Advertisement

ಇಂದು ಯೋಗಗುರು ಬಾಬಾ ರಾಮದೇವ್‌ ಉಡುಪಿಗೆ

11:49 PM Nov 14, 2019 | mahesh |

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್‌ ಪ್ರದೇಶದಲ್ಲಿ ನ. 16ರಿಂದ 20ರ ವರೆಗೆ ನಡೆಯುವ ಐದು ದಿನಗಳ ಬೃಹತ್‌ ಯೋಗ ಚಿಕಿತ್ಸೆ ಮತ್ತು ಯೋಗ ಶಿಬಿರವನ್ನು ನಡೆಸಿಕೊಡುವ ಪ್ರಸಿದ್ಧ ಯೊಗಪಟು ಬಾಬಾ ರಾಮದೇವ್‌ ನ. 15ರ ಸಂಜೆ ಉಡುಪಿಗೆ ಆಗಮಿಸಲಿದ್ದಾರೆ.

Advertisement

ಮಂಗಳೂರಿಗೆ ವಿಮಾನದ ಮೂಲಕ ರಾಮದೇವ್‌ ಬರಲಿದ್ದಾರೆ. ಮಂಗಳೂರಿನಿಂದ ಉಡುಪಿಗೆ ರಸ್ತೆ ಮಾರ್ಗದಲ್ಲಿ ಬರುವ ರಾಮದೇವ್‌ ಅವರನ್ನು ಸಂಜೆ 5.30ಕ್ಕೆ ಕರಾವಳಿ ಬೈಪಾಸ್‌ ಬಳಿ ಸ್ವಾಗತಿಸಲಾಗುವುದು. ಕಲ್ಸಂಕದಿಂದ ಸುಮಾರು 5.45ಕ್ಕೆ ಬಡಗು ಪೇಟೆ ಮಾರ್ಗವಾಗಿ ಅವರನ್ನು ವೈಭವದ ಮೆರವಣಿಗೆಯಲ್ಲಿ ಶ್ರೀಕೃಷ್ಣ ಮಠಕ್ಕೆ ಕರೆತರಲಾಗುವುದು. ದೇವರ ದರ್ಶನ ಬಳಿಕ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಉಭಯ ಕುಶಲೋಪರಿ ನಡೆಸಲಿದ್ದಾರೆ.

ನ. 16ರಿಂದ 20ರ ವರೆಗೆ ಬೆಳಗ್ಗೆ 5ರಿಂದ 7.30 ಗಂಟೆಯ ವರೆಗೆ ಯೋಗ ಶಿಬಿರ ನಡೆಯಲಿದೆ. ಇದಕ್ಕಾಗಿ ಬೃಹತ್‌ ವೇದಿಕೆ ಮಂಗಳವಾರದಿಂದ ಸಿದ್ಧಗೊಳ್ಳುತ್ತಿದೆ. 20×40 ಉದ್ದಗಲದ 12 ಅಡಿ ಎತ್ತರದ ವೇದಿಕೆಯಲ್ಲಿ ಬಾಬಾ ರಾಮದೇವ್‌ ಅವರು ಮುಂಜಾನೆ ಯೋಗ ಭಂಗಿಗಳನ್ನು ಪ್ರದರ್ಶಿಸಲಿದ್ದಾರೆ.

ಎರಡು ಸಮಾವೇಶಗಳು
ನ. 18ರ ಸಂಜೆ 4.30ಕ್ಕೆ ವಿದ್ಯಾರ್ಥಿಗಳು, ಮಹಿಳೆಯರು, ಯುವವೃಂದವನ್ನುದ್ದೇಶಿಸಿ ನಡೆಯುವ ಸಮಾವೇಶದಲ್ಲಿ ರಾಮದೇವ್‌ ಮಾತನಾಡಲಿದ್ದಾರೆ. ನ. 19ರ ಸಂಜೆ 4ಕ್ಕೆ ರಾಜಾಂಗಣದಲ್ಲಿ ಸಂತ ಸಮ್ಮೇಳನ ನಡೆಯಲಿದ್ದು, ಕರಾವಳಿಯ ವಿವಿಧ ಮಠಾಧೀಶರು ಪಾಲ್ಗೊಳ್ಳುವರು. ಪೇಜಾವರ ಶ್ರೀಗಳು ಸಂತ ಸಮ್ಮೇಳನವಲ್ಲದೆ ಬೆಳಗ್ಗಿನ ಯೋಗ ಶಿಬಿರದಲ್ಲಿ ಯಾವುದಾದರೂ ಒಂದು ದಿನ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.

