ರಾಯಚೂರು: ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೆರಳು ಮಾಡದೆ ಮೊದಲು ರೈತರಿಗೆ ಬರ ಪರಿಹಾರ ನೀಡಲಿ. ಹಿಂದೆ ಬಿ.ಎಸ್.ಯಡಿಯೂರಪ್ಪ ಕೆಂದ್ರದ ಅನುದಾನಕ್ಕೆ ಕಾಯದೆ ಬರಪರಿಹಾರ ಕೊಟ್ಟಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ನಗರದಲ್ಲಿ ರವಿವಾರ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್ ನವರು ಯಾಕೆ ಕೇಂದ್ರದ ಕಡೆ ಬೆಟ್ಟು ಮಾಡಿ ತೋರಿಸುತ್ತಾರೆ. ನೀವು ಕೊಡಬೇಕಾದ ಪರಿಹಾರವನ್ನು ಮೊದಲು ಕೊಡಿ. ದೇಶದಲ್ಲಿ ಅನೇಕ ರಾಜ್ಯಗಳಿವೆ. ಕೇಂದ್ರ ಸರ್ಕಾರ ಸೂಕ್ತ ತೀರ್ಮಾನ ಮಾಡಿ ಪರಿಹಾರ ನೀಡುತ್ತದೆ. ರಾಜ್ಯ ಸರ್ಕಾರ ಯಾಕೆ ತನ್ನ ಹೊಣೆಗಾರಿಕೆಯಿಂದ ನುಣಚಿಕೊಳ್ಳುತ್ತಿದೆ. ಬರ ಅಧ್ಯಯನ ಮಾಡಿ, ಸಭೆ ನಡೆಸಿದರೂ ಪರಿಹಾರ ಕೊಡುವ ಕೆಲಸ ಮಾಡುತ್ತಿಲ್ಲ. ತನ್ನ ಜವಾಬ್ದಾರಿ ಅರಿತು ನಡೆದುಕೊಳ್ಳಲಿ. ಬೇಡವೆಂದರೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಹುಡುಗಾಟಿಕೆ ಮಾಡದೆ ರೈತರ ಬರಪರಿಹಾರ ಬಿಡುಗಡೆ ಮಾಡಬೇಕು. ಈಗಾಗಲೇ ರಾಜ್ಯ ಸರ್ಕಾರದ ಬಗ್ಗೆ ಜನರಿಗೆ ಕೆಟ್ಟ ಅಭಿಪ್ರಾಯ ಮೂಡಿದ್ದು, ರೈತ ವಿರೋಧಿ, ಬಡವರ ವಿರೋದಿ ಸರ್ಕಾರ ಎನ್ನುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಬಂದು 8 ತಿಂಗಳಾಗಿದ್ದು, ಭರವಸೆಗಳೆಲ್ಲ ಈಡೇರಿವೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಯಾವ ಯೋಜನೆಗಳು ಜನರಿಗೆ ತಲುಪಿಲ್ಲ. ಜಾಹಿರಾತು ಕೊಟ್ಟು ಪ್ರಚಾರ ಮಾಡಿ ಜನರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ದೂರಿದರು.
ಜನರ ನಿರೀಕ್ಷೆ ಸುಳ್ಳಾಗಿವೆ. ರಾಜ್ಯ ಸರ್ಕಾರ 5 -6 ತಿಂಗಳಲ್ಲಿ ಜನಪ್ರಿಯತೆ ಕಳೆದುಕೊಂಡಿದೆ. ಉಚಿತ ಬಸ್ ಅಂತಾರೆ. ಶಾಲಾ ಮಕ್ಕಳಿಗೆ ಬಸ್ ಸಿಗುತ್ತಿಲ್ಲ. ಕೆಎಸ್ ಆರ್ ಟಿಸಿ ನೌಕರರಿಗೆ ಸಂಬಳ ಕೊಡುತ್ತಿಲ್ಲ. ಒಂದು ಕೆ.ಜಿ ಅಕ್ಕಿಯನ್ನೂ ಕೊಡಲು ಇವರಿಗೆ ಆಗಿಲ್ಲ. ಯುವನಿಧಿ ಗೆ ಕೇವಲ 65 ಸಾವಿರ ನೋಂದಣಿ ಆಗಿದೆ. ಪ್ರತೀ ಗ್ಯಾರೆಂಟಿಯಲ್ಲೂ ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲು ಕಿಂಚಿತ್ತು ಯೋಚನೆ ಮಾಡಲ್ಲ. ಹಿಂದೂಗಳ ವಿರುದ್ಧ ಕೂಡಲೆ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಕಾನೂನು ವ್ಯವಸ್ಥೆ ಹದಗೆಡಿಸುವ ಕೆಲಸ ನೀವೇ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಅದಕ್ಕೂ ಮುನ್ನ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಬಿ.ವೈ.ವಿಜಯೇಂದ್ರ ದರ್ಶನ ಪಡೆದರು. ಈ ವೇಳೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವದಿಸಿದರು.