂಪನಿಗಳ ಅತ್ಯಾಕರ್ಷಕ ಉತ್ಪನ್ನಗಳು ಶ್ರೇಷ್ಟ ಎನ್ನಿಸತೊಡಗಿವೆ. ಖಾಸಗಿ ಕಂಪನಿ ಜಾಹಿರಾತುಗಳ ಭರಾಟೆಯ ನಡುವೆಯೂ ಸ್ತನ್ಯಪಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಕೆಲಸಗಳು ಅಲ್ಲಲ್ಲಿ ಆಗುತ್ತಿದೆ ಎನ್ನುವುದೇ ಖುಷಿ. ಯುನಿಸೆಫ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ 120 ದೇಶಗಳಲ್ಲಿ ಅಗಸ್ಟ್ ತಿಂಗಳ ಮೊದಲ ವಾರವನ್ನು ಸ್ತನ್ಯಪಾನ ಸಪ್ತಾಹವೆಂದು ಘೋಷಿಸಲಾಗಿದೆ.
ಒಂದು ಕಟ್ಟಡ ಎಷ್ಟೇ ಮಹಡಿಗಳನ್ನು ಹೊಂದಿರಬಹುದು, ಎಷ್ಟೇ ಆಧುನಿಕ ಸವಲತ್ತುಗಳನ್ನು ಒಳಗೊಂಡಿರಬಹುದು. ಆದರೆ ಕಟ್ಟಡದ ಬುನಾದಿ ಗಟ್ಟಿಯಾಗಿಲ್ಲದೇ ಹೋದರೆ ಮೇಲಿಂದ ಮೇಲೆ ಮಹಡಿಗಳನ್ನು ಕಟ್ಟಲು ಸಾಧ್ಯವಿಲ್ಲ. ತಳಹದಿ ಎಷ್ಟು ಸದೃಢವಾಗಿದೆ ಎನ್ನುವುದರ ಮೇಲೆಯೇ ಕಟ್ಟಡ ಭವಿಷ್ಯ ಇರೋದು. ಅದೇ ರೀತಿ ಮಗುವಿನ ಭವಿಷ್ಯ ಅಡಗಿದೆ ತಾಯಿಯ ಹಾಲಿನಲ್ಲಿ. ತಾಯಿಯ ಹಾಲು ಮಗುವಿನ ಭವಿಷ್ಯಕ್ಕೆ ಬುನಾದಿ ಇದ್ದಂತೆ. ಅದು ದೈಹಿಕವಾಗಿಯಷ್ಟೇ ಅಲ್ಲ ಮಾನಸಿಕವಾಗಿಯೂ ಮಗುವನ್ನು ಸದೃಢವಾಗಿಸುತ್ತೆ. ಮೆದುಳಿನ ಬೆಳವಣಿಗೆಗೆ ಯಾವೆಲ್ಲಾ ಪೋಷಕಾಂಶಗಳು ಬೇಕಿದೆಯೋ ಅವೆಲ್ಲವನ್ನೂ ಪ್ರಕೃತಿ ತಾಯಿಯ ಹಾಲಿನಲ್ಲಿ ಇರಿಸಿದೆ. ಮಗು ಹುಟ್ಟಿದ 6 ತಿಂಗಳವರೆಗೆ ತಾಯಿ ಹಾಲನ್ನೇ ನೀಡಬೇಕು ಎನ್ನುತ್ತದೆ ವೈದ್ಯಕೀಯ ವಿಜ್ಞಾನ. ಹೀಗಾಗಿ ತಾಯಿಯ ಹಾಲು ಪ್ರತಿಯೊಂದು ಮಗುವಿನ ಹಕ್ಕು ಎನ್ನಬಹುದು. ಅಚ್ಚರಿಯ ವಿಷಯ ಎಂದರೆ ಇಷ್ಟೆಲ್ಲಾ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದರೂ ಶೇ. 