ಶಿವಮೊಗ್ಗ: ಬಾಬ್ರಿ ಮಸೀದಿ ಪ್ರಕರಣದ ಹೋರಾಟದಲ್ಲಿದ್ದ 32 ಜನರನ್ನು ಕೋರ್ಟ್ ಖುಲಾಸೆ ಮಾಡಿರುವುದು ರಾಷ್ಟ್ರೀಯವಾದಿಗಳಿಗೆ ಸಂತಸದ ದಿನ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಂತ್ರ ಭಾರತದಲ್ಲಿ ನಮ್ಮ ಶ್ರದ್ಧಾ ಮಂದಿರಗಳ ಪರ ಹೋರಾಟ ಮಾಡಲು ಇಂದಿನ ತೀರ್ಪು ಬಹುಮುಖ್ಯವಾಗಿದೆ. ಬಾಬರ್ ನಮ್ಮ ಶ್ರೀರಾಮನ ದೇವಾಲಯ ಕೆಡವಿ ಅಲ್ಲಿ ಮಸೀದಿ ನಿರ್ಮಾಣಮಾಡಿದ್ದ. ಈ ಬಾಬರ್ ಮಸೀದಿ ಗುಲಾಮಗಿರಿಯ ಸಂಕೇತವಾಗಿತ್ತು. ಈ ಮಸೀದಿ ಕೆಡವಿ ರಾಮಮಂದಿರ ಕಟ್ಟಬೇಕು ಎಂಬುದು ರಾಷ್ಟ್ರೀಯವಾದಿಗಳ ತೀರ್ಮಾನವಾಗಿತ್ತು.
ಅಡ್ವಾಣಿ ಅವರಿಗೆ ಶಿಕ್ಷೆಯಾಗಿದ್ದರೆ ಈ ವಯಸ್ಸಿನಲ್ಲಿ ಏನು ಕಥೆ ಎಂದು ಕೆಲವರು ಹೇಳುತ್ತಿದ್ದರು. ಆದರೆ ಅವರು ರಾಮನಿಗಾಗಿ ಶಿಕ್ಷೆಗೆ ಸಿದ್ಧರಾಗಿದ್ದರು ಎಂದರು.
ಈ ತೀರ್ಪು ಕೇವಲ ಅಯೋಧ್ಯೆಗೆ ಮಾತ್ರ ಸೀಮಿತವಾಗಲ್ಲ. ಮಥುರಾದಲ್ಲಿಯೂ ಶ್ರೀಕೃಷ್ಣನ ದೇವಾಲಯ ಕೆಡವಿ ಮಸೀದಿ ನಿರ್ಮಿಸಲಾಗಿದೆ. ಇಲ್ಲಿಯೂ ಶ್ರೀಕೃಷ್ಣನ ದೇವಾಲಯ ನಿರ್ಮಾಣಕ್ಕೆ ಈ ತೀರ್ಪು ಪ್ರೇರಣೆಯಾಗಿದೆ. ಮಥುರಾದಲ್ಲಿ ಕರ ಸೇವೆ ಮಾಡಲು ಕೋರ್ಟ್ ಬಿಡುವುದಿಲ್ಲ ಎಂಬ ಭಾವನೆ ನನಗೆ ಇದೆ. ಅದಾಗ್ಯೂ ಕರಸೇವೆಗೆ ಅವಕಾಶ ನೀಡದೆ ಪೂರ್ಣ ಪ್ರಮಾಣದ ಕೃಷ್ಣ ದೇವಾಲಯ ನಿರ್ಮಾಣಕ್ಕೆ ಅವಕಾಶ ನೀಡಬೇಕು.
ಇದನ್ನೂ ಓದಿ: ಬಾಬ್ರಿ ಪ್ರಕರಣ: ಅಂದು ನಡೆದ ಘಟನೆ ಬಗ್ಗೆ ಹಲ್ಲೆಗೊಳಗಾದ ಪತ್ರಕರ್ತರು ಹೇಳುವುದೇನು?
ಮಥುರಾದಲ್ಲಿ ಕೃಷ್ಣ ದೇವಾಲಯ ನಿರ್ಮಾಣಕ್ಕಾಗಿ ನಾನು ಶಿಕ್ಷೆಗೆ ಒಳಗಾಗಲೂ ಸಿದ್ಧ. ಇಲ್ಲದಿದ್ದಲ್ಲಿ ಮಥುರಾದಲ್ಲಿಯೂ ಕರಸೇವೆ ಮಾಡಬೇಕಾಗುತ್ತದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.