ನವದೆಹಲಿ: ಸುದೀರ್ಘ 28 ವರ್ಷಗಳ ನಂತರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟವಾದ ನಂತರ, ಸಿಬಿಐ ವಿಶೇಷ ಕೋರ್ಟ್ ತೀರ್ಪಿನಿಂದ ತುಂಬಾ ಸಂತೋಷವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಬುಧವಾರ(ಸೆಪ್ಟೆಂಬರ್ 30, 2020) ಪ್ರತಿಕ್ರಿಯೆ ನೀಡಿದ್ದಾರೆ.
ಈ ತೀರ್ಪು ರಾಮ ಜನ್ಮಭೂಮಿ ಚಳವಳಿಯ ಬಗ್ಗೆ ನನ್ನ ವೈಯಕ್ತಿಕ ಮತ್ತು ಬಿಜೆಪಿ ನಂಬಿಕೆ ಮತ್ತು ಬದ್ಧತೆಯನ್ನು ಸಮರ್ಥಿಸುತ್ತದೆ ಎಂದ ಅವರು ಜೈ ಶ್ರೀರಾಮ್ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಮುರಳಿಮನೋಹರ್ ಜೋಶಿ:
Related Articles
ಇದೊಂದು ಕೋರ್ಟ್ ನೀಡಿದ ಐತಿಹಾಸಿಕ ತೀರ್ಪು. ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ನಡೆದ ಘಟನೆಯಲ್ಲಿ ಯಾವುದೇ ಸಂಚು ಇಲ್ಲ ಎಂಬುದು ಸಾಬೀತಾಗಿದೆ. ನಮ್ಮ ರಥಯಾತ್ರೆ ಮತ್ತು ಸಭೆ ಸಂಚಿನ ಒಂದು ಭಾಗ ಅಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ, ಕೇಂದ್ರ ಮಾಜಿ ಸಚಿವ ಮುರಳಿ ಮನೋಹರ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಯೋಗಿ ಆದಿತ್ಯನಾಥ್:
ಬಾಬ್ರಿ ಮಸೀದಿ ಪ್ರಕರಣದಲ್ಲಿ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ವಿಶ್ವಹಿಂದೂ ಪರಿಷತ್ ಮುಖಂಡರು, ಬಿಜೆಪಿ ನಾಯಕರು, ಸಂತರು, ಕಾರ್ಯಕರ್ತರ ಮೇಲೆ ಅಂದಿನ ಕಾಂಗ್ರೆಸ್ ಸರ್ಕಾರ ಸುಳ್ಳು ಪ್ರಕರಣ ದಾಖಲಿಸಿತ್ತು ಎಂಬುದನ್ನು ಇಂದಿನ ತೀರ್ಪು ಸಾಬೀತುಪಡಿಸಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಸೀತಾರಾಮ್ ಯೆಚೂರಿ:
ಇದೊಂದು ಸಂಪೂರ್ಣ ನ್ಯಾಯದ ಅಣಕು. ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಇದು ಸ್ವಯಂ ಪ್ರಚೋದಿತವೇ? ಬಾಬ್ರಿ ಮಸೀದಿ ಧ್ವಂಸ ಕಾನೂನಿನ ಉಲ್ಲಂಘನೆ ಎಂದು ಸುಪ್ರೀಂಕೋರ್ಟ್ ನ ಅಂದಿನ ಸಿಜೆಐ ಹೇಳಿದ್ದರು. ಈಗ ಈ ತೀರ್ಪು ಹೊರಬಿದ್ದಿರುವುದು ಶೇಮ್…ಎಂದು ಸೀತಾರಾಮ್ ಯೆಚೂರಿ ಟ್ವೀಟ್ ಮಾಡಿದ್ದಾರೆ.