ಕಲಬುರಗಿ: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸೇರಿದರೆ ಕೇಂದ್ರದಲ್ಲಿ ಸಚಿವರಾಗುತ್ತಾರೆ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯರನ್ನು ಕಂಡರೆ ಡಿ.ಕೆ.ಶಿವಕುಮಾರ್ ಮತ್ತು ಜಿ.ಪರಮೇಶ್ವರ್ ಅವರಿಗೆ ಆಗಲ್ಲ. ಅದೇ ರೀತಿ ಈ ಇಬ್ಬರನ್ನೂ ಕಂಡರೆ ಸಿದ್ದರಾಮಯ್ಯನವರಿಗೆ ಆಗಲ್ಲ. ಹೀಗಾಗಿ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಸಿದ್ದರಾಮಯ್ಯ ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ. ಅವರು ಬಿಜೆಪಿಗೆ ಸೇರಿದರೆ ಸ್ವಾಗತಿಸುತ್ತೇವೆ ಎಂದರು.
ಕಾಂಗ್ರೆಸ್ ಗೆ ರಾಜ್ಯ ಮತ್ತು ಕೇಂದ್ರದಲ್ಲಿ ನಾಯಕತ್ವ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಶಾಸಕರು ಸೇರ್ಪಡೆಗೆ ಬಿಜೆಪಿ ಹೈಕಮಾಂಡ್ ಅನುಮತಿ ಕೊಟ್ಟರೆ ಎರಡೂ ಪಕ್ಷಗಳು ವೈಟ್ ವಾಶ್ ಆಗುತ್ತವೆ ಎಂದರು.
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಿಜೆಪಿ ಸೇರಲು ಬಯಸುತ್ತಿದ್ದಾರೆ. ಬೀದರ್ ಶಾಸಕರೊಬ್ಬರನ್ನು ನಾನೇ ಖುದ್ದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದೇನೆ ಎಂದು ಬಾಂಬ್ ಸಿಡಿಸಿದರು.
ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿ ಇದ್ದು, ಇನ್ನು 20 ವರ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ ಎಂದೂ ಚಿಂಚನಸೂರ ಭವಿಷ್ಯ ನುಡಿದರು.