Advertisement

ಕುತೂಹಲ ಮೂಡಿಸಿದ ವಿಜಯೇಂದ್ರ ನಡೆ ?

12:35 AM Nov 23, 2020 | mahesh |

ಬೆಂಗಳೂರು: ಸಂಪುಟ ಕಸರತ್ತು ನಡೆಯುತ್ತಿರುವಾಗಲೇ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ದಿಢೀರ್‌ ದಿಲ್ಲಿ ಭೇಟಿ ಕುತೂಹಲ ಮೂಡಿಸಿದೆ. ರವಿವಾರ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿದ್ದ ವಿಜಯೇಂದ್ರ, ದಿಲ್ಲಿಗೆ ತೆರಳುವ ಮಾಹಿತಿ ನೀಡಿದ್ದರು. ಆ ಬಳಿಕ ಅವರು ದಿಲ್ಲಿಗೆ ತೆರಳಿ ವಾಪಸಾಗಿದ್ದಾರೆ ಎನ್ನಲಾಗಿದ್ದು, ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Advertisement

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ದಿಲ್ಲಿಗೆ ಭೇಟಿ ನೀಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಂಬಂಧ ಪ್ರಸ್ತಾವಿಸಿದ್ದರು. ಆದರೆ, ವರಿಷ್ಠರಿಂದ ಯಾವುದೇ ರೀತಿಯಲ್ಲೂ ಹಸುರು ನಿಶಾನೆ ಸಿಕ್ಕಿರಲಿಲ್ಲ. ಶುಕ್ರವಾರ ನೀರಾವರಿ ಸಚಿವ ರಮೇಶ್‌ ಜಾರಕಿಹೊಳಿಯವರು ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

ಸೋಮಣ್ಣ-ಸಿಎಂ ಭೇಟಿ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವ ಸಚಿವ ವಿ. ಸೋಮಣ್ಣ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾ ಚಾರ್ಯ ಕೂಡ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಚಿವಾಕಾಂಕ್ಷಿಗಳು ಈಗಾಗಲೇ ಲಾಬಿ ಆರಂಭಿಸಿದ್ದು, ಮೂಲ ಬಿಜೆಪಿಗರಲ್ಲಿ ಕೆಲವರು ಸಚಿವ ಸ್ಥಾನಕ್ಕಾಗಿ ಪದೇ ಪದೆ ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತಿದ್ದಾರೆ ಮತ್ತು ಸಂಪುಟದಲ್ಲಿರುವ ಕೆಲವರನ್ನು ಕೈಬಿಡಬೇಕು ಎಂಬ ಆಗ್ರಹವನ್ನು ಮಾಡುತ್ತಿದ್ದಾರೆ. ಹಾಗೆಯೇ ಸಚಿವರಲ್ಲಿ ಕೆಲವರು ಸಚಿವ ಸ್ಥಾನ ಉಳಿಸಿಕೊಳ್ಳುವುದಕ್ಕಾಗಿಯೂ ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಉಪಚುನಾವಣೆ ಬಗ್ಗೆ ಚರ್ಚೆ
ಕೆಲವೇ ದಿನದಲ್ಲಿ ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರವಿವಾರ ಬಿಎಸ್‌ವೈ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇತ್ತೀಚಿಗಷ್ಟೇ ಮಸ್ಕಿ ಹಾಗೂ ಬಸವಕಲ್ಯಾಣಕ್ಕೆ ಪ್ರವಾಸ ಬೆಳೆಸಿದ್ದ ವಿಜಯೇಂದ್ರ ಅವರು ಅಲ್ಲಿನ ಪರಿಸ್ಥಿತಿ, ರಾಜಕೀಯ ಲೆಕ್ಕಚಾರಗಳ ಮಾಹಿತಿಯನ್ನು ಯಡಿಯೂರಪ್ಪ ಅವರಿಗೆ ನೀಡಿದ್ದಾರೆ. ಅಭ್ಯರ್ಥಿ ಆಯ್ಕೆಯ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಹಾಗೂ ವರಿಷ್ಠರಿಗೆ ಬಿಟ್ಟ ವಿಚಾರ. ಕೆಲವು ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಪ್ರಸ್ತಾವ ಮಾಡಿದ್ದೇವೆ. ಶಾಸಕರ ಭಾವನೆಗಳನ್ನು ಪಕ್ಷದ ರಾಜ್ಯಾಧ್ಯಕ್ಷರು, ಸಿಎಂ ಹಾಗೂ ಬಿ.ಎಲ್‌.ಸಂತೋಷ್‌ ಅವರ ಗಮನಕ್ಕೆ ತಂದಿದ್ದೇವೆ.
-ಎಂ.ಪಿ.ರೇಣುಕಾಚಾರ್ಯ, ಶಾಸಕ

Advertisement
Advertisement

Udayavani is now on Telegram. Click here to join our channel and stay updated with the latest news.

Next