ಮಣಿಪಾಲ್ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ (ಮಾಹೆ) ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಅನೇಕ ಹೊಸ ವೈಶಿಷ್ಟ್ಯಗಳೊಂದಿಗೆ ಈ ಶೈಕ್ಷಣಿಕ ವರ್ಷದಿಂದ ‘ಬಿಎ ಇನ್ ಎಸ್ಥೆಟಿಕ್ಸ್ ಆಂಡ್ ಪೀಸ್ ಸ್ಟಡೀಸ್’ ಅನ್ನು ಪ್ರಾರಂಭಿಸಿದೆ. ಈ ನೂತನ ಕಾರ್ಯಕ್ರಮವು ಆನರ್ಸ್ ಪದವಿಯ ಸಾಧ್ಯತೆಯೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿ -2020 ಗೆ ಅನುಗುಣವಾಗಿದೆ.
ಹೆಚ್ಚು ಚರ್ಚಿಸಲ್ಪಡುತ್ತಿರುವ ಅಂತರಶಿಸ್ತೀಯ ಶಿಕ್ಷಣದೊಂದಿಗೆ, ‘ಬಿಎ ಇನ್ ಎಸ್ಥೆಟಿಕ್ಸ್ ಆಂಡ್ ಪೀಸ್ ಸ್ಟಡೀಸ್’ ತನ್ನ ವಿಶಾಲ ಚೌಕಟ್ಟಿನಲ್ಲಿ ಕಲೆ ಮತ್ತು ಸಮಾಜ ಶಾಸ್ತ್ರದ ಅಧ್ಯಯನವನ್ನು ಒಟ್ಟಿಗೆ ತರಲು ಉದ್ದೇಶಿಸಿದೆ. ಸಾಹಿತ್ಯ, ಕಲೆ ಮತ್ತು ಮಾಧ್ಯಮಗಳ ಕಲಿಕೆಯು ಇಲ್ಲಿ ರಾಜಕೀಯ ಶಾಸ್ತ್ರ, ಅಂತರರಾಷ್ಟ್ರೀಯ ಸಂಬಂಧಗಳು, ತತ್ವಶಾಸ್ತ್ರ ಗಳ ಅಧ್ಯಯನದ ಜೊತೆಗೆ ಸಾಧ್ಯವಾಗಲಿದೆ.
‘ಸೃಜನಶೀಲ / ಕಲಾ ಸಮರ್ಥ್ಯ ಮತ್ತು ಬೌದ್ಧಿಕ ಕುಶಾಗ್ರಮತಿ’ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಅರ್ಥಪೂರ್ಣ ವೃತ್ತಿ ಸಾಧ್ಯತೆಗಳನ್ನು ಒದಗಿಸುವುದು ಇದರ ಉದ್ದೇಶ. ಪತ್ರಿಕೋದ್ಯೋಗ, ಮಾಧ್ಯಮ, ಸಂವಹನ, ಸಾಮಾಜಿಕ ವಲಯ, ಅಂತರರಾಷ್ಟ್ರೀಯ ಸಂಸ್ಥೆಗಳು, ಸಂಶೋಧನೆ ಮತ್ತು ಪ್ರಕಾಶನ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುವಂತೆ ವಿದ್ಯಾರ್ಥಿಗಳು ಕಲಾತ್ಮಕ, ಬೌದ್ಧಿಕ ಮತ್ತು ಸಂವಹನ ಸಾಮರ್ಥ್ಯಗಳನ್ನು ಬೆಳೆಯಿಸಿಕೊಳ್ಳುವಂತೆ ಸಿದ್ಧಗೊಳಿಸಲಾಗುವುದು ಎಂದು ಜಿಸಿಪಿಎಎಸ್ ನಿರ್ದೇಶಕರಾದ ಪ್ರೊ. ವರದೇಶ್ ಹಿರೇಗಂಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಿಎ (ಎಸ್ಥೆಟಿಕ್ಸ್ ಆಂಡ್ ಪೀಸ್ ಸ್ಟಡೀಸ್) ಕಾರ್ಯಕ್ರಮದಲ್ಲಿ ನಿರ್ಗಮನ ವರ್ಷಗಳ ಆಯ್ಕೆ ಇದ್ದು, ವಿದ್ಯಾರ್ಥಿಗಳು ಮೂರು ವರ್ಷಗಳ ಕಾಲ ಅಧ್ಯಯನ ಮಾಡಿ ಸಾಮಾನ್ಯ ಪದವಿ ಪಡೆಯುವ, ನಾಲ್ಕು ವರ್ಷಗಳ ಕಾಲ ಅಧ್ಯಯನ ಮಾಡಿ ಆನರ್ಸ್ ಪದವಿ ಪಡೆಯುವ, ಎರಡು ವರ್ಷಗಳ ಕಾಲ ಅಧ್ಯಯನ ಮಾಡಿ ಡಿಪ್ಲೊಮಾ, ಒಂದು ವರ್ಷ ಅಧ್ಯಯನ ಮಾಡಿ ಪ್ರಮಾಣಪತ್ರ ಪಡೆಯುವ ಅವಕಾಶಗಳಿವೆ. ಆನರ್ಸ್ ಪದವಿಯಲ್ಲಿ ಸಂಶೋಧನೆಯು ಅವಿಭಾಜ್ಯ ಅಂಗವಾಗಿರುವುದರಿಂದ ಇದು ವಿಭಿನ್ನ ಮತ್ತು ಜಾಗತಿಕ ಮಾನದಂಡಗಳಿಗೆ ಸಮನಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ, ಎಕೋಸೊಫಿಕಲ್ ಎಸ್ಥೆಟಿಕ್ಸ್ ಮತ್ತು ಆರ್ಟ್ ಆಂಡ್ ಪೀಸ್ ಸ್ಟಡೀಸ್‌ನಲ್ಲಿ ಎರಡು ನೂತನ ಬಗೆಯ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಪ್ರಾರಂಭಿಸಿರುವ ಜಿಸಿಪಿಎಎಸ್, ಇದೇ ದಾರಿಯಲ್ಲಿ ವೈವಿಧ್ಯಮಯ ಕಲಾತ್ಮಕ ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ,ಈ ಹೊಸ ಪದವಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. “ಇದು ಜಗತ್ತಿನ ಹೊಸ ಬದಲಾವಣೆ; ಇಂತಹ ಅನೇಕ ಆಸಕ್ತಿಗಳನ್ನು ಹೊಂದಿರುವ ವಿದ್ಯಾರ್ಥಿಗಳನ್ನು ನಾವು ನೋಡುತ್ತೇವೆ; ಆ ಬಗೆಯ ತಮ್ಮ ಆಸಕ್ತಿಯನ್ನೇ ವೃತ್ತಿಯನ್ನಾಗಿಸಿಕೊಳ್ಳಲು ಉದ್ದೇಶಿಸುವ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶವನ್ನು ಸೃಷ್ಟಿಸುವ ಪ್ರಯತ್ನ ಇದಾಗಿದೆ” ಎಂದು ಅವರು ಹೇಳಿದ್ದಾರೆ.
ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮತ್ತು ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಎಂ.ಡಿ. ವೆಂಕಟೇಶ್ ಅವರು ತಮ್ಮ ಇತ್ತೀಚಿನ ಮಾತಿನಲ್ಲಿ, ಹೊಸ ಪದವಿ ಕಾರ್ಯಕ್ರಮದಲ್ಲಿನ ಅಂತರಶಿಸ್ತೀಯ ಕಲಿಕೆಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿ, ಇದು ಕಲೆ / ಮಾನವಿಕ ಶಾಸ್ತ್ರ ಮತ್ತು ಸಾಮಾಜ ಶಾಸ್ತ್ರಗಳ ಅಧ್ಯಯನವನ್ನು ಪ್ರೋತ್ಸಾಹಿಸುವ ಮಾಹೆಯ ಬದ್ಧತೆಗೆ ಅನುಗುಣವಾಗಿದೆ ಎಂದು ನುಡಿದಿದ್ದಾರೆ.
ಪದವಿ ಮತ್ತು ಸ್ನಾತಕ್ಕೋತ್ತರ ಕಾರ್ಯಕ್ರಮದ ವಿವರಗಳನ್ನು ಈ ಲಿಂಕ್‌ನಿಂದ ಪಡೆಯಬಹುದಾಗಿದೆ.
https://manipal.edu/gandhian-centre.html