Advertisement

BJP ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ: ನಳಿನ್‌

12:20 AM Nov 11, 2023 | Team Udayavani |
ಮಂಗಳೂರು: ಕಳೆದ ಎರಡು ಅವಧಿಯಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯವನ್ನು ವಿಸ್ತಾರ ಮಾಡಿ, ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ, ಅತ್ಯುತ್ತಮ ಸಂಘಟಕರಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯ ಅಧ್ಯಕ್ಷರನ್ನಾಗಿ ಮಾಡಿರುವುದು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಹುರುಪು ಮೂಡಿಸಿದೆ. ಅವರ ಜತೆ ಕೆಲಸ ಮಾಡಿ ಪಕ್ಷವನ್ನು ಸಂಘಟನೆ ಮಾಡುತ್ತೇನೆ ಎಂದು ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಶುಕ್ರವಾರ ಮಂಗಳೂರಿನಲ್ಲಿ ಅವರು ಮಾತನಾಡಿ, ನೂತನ ಅಧ್ಯಕ್ಷರಾಗಿ ನೇಮಕಗೊಂಡ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ವಿಚಾರಗಳ ವಿರುದ್ಧದ ಹೋರಾಟವನ್ನು ಕೈಗೆತ್ತಿಕೊಂಡು, ಮತ್ತೆ ಪಕ್ಷವನ್ನು ಸಂಘಟಿಸುವ ಶಕ್ತಿ ವಿಜಯೇಂದ್ರ ಅವರಲ್ಲಿದೆ. ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಎಲ್ಲ ಪ್ರಯತ್ನಗಳು ನಡೆಯಲಿವೆ ಎಂದರು.

Advertisement

ರಾಜ್ಯಾಧ್ಯಕ್ಷ ಹುದ್ದೆ ತೃಪ್ತಿ ತಂದಿದೆ
ನಾಲ್ಕೂವರೆ ವರ್ಷಗಳ ಕಾಲ ರಾಜ್ಯದ ಅಧ್ಯಕ್ಷನಾಗಿ ಎರಡು ಅವಧಿ ಪೂರ್ತಿ ಕೆಲಸ ಮಾಡುವ ಅವಕಾಶವನ್ನು ಪಕ್ಷದ ಹಿರಿಯರು ನೀಡಿದ್ದಾರೆ. ಮತಗಟ್ಟೆಯ ಪೇಜ್‌ ಪ್ರಮುಖರವರೆಗೆ ಪಕ್ಷವನ್ನು ಸಂಘಟನೆ ಮಾಡುವ ಕಾರ್ಯ ಯಶಸ್ವಿಯಾಗಿ ಮಾಡಿದ್ದೇನೆ. ರಾಜ್ಯದಲ್ಲಿ ಪ್ರವಾಸ ಮಾಡಿ, ಶಕ್ತಿ ಮೀರಿ ಪಕ್ಷ ಕಟ್ಟುವ ಪ್ರಯತ್ನ ಮಾಡಿದ್ದೇನೆ ಎನ್ನುವ ತೃಪ್ತಿ ಇದೆ. ಬಿ.ಎಸ್‌.ಯಡಿಯೂರಪ್ಪ, ಈಶ್ವರಪ್ಪ, ಸದಾನಂದ ಗೌಡ, ಪ್ರಹ್ಲಾದ ಜೋಶಿ ಸೇರಿದಂತೆ ಎಲ್ಲ ಹಿರಿಯರ ಮಾರ್ಗದರ್ಶನದಿಂದ ಪೂರ್ಣ ಸಹಕಾರದಿಂದ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ ಎಂದರು.

ಆಡಳಿತ ವೈಫಲ್ಯ, ಮೋದಿ
ಅಲೆಯ ಲಾಭ
ವಿಜಯೇಂದ್ರ ಅವರಲ್ಲಿ ಸಂಘಟನೆ ಮಾಡುವ ಶಕ್ತಿ ಇದೆ. ಯುವಕರಲ್ಲಿಯೂ ವಿಜಯೇಂದ್ರ ಬಗ್ಗೆ ಒಳ್ಳೆಯ ಅಭಿಪ್ರಾಯೂ ಇದೆ. ಹೊಸ ಉತ್ಸಾಹದಿಂದ ಕಾರ್ಯ ಕರ್ತರು ಕೆಲಸ ಮಾಡಲಿದ್ದಾರೆ. ಕಾಂಗ್ರೆಸ್‌ನ ವೈಫಲ್ಯ, ರಾಜ್ಯದಲ್ಲಿರುವ ಮೋದಿ ಅಲೆಯ ಲಾಭವನ್ನು ಮುಂದಿನ ಲೋಕಸಭಾ ಚುನಾಚಣೆಯಲ್ಲಿ ವಿಜಯೇಂದ್ರ ಅವರು ಪಡೆಯಲಿದ್ದಾರೆ. 28ರಲ್ಲಿ 28 ಸ್ಥಾನವನ್ನು ಗೆಲ್ಲಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ವಿಜಯೇಂದ್ರ ಅವರ ಜತೆ ಸೇರಿ ಈ ಕೆಲಸ ಮಾಡುತ್ತೇನೆ ಎಂದರು.

ಪಕ್ಷ ಹೇಳಿದ ಜವಾಬ್ದಾರಿ
ನಿರ್ವಹಣೆ: ನಳಿನ್‌
ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಆಕಾಂಕ್ಷಿಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷ ಏನು ಹೇಳುತ್ತದೋ ಅದನ್ನು ಮಾಡುವುದಷ್ಟೇ ನಮ್ಮ ಕೆಲಸ. ಪಕ್ಷದ ಕಟ್ಟಾಳುವಾಗಿ ಕೊಟ್ಟ ಜವಾಬ್ದಾರಿಯನ್ನು ನಿರ್ವಹಣೆ ಮಾಡುವುದಷ್ಟೇ ನನ್ನ ಕೆಲಸ ಎಂದರು.

ವಿಜಯೇಂದ್ರ ಆಯ್ಕೆಗೆ ಉಭಯ ಜಿಲ್ಲಾ ಬಿಜೆಪಿ ಹರ್ಷ
ಉಡುಪಿ/ಮಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಶಾಸಕ ಬಿ.ವೈ. ವಿಜಯೇಂದ್ರರವರು ನೇಮಕ ಗೊಂಡಿರುವುದಕ್ಕೆ ದ.ಕ. ಮತ್ತು ಉಡುಪಿ ಜಿಲ್ಲಾ ಬಿಜೆಪಿ ಹರ್ಷ ವ್ಯಕ್ತಪಡಿಸಿದೆ. ವಿಜಯೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯಾದ್ಯಂತ ಇನ್ನಷ್ಟು ಸದೃಢವಾಗಿ ಬೆಳೆದು ಲೋಕಸಭಾ ಚುನಾವಣೆ ಸಹಿತ ಎಲ್ಲ ಚುನಾವಣೆಗಳಲ್ಲಿ ಜಯ ದಾಖಲಿಸಲಿದೆ ಎಂದು ಜಿಲ್ಲಾಧ್ಯಕ್ಷರಾದ ಸುದರ್ಶನ್‌ ಮೂಡುಬಿದಿರೆ ಮತ್ತು ಕುಯಿಲಾಡಿ ಸುರೇಶ್‌ ನಾಯಕ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ಶಾಸಕರಾದ ರಾಜೇಶ್‌ ನಾಯ್ಕ, ಹರೀಶ್‌ ಪೂಂಜ ಬೆಂಗಳೂರಿಗೆ ತೆರಳಿ ವಿಜಯೇಂದ್ರ ಅವರನ್ನು ಅಭಿನಂದಿಸಿ ದರು. ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಕಿರಣ್‌ ಕೊಡ್ಗಿ, ಗುರುರಾಜ ಗಂಟಿಹೊಳೆ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕರಾದ ರಘುಪತಿ ಭಟ್‌, ಲಾಲಾಜಿ ಮೆಂಡನ್‌ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next