ಇಸ್ಲಮಾಬಾದ್: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಶಾನ್ ಮಸೂದ್ ಮತ್ತು ಶಾಹೀನ್ ಶಾ ಆಫ್ರಿದಿ ಅವರ ಸಾಮರ್ಥ್ಯದ ಮೇಲೆ ನಂಬಿಕೆಯನ್ನು ಕಳೆದುಕೊಂಡಿದೆ ಮತ್ತು ಮತ್ತೊಮ್ಮೆ ತಂಡದ ನಾಯಕತ್ವಕ್ಕೆ ಮಾಜಿ ನಾಯಕ ಬಾಬರ್ ಅಜಂ ಅವರನ್ನೇ ಮತ್ತೆ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಪಾಕ್ ತಂಡವು ಗುಂಪು ಹಂತ ದಾಟಲು ವಿಫಲವಾದ ನಂತರ ಬಾಬರ್ ಎಲ್ಲಾ ಸ್ವರೂಪಗಳಲ್ಲಿ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಟೆಸ್ಟ್ ಮಾದರಿಯಲ್ಲಿ ಶಾನ್ ಮಸೂದ್ ನಾಯಕನಾಗಿ ನೇಮಕಗೊಂಡರೆ, ಶಾಹೀನ್ ಶಾ ಅವರನ್ನು ಟಿ 20 ತಂಡದ ನಾಯಕರನ್ನಾಗಿ ಮಾಡಲಾಗಿತ್ತು.
ಇದೀಗ ಮತ್ತೆ ಪಾಕಿಸ್ತಾನ ಕ್ರಿಕೆಟ್ ಮ್ಯಾನೇಜ್ ಮೆಂಟ್ ಬದಲಾವಣೆ ಮಾಡಲಾಗಿದೆ. ಇದೀಗ ಮತ್ತೆ ಬಾಬರ್ ಅಜಂ ಬಗ್ಗೆ ಒಲವು ಹೆಚ್ಚಿದೆ.
“ತಮಾಷೆಯ ಭಾಗವೆಂದರೆ ಮಂಡಳಿಯ ಅಧ್ಯಕ್ಷರ ಬದಲಾವಣೆಯೊಂದಿಗೆ ಟೆಸ್ಟ್ ಮತ್ತು ಟಿ20 ಮಾದರಿಗಳಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಶಾನ್ ಮಸೂದ್ ಮತ್ತು ಶಾಹೀನ್ ಶಾ ಆಫ್ರಿದಿ ಅವರ ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಂಡಿವೆ” ಎಂದು ಮೂಲವೊಂದು ಹೇಳಿದೆ.
“ಬಾಬರ್ ಅವರು ಮತ್ತೆ ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆಯೇ ಎಂದು ಕಂಡುಹಿಡಿಯಲಾಗುತ್ತಿದೆ. ಸ್ಪಷ್ಟವಾಗಿ, ಅವರು ಮಂಡಳಿಯ ಅಧ್ಯಕ್ಷರಿಂದ ಕೆಲವು ಭರವಸೆಗಳನ್ನು ಬಯಸುತ್ತಾರೆ” ಎಂದು ಮೂಲವು ಸೇರಿಸಿದೆ.