ನವದೆಹಲಿ:ಅಲೋಪತಿ ವೈದ್ಯ ಪದ್ಧತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಯೋಗ ಗುರು, ಉದ್ಯಮಿ ಬಾಬಾ ರಾಮ್ ದೇವ್ ವಿರುದ್ಧ ದೇಶಾದ್ಯಂತ ದಾಖಲಾಗಿರುವ ಎಫ್ ಐಆರ್ ವಿರುದ್ಧ ಇದೀಗ ಬಾಬಾ ರಾಮ್ ದೇವ್, ವಿಚಾರಣೆ ತಡೆಹಿಡಿಯುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಇದನ್ನೂ ಓದಿ:ಭಾರತಕ್ಕೆ ಹಸ್ತಾಂತರ ಆದೇಶ: ನೀರವ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಬ್ರಿಟನ್ ಹೈಕೋರ್ಟ್
ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಪಾಟ್ನಾ ಮತ್ತು ರಾಯ್ ಪುರ ಶಾಖೆಗಳು ದಾಖಲಿಸಿದ್ದ ಎಫ್ ಐಆರ್ ಅನ್ನು ದೆಹಲಿಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಮನವಿಯಲ್ಲಿ ರಾಮ್ ದೇವ್ ಉಲ್ಲೇಖಿಸಿದ್ದಾರೆ.
ಕೋವಿಡ್ 19 ಚಿಕಿತ್ಸೆಯಲ್ಲಿ ಅಲೋಪತಿ ಪದ್ಧತಿ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಕಳೆದ ವಾರ ಛತ್ತೀಸ್ ಗಢ ಪೊಲೀಸರು ರಾಮ್ ದೇವ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಛತ್ತೀಸ್ ಗಢದ ಘಟಕ ನೀಡಿದ ದೂರಿನ ಆಧಾರದ ಮೇಲೆ ಬಾಬಾ ರಾಮ್ ದೇವ್ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಯ್ ಪುರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಯಾದವ್ ತಿಳಿಸಿದ್ದಾರೆ.