ವಿಜಯಪುರ: ಗ್ರಾ.ಪಂ. ಸದಸ್ಯೆಯೊಬ್ಬರಿಗೆ ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆಯಲ್ಲಿ ಮತದಾನ ಮಾಡಲು ಅಗತ್ಯವಿಲ್ಲದಿದ್ದರೂ ಸಹಾಯಕರ ಅಗತ್ಯವಿದೆ ಎಂದು ದೃಢೀಕರಣ ನೀಡಿದ ಆರೋಪದಲ್ಲಿ ಪಿಡಿಒ ರೇಣುಕಾ ಸೋಲಾಪುರ ಅವರನ್ನು ಅಮಾನತು ಮಾಡಲಾಗಿದೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ಗ್ರಾ.ಪಂ. ಪಿಡಿಒ ರೇಣುಕಾ ಸೋಲಾಪುರ ಇವರನ್ನು ಚುನಾವಣೆ ಕರ್ತವ್ಯ ಲೋಪದ ಆರೋಪದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಸುನಿಲ ಕುಮಾರ ಅಮಾನತು ಮಾಡಿದ ಆದೇಶ ಹೊರಡಿಸಿದ್ದಾರೆ.
ಬಾಬಾನಗರ ಗ್ರಾ.ಪಂ. ಸದಸ್ಯೆ ಮುತ್ತವ್ವ ಶ್ರೀಶೈಲ ಗೌಡನವರ ಅವರಿಗೆ ಡಿ.7 ರಂದು ನೀಡಿದ ದೃಢೀಕರಣ ಪ್ರಮಾಣ ಪತ್ರದಲ್ಲಿ ಹೆಬ್ಬೆಟ್ಟು ಸಹಿ ಇದೆ ಎಂದು, ಇದಕ್ಕೂ ಮೊದಲ ಡಿ.6 ರಂದು ನೀಡಿದ ದೃಢೀಕರಣ ಪ್ರಮಾಣ ಪತ್ರದಲ್ಲಿ ಎಂಎಸ್‍ಜಿ ಎಂದೂ ದೃಢೀಕರಿಸಲಾಗಿದೆ. ಒಬ್ಬರೇ ಸದಸ್ಯರಿಗೆ ಎರಡು ರೀತಿಯಲ್ಲಿ ದೃಢೀಕರಣ ನೀಡಿದ ಆರೋಪದಲ್ಲಿ ಪಿಡಿಒ ರೇಣುಕಾ ಅವರನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ:ಹಿಂಜರಿಕೆಯಿಲ್ಲದೇ ಲಸಿಕೆ ಪಡೆಯಿರಿ : ಜಿಲ್ಲಾ ವೈದ್ಯಾಧಿಕಾರಿಯಿಂದ ಲಸಿಕೆ ಪಡೆಯದವರ ಮನವೊಲಿಕೆ
ಅನಕ್ಷರಸ್ತರಾಗಿದ್ದರೂ ಮತದಾನ ಮಾಡಲು ತಾನು ಸಮರ್ಥಳಿದ್ದೇನೆ ಎಂದು ಸದಸ್ಯೆ ಹೇಳಿದ್ದರೂ ಮತದಾನ ಮಾಡಲು ಇವರಿಗೆ ಸಹಾಯಕರ ಅಗತ್ಯವಿದೆ ಎಂದು ಪಿಡಿಒ ದೃಢೀಕರಿಸಿದ್ದರ ವಿರುದ್ಧ ಎಸ್.ಎಸ್.ಮಿತ್ತಲಕೋಡ ಅವರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಸುನಿಲಕುಮಾರ ಅವರು ರೇಣುಕಾ ಅವರು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿರುವ ಕಾರಣ ಜಿಲ್ಲಾಧಿಕಾರಿಗಳು ಸಸ್ಪೆಂಡ್ ಆದೇಶ ಹೊರಡಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆಯಲ್ಲಿ ಅನಕ್ಷರಸ್ತ, ಅಂಧ, ದುರ್ಬಲರಾಗಿರುವ ಸ್ಥಳೀಯ ಸಂಸ್ಥೆಗಳ ಸದಸ್ಯರಾದ ಮತದಾರರಿಗೆ ಮತದಾನದ ಸಂದರ್ಭದಲ್ಲಿ ಸಹಾಯಕರನ್ನು ಪಡೆಯಲು ಅವಕಾಶ ಇದೆ. ಹೀಗೆ ಮತದಾರರನ್ನು ಪಡೆಯಲು ಸದಸ್ಯರ ದುರ್ಬಲತೆ ಬಗ್ಗೆ ದೃಢೀಕರಿಸುವ ಹೊಣೆಯನ್ನು ಆಯಾ ಸ್ಥಳೀಯ ಸಂಸ್ಥೆಯ ಪಿಡಿಒ/ಮುಖ್ಯಾಧಿಕಾರಿಗಳಿಗೆ ಹೀಗೆ ಸರ್ಕಾರಿ ಮುಖ್ಯಸ್ಥ ಅಧಿಕಾರಿಗಳಿಗೆ ನೀಡಲಾಗಿದೆ.
ಈ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಬಿಜೆಪಿ ವಿಜಯಪುರ ಕ್ಷೇತ್ರದ ಅಭ್ಯರ್ಥಿ ಪಿ.ಎಚ್.ಪೂಜಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ರೇಣುಕಾ ರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.