ಶಿವಮೊಗ್ಗ: ಹೈಕಮಾಂಡ್ ಸೂಚಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬ ಬಿ ಎಸ್ ಯಡಿಯೂರಪ್ಪ ಅವರ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಯಡಿಯೂರಪ್ಪ ಪರ- ವಿರೋಧಿ ಬಣದಲ್ಲಿ ಹೊಸ ಚಟುವಟಿಕೆಗಳಿಗೆ ಕಾರಣವಾಗಿದೆ.
ಸಿಎಂ ಹೇಳಿಕೆ ಬಗ್ಗೆ ಹಲವು ನಾಯಕರು ಹಲವು ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೀಗ ಸಂಸದರೂ ಆಗಿರುವ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಪ್ರತ್ರಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ರಾಜೀನಾಮೆ ನೀಡಲು ಯಡಿಯೂರಪ್ಪಗೆ ಆರ್ ಎಸ್ಎಸ್ ಮನವೊಲಿಸಿದೆ: ವಿಶ್ವನಾಥ್
“ಸಿಎಂ ಸ್ಥಾನ ನೀಡಿರುವುದು ಸಂಘಟನೆ. ಹೈಕಮಾಂಡ್ ಗೆ ನನ್ನ ಬಗ್ಗೆ ಎಲ್ಲಿಯವರೆಗೆ ವಿಶ್ವಾಸವಿರುತ್ತದೆಯೋ ಅಲ್ಲಿಯವರೆಗೆ ಸಿಎಂ ಸ್ಥಾನದಲ್ಲಿರುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಹೈಕಮಾಂಡ್ ಆದೇಶಕ್ಕೆ ತಲೆಬಾಗುತ್ತೇನೆ ಎಂದು ಸಿಎಂ ಹೇಳಿದ್