ಬೆಂಗಳೂರು: ಚಂದನವನದ ಹಿರಿಯ ನಟ ಕೆ.ಶಿವರಾಮ್ ಅವರು ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ 71 ವರ್ಷದ ನಟ ಕೆ.ಶಿವರಾಮ್ ನಗರದ ಎಚ್.ಸಿ.ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ಆಗಿದೆ.
ವೃತ್ತಿಯಲ್ಲಿ ಐಎಎಸ್ ಅಧಿಕಾರಿಯಾಗಿದ್ದ ಕೆ ಶಿವರಾಮ್ ಅವರು, ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲ ಕನ್ನಡಿಗರಾಗಿ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದರು. ಐಎಎಸ್ ವೃತ್ತಿ ಜೀವನದಲ್ಲಿ ಅವರು, ವಿಜಯಪುರ, ಬೆಂಗಳೂರು, ಮೈಸೂರು, ಕೊಪ್ಪಳ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಸೇವೆಯನ್ನು ಸಲ್ಲಿಸಿದ್ದರು.
ʼಬಾ ನಲ್ಲೆ ಮಧುಚಂದ್ರಕೆʼ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶವನ್ನು ಪಡೆದ ಅವರು, ನಂತರ ʼವಸಂತ ಕಾವ್ಯʼ ಸಿನಿಮಾದಲ್ಲಿ ಕಾಣಿಸಿಕೊಂಡು ಸಾಂʼಗ್ಲಿಯಾನ 3ʼ ಸಿನಿಮಾದಲ್ಲಿ ಖಳ ನಾಯಕ ಕಾಣಿಸಿಕೊಂಡಿದ್ದರು.
ಸಿನಿಮಾರಂಗ ಮಾತ್ರವಲ್ಲದೆ ಅವರು ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದರು. 2013 ರಲ್ಲಿ ನಿವೃತ್ತಿಯ ನಂತರ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದರು. 2014 ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತರು. ನಂತರ ಅದೇ ವರ್ಷ ದಲಿತರಿಗೆ ಸಿ.ಎಂ ಪಟ್ಟ ಸಿಗಬೇಕೆಂದು ಪರಮೇಶ್ವರ್ ಬೆಂಬಲಿಸಿ ಕಾಂಗ್ರೆಸ್ ಸೇರಿದರು. ಆದರೆ ಕಾಂಗ್ರೆಸ್ ನಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಬಿಜೆಪಿ ಸೇರಿದರು. ಛಲವಾದಿ ಮಹಸಭಾ ಅಧ್ಯಕ್ಷರಾಗಿದ್ದರು. ದಲಿತ ಪರ ಹೋರಾಟಕ್ಕೆ ಹೆಸರುವಾಸಿಯಾಗಿದ್ದರು.