60 ತಜ್ಞರು, 300 ಕಾರ್ಯಕರ್ತರು
ರಾಮದೇವ್‌ ಅವರ ಈ ವಿಶೇಷ ಕಾರ್ಯಕ್ರಮಕ್ಕಾಗಿ ಹರಿದ್ವಾರದಿಂದ ವಿವಿಧ ಕ್ಷೇತ್ರಗಳ ಸುಮಾರು 60 ಜನರ ದಂಡು ಆಗಮಿಸಲಿದೆ. ಆಸ್ಥಾ ಟಿವಿ, ಸಂಗೀತಕಾರರು, ಸಿಆರ್‌ಪಿಎಫ್ ಮತ್ತು ಖಾಸಗಿ ಕಮಾಂಡೋಗಳು, ಆಯುರ್ವೇದ ವೈದ್ಯರು ಆಗಮಿಸಲಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ 300 ಕಾರ್ಯಕರ್ತರ ಪಡೆಯೂ ಆಗಮಿಸಲಿದೆ.

Advertisement

ವಿವಿಧ ಮಾಹಿತಿಗಳು
ಆಯುರ್ವೇದ ವೈದ್ಯರು ಇರುವ ಕೌಂಟರ್‌ ತೆರೆಯಲಾಗುತ್ತದೆ. ಪತಂಜಲಿ ಉತ್ಪನ್ನಗಳ ಮಳಿಗೆ, ಕಿಸಾನ್‌ ಸೇವಾ ಸಮಿತಿ ಮತ್ತು ಗೋ ತಳಿಗಳ ಕುರಿತಾದ ಕೌಂಟರ್‌, ಸಾವಯವ ಕೃಷಿಯ ಕೌಂಟರ್‌, ಯೋಗಮಯ ಉಡುಪಿ ಅಭಿಯಾನದ ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ. ಸಾರ್ವಜನಿಕರು ತಮಗೆ ಬೇಕಾದ ಮಾಹಿತಿಗಳನ್ನು ಇಲ್ಲಿ ಪಡೆದುಕೊಳ್ಳಬಹುದು. ಇದರಲ್ಲಿ ಆರೋಗ್ಯ ಕೌಂಟರ್‌ ಹೊರತುಪಡಿಸಿದರೆ ಉಳಿದ ಕೌಂಟರ್‌ಗಳು ಇರುವುದು ಬೆಳಗ್ಗಿನ ಯೋಗ ಶಿಬಿರ ನಡೆಯುವ ವೇಳೆ ಮಾತ್ರ.

ಬಸ್‌ ಸಂಚಾರ
ಐದು ದಿನವೂ ಬೆಳಗ್ಗೆ 4.30ರ ಹೊತ್ತಿಗೆ ಉಡುಪಿ ಆಸುಪಾಸಿನಿಂದ ಸಿಟಿ ಬಸ್‌ಗಳನ್ನು ಉಡುಪಿಗೆ ಸಂಚರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲೆಲ್ಲಿಂದ ಬಸ್‌ಗಳ ಸೇವೆ ಬೇಕು ಎಂದು ಮಾಹಿತಿ ನೀಡಲು ತಿಳಿಸಿದ್ದೇವೆ, ಸಮಿತಿಯವರು ಹೇಳಿದ ಕಡೆಯಿಂದ ಬಸ್‌ಗಳನ್ನು ಹೊರಡಿಸಲಿದ್ದೇವೆ ಎಂದು ಸಿಟಿ ಬಸ್‌ ಮಾಲಕರ ಸಂಘದ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದ್ದಾರೆ.

ಯೋಗ ಉಡುಗೆ
ನ. 16ರಿಂದ 20ರ ವರೆಗೆ ಬೆಳಗ್ಗೆ ನಡೆಯುವ ಶಿಬಿರದಲ್ಲಿ ಯೋಗಾಸನ ಮಾಡಲು ಅನುಕೂಲವಾಗುವಂತಹ ಉಡುಗೆಗಳನ್ನು ಧರಿಸಿ ಬರಬೇಕು. ಬಿಳಿ ಬಟ್ಟೆ ಉತ್ತಮ ಎಂದು ಸಂಘಟಕರು ತಿಳಿಸಿದ್ದಾರೆ.

ವಾಹನ ನಿಲುಗಡೆ ವ್ಯವಸ್ಥೆ
ಉಡುಪಿಯ ರಾಜಾಂಗಣ ಪಾರ್ಕಿಂಗ್‌ ಪ್ರದೇಶದಲ್ಲಿ ನ. 16ರಿಂದ 20ರ ವರೆಗೆ ನಡೆಯಲಿರುವ ಬಾಬಾ ರಾಮದೇವ್‌ ಅವರ ಬೃಹತ್‌ ಯೋಗ ಶಿಬಿರಕ್ಕೆ ಆಗಮಿಸುವ ನಾಗರಿಕರ ವಾಹನಗಳ ನಿಲುಗಡೆಯ ಬಗ್ಗೆ ಈ ಕೆಳಗಿನಂತೆ ವ್ಯವಸ್ಥೆ ಮಾಡಲಾಗಿದೆ.

– ಅಂಬಾಗಿಲು ಮತ್ತು ಕರಾವಳಿ ಬೈಪಾಸಿನಿಂದ ಬರುವ ದ್ವಿಚಕ್ರ ವಾಹನ ಮತ್ತು ಕಾರುಗಳನ್ನು ಬಡಗುಪೇಟೆ – ರಥಬೀದಿ – ಸೋದೆ ವಾದಿರಾಜ ಮಠ ಮಾರ್ಗವಾಗಿ ಬಂದು ಶ್ರೀಕೃಷ್ಣಮಠದ ಪೂರ್ವ ಭಾಗದ ಗೋಪುರದ ಮುಂಭಾಗದ ಮೈದಾನದಲ್ಲಿ (ಪಾರ್ಕಿಂಗ್‌ ಪ್ರದೇಶಕ್ಕೆ ತಾಗಿದ ಖಾಸಗಿ ಜಾಗ) ನಿಲ್ಲಿಸಬೇಕು.

– ಮಣಿಪಾಲದಿಂದ ಬರುವ ವಾಹನಗಳನ್ನು ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದ ಮಾರ್ಗವಾಗಿ ಬಂದು ಶಾರದಾ ನಗರದ ಬಳಿ ಬಲಕ್ಕೆ ತಿರುಗಿ ವಿದ್ಯೋದಯ ಶಾಲೆಯ (ಹೊಸ ಕ್ಯಾಂಪಸ್‌) ಆವರಣದಲ್ಲಿ ನಿಲ್ಲಿಸಬೇಕು. ಶಿಬಿರ ಮುಗಿದ ಬಳಿಕ ಅದೇ ಮಾರ್ಗದಲ್ಲಿ ಹಿಂದಿರುಗಬೇಕು.

– ವಿಐಪಿಗಳು ಮಾತ್ರ ತಮ್ಮ ವಾಹನಗಳನ್ನು ಕಲ್ಸಂಕದಿಂದ ರಾಜಾಂಗಣ ಪಾರ್ಕಿಂಗ್‌ ಪ್ರದೇಶ ರಸ್ತೆಯ ಬಲಭಾಗದಲ್ಲಿ ನಿಗದಿ ಪಡಿಸಿದ ಸ್ಥಳದಲ್ಲಿ ನಿಲ್ಲಿಸಬೇಕು.

– ಮಾಧ್ಯಮ ಮಿತ್ರರಿಗೆ ವಿಶೇಷ ಪಾಸ್‌ ವಿತರಿಸಲಾಗುತ್ತಿದ್ದು ಅವರು ವಾಹನಗಳನ್ನು ಕಲ್ಸಂಕ ಪಾರ್ಕಿಂಗ್‌ ಪ್ರದೇಶಕ್ಕೆ ಬರುವ ರಸ್ತೆಯ ಬಲಭಾಗದಲ್ಲಿ ವಿಐಪಿಗಳಿಗೆ ನಿಗದಿ ಪಡಿಸಲಾಗಿರುವ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆಗೊಳಿಸಬೇಕು.

ಶಿಬಿರ ಸಂಯೋಜಕರು ಮತ್ತು ನಗರ ಸಂಚಾರ ಠಾಣೆ ಪೊಲೀಸರೊಂದಿಗೆ ಸಹಕರಿಸಲು ವಿನಂತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next