ಹೊಸದಿಲ್ಲಿ : ಬಾಬರಿ ಮಸೀದಿ – ರಾಮ ಮಂದಿರ ವಿವಾದದಲ್ಲಿ ತಾನು ಶಾಂತಿದೂತನ ಪಾತ್ರವಹಿಸುತ್ತಿರುವುದಾಗಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಗುರು ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ.
ಬಾಬರಿ ಮಸೀದಿ – ರಾಮ ಮಂದಿರ ವಿವಾದವನ್ನು ಕೋರ್ಟ್ ಹೊರಗೆ ಬಗೆಹರಿಸುವ ಪ್ರಸ್ತಾವವನ್ನು ಶ್ರೀ ಶ್ರೀ ಉಭಯ ಕಡೆಯವರ ಮುಂದೆ ಇಟ್ಟಿದ್ದಾರೆ ಮತ್ತು ಆ ನಿಟ್ಟಿನಲ್ಲಿ ಪ್ರಯತ್ನವನ್ನು ಆರಂಭಿಸಿದ್ದಾರೆ ಎಂಬ ವದಂತಿಗಳ ನಡುವೆ ಶ್ರೀ ಶ್ರೀ ರವಿಶಂಕರ್ ತಾನು ಶಾಂತಿದೂತನ ಪಾತ್ರ ವಹಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು. ಹಿಂದು – ಮುಸ್ಲಿಂ ಸಹೋದರತೆಗೆ ಅವರು ಕರೆ ನೀಡಿದರು.
2003-04ರಲ್ಲೇ ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗಿತ್ತು. ಆದರೆ ಇಂದು ಅಂದಿಗಿಂತಲೂ ಹೆಚ್ಚು ಧನಾತ್ಮಕ ವಾತಾವರಣವಿದೆ. ಅಂತೆಯೇ ನಾನೀಗ ಈ ನಿಟ್ಟಿನಲ್ಲಿ ಶಾಂತಿದೂತನ ಪಾತ್ರ ವಹಿಸಲು ಮುಂದಾಗಿದ್ದೇನೆ. ಇದು ಸಂಪೂರ್ಣವಾಗಿ ರಾಜಕಾರಣೇತರ ಯತ್ನವಾಗಿದೆ ಎಂದು ಶ್ರೀ ಶ್ರೀ ರವಿಶಂಕರ್ ಹೇಳಿದರು.
ಡಿಸೆಂಬರ್ 5ರಿಂದ ಸುಪ್ರೀಂ ಕೋರ್ಟ್ ಐತಿಹಾಸಿಕ ಬಾಬರಿ ಮಸೀದಿ ಮತ್ತು ರಾಮ ಮಂದಿರ ಪ್ರಕರಣದ ಅಂತಿಮ ವಿಚಾರಣೆಯನ್ನು ಆರಂಭಿಸಲಿದೆ. ಡಿ.6 ಬಾಬರಿ ಮಸೀದಿ ಧ್ವಂಸದ 25ನೇ ವರ್ಷವಾಗಿದೆ.
ಹಿಂದುಗಳು ಮತ್ತು ಮುಸ್ಲಿಮರು ಪರಸ್ಪರರ ನಡುವಿನ ಹಗೆತನವನ್ನು ಬದಿಗಿರಿಸಿ ಶಾಂತಿ ಸಾಧನೆಗೆ ಮುಂದಾಗಬೇಕು ಎಂದು ಶ್ರೀ ಶ್ರೀ ಕರೆ ನೀಡಿದರು.