42.7ರಷ್ಟು ತಾಯಂದಿರು ತಮ್ಮ ಮಗುವಿಗೆ ಹಾಲುಣಿಸದೇ ಇರುವುದು. ಎದೆಹಾಲು ಕುಡಿಸಿದರೆ ತಮ್ಮ ಸೌಂದರ್ಯ ಕುಂದಿ ಹೋಗುತ್ತದೆ. ಸ್ತನಗಳ ಆಕಾರದಲ್ಲಿ ವ್ಯತ್ಯಾಸ ಆಗಿಬಿಡುವ ಸಾಧ್ಯತೆಯಿದೆ ಎಂಬಂಥ ನಂಬಿಕೆಗಳಿಂದ ಈ ಜಮಾನಾದ ಹಲವು ತಾಯಂದಿರು ಮಕ್ಕಳಿಗೆ ಎದೆಹಾಲಿನ ಬದಲು, ಬದಲಿ ಆಹಾರ ನೀಡುತ್ತಿದ್ದಾರೆ. ಆಹಾರ ಉತ್ಪಾದನೆಯ ಕಂಪನಿಗಳು ಪ್ರದರ್ಶಿಸುವ ಬಣ್ಣದ ಜಾಹೀರಾತು ಕೂಡ ಈ ಕಾಲದ ಅಮ್ಮಂದಿರನ್ನು ದಾರಿ ತಪ್ಪಿಸುತ್ತಿವೆ. ಇಂಥ ಸಂದರ್ಭದಲ್ಲಿಯೇ ಪ್ಯಾಕ್ ಮಾಡಿದ ಆಹಾರಕ್ಕಿಂತ, ಬಾಟಲಿಯ ಹಾಲಿಗಿಂತ ಎದೆ ಹಾಲೇ ಶ್ರೇಷ್ಠ ಎಂದು ಸಾರಲು ಸ್ತನ್ಯಪಾನ ಸಪ್ತಾಹದಂಥ ಕಾರ್ಯಕ್ರಮಗಳು ಆರಂಭವಾಗಿವೆ. ರೆಡಿಮೇಡ್ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನೇ ಕಳೆದುಕೊಂಡು ಮಕ್ಕಳು ಕಳೆಗುಂದಿರುವ ಈ ಸಂದರ್ಭದಲ್ಲಿ ಇಂಥಾ ಜಾಗೃತಿ ಕಾರ್ಯಕ್ರಮಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ.
ಸ್ತನ್ಯಪಾನದ ಕೆಲ ಪ್ರಯೋಜನಗಳು
– ಉತ್ತಮ ರೋಗನಿರೋಧಕ ಮತ್ತು ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ.
– ಅಪೌಷ್ಟಿಕತೆಯನ್ನು ನಿವಾರಿಸುತ್ತದೆ ಮತ್ತು ಸ್ಥೂಲಕಾಯವನ್ನು ತಡೆಗಟ್ಟುತ್ತದೆ.
- ಮಗುವಿನ ಬುದ್ಧಿಶಕ್ತಿ ಮತ್ತು ಬುದ್ಧಿಕ್ಷಮತೆಯನ್ನು ಚುರುಕಾಗಿಸುತ್ತದೆ.
– ತಾಯಿ ಮತ್ತು ಮಗುವಿನ ಮಧ್ಯೆ ಆರೋಗ್ಯಕರ ಬಾಂಧವ್ಯ ಬೆಳೆಯುತ್ತದೆ
– ಉಸಿರಾಟ ಸಂಬಂಧಿ ಖಾಯಿಲೆಗಳನ್ನು ತಡೆಗಟ್ಟುತ್ತದೆ
– ಹೃದಯ ಸಂಬಂಧಿ ಖಾಯಿಲೆ ಮತ್ತು ಡಯಾಬಿಟೀಸ್ ತಡೆಗಟ್ಟುತ್ತದೆ
ಹಾಲಲ್ಲಿರುವ ಅಂಶಗಳು(100 ಎಂ.ಎಲ್.ನಲ್ಲಿ)
ಎನರ್ಜಿ- 340
ಪ್ರೋಟೀನ್- 1.3
ಕೊಬ್ಬು- 4.2
ಕಾರ್ಬೊಹೈಡ್ರೇಟ್- 7
ಸೋಡಿಯಂ- 15
ಕ್ಯಾಲ್ಸಿಯಂ- 35
ಫಾಸ್ಫರಸ್- 15
ಕಬ್ಬಿಣ- 76
ವಿಟಮಿನ್ ಎ- 60
ವಿಟಮಿನ್ ಸಿ- 3.8
ವಿಟಮಿನ್ ಡಿ- 0.01
ಡಾ. ಆಶಾ ಬೆನಕಪ್ಪ