Advertisement

ನಾರಿ ಶಕ್ತಿ ದೇಶದ ಶಕ್ತಿ: ತೀರ್ಥಹಳ್ಳಿಯಲ್ಲಿ ಬಿ. ವೈ. ರಾಘವೇಂದ್ರ ಹೇಳಿಕೆ

06:50 PM Mar 30, 2024 | Team Udayavani |

ತೀರ್ಥಹಳ್ಳಿ : ಮಹಾತ್ಮ ಗಾಂಧೀಜಿ ಅವರು ಗ್ರಾಮಗಳು ವಿಕಾಸವಾಗಬೇಕಾದರೆ ದೇಶವು ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಇಡಬೇಕಾದರೆ “ಮಹಿಳಾ ಶಕ್ತಿ” ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕನಸನ್ನು ಕಂಡಿದ್ದರು. ಸ್ವಾತಂತ್ರ್ಯದ ನಂತರ ಆರಿಸಿ ಬಂದಂತಹ ಯಾವುದೇ ಸರ್ಕಾರಗಳು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡಿರಲಿಲ್ಲ. ಆದರೆ ಮಹಿಳಾ ವಲಯದ ಸಬಲೀಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.

Advertisement

ಶನಿವಾರ ತಾಲೂಕಿನ ಆರಗ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷ ತೀರ್ಥಹಳ್ಳಿ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ “ಮಹಿಳಾ ಸಮಾವೇಶ” ದಲ್ಲಿ ಭಾಗಿಯಾಗಿ ಮಾತನಾಡಿ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿದ್ದ ಸಮಯದಲ್ಲಿ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಆದ್ಯತೆ ನೀಡುವ ಸಲುವಾಗಿ ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ “ಉಚಿತ ಸೈಕಲ್” ನೀಡಿದ್ದರು. ಇನ್ನು ಒಂದು ಹೆಜ್ಜೆ ಮುಂದೆ ನಿಂತು ಹೆಣ್ಣು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಆಲೋಚಿಸಿ “ಭಾಗ್ಯಲಕ್ಷ್ಮಿ” ಎಂಬ ದೂರದೃಷ್ಟಿಯ ಯೋಜನೆ ನೀಡಿದ್ದು ಮಹತ್ತರ ಮೈಲಿಗಲ್ಲಾಗಿತ್ತು ಎಂದರು.

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಹೆಣ್ಣು ಮಕ್ಕಳ ಆರ್ಥಿಕ ಉನ್ನತಿಕರಣಕ್ಕೆ ದೇಶದ ಆಡಳಿತದ ಇತಿಹಾಸದಲ್ಲಿ ದಾಖಲಾಗುವಂತ ಜನ – ಧನ ಯೋಜನೆ, ಭೇಟಿ ಬಾಚವೋ – ಭೇಟಿ ಪಡಾವೋ ಯೋಜನೆ, ಉಜ್ವಲ ಯೋಜನೆ, ಮಾತೃ ವಂದನಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಇನ್ನೂ ಅನೇಕ ಐತಿಹಾಸಿಕ ಯೋಜನೆಗಳು ಜಾರಿಗೆ ತಂದು ಮಹಿಳಾ ವಲಯಕ್ಕೆ ಹೆಚ್ಚಿನ ಬಲ ಕೊಟ್ಟಿದ್ದು, ಇದು ಹೆಣ್ಣುಮಕ್ಕಳ ಅಭಿವೃದ್ಧಿಗೆ ಭವಿಷ್ಯದ ಗ್ಯಾರಂಟಿ ಯೋಜನೆಗಳಾಗಿದೆ ಎಂದರು.

ಈಗಾಗಲೇ ದೇಶವು ಸರ್ವತೋಮುಖ ಅಭಿವೃದ್ಧಿಯೊಂದಿಗೆ ಆರ್ಥಿಕ ಬಲಿಷ್ಠತೆ ಮೂಲಕ “ವಿಶ್ವಗುರು” ಸ್ಥಾನವನ್ನು ಅಲಂಕರಿಸುವತ್ತ ದಾಪುಗಾಲು ಇಟ್ಟಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಕೈಯನ್ನು ಬಲ ಪಡಿಸಲು ಹಾಗೂ “ವಿಕಸಿತ ಭಾರತ” ನಿರ್ಮಾಣ ಮಾಡಲು ಹೆಚ್ಚಿನ ಶಕ್ತಿ ತುಂಬಲು ಜೊತೆಗೆ ನನ್ನ ಲೋಕಸಭಾ ಅವಧಿಯಲ್ಲಿ ನಡೆದಿರುವ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಂಜುಳಾ, ಗಾಯತ್ರಿ ಮಲ್ಲಪ್ಪ, ಯಶೋಧ, ನವೀನ್ ಹೆದ್ದೂರು ಅವರು ಸೇರಿದಂತೆ ಬೂತ್, ಶಕ್ತಿಕೇಂದ್ರ ಹಾಗೂ ಮಹಾಶಕ್ತಿಕೇಂದ್ರ ಅಧ್ಯಕ್ಷರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ: BJP ಪಕ್ಷದಲ್ಲಿ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ನಂಬಿಕೆ ಇಲ್ಲ:ತೇಜಸ್ವಿನಿ ಗೌಡ

Advertisement

Udayavani is now on Telegram. Click here to join our channel and stay updated with the latest news.

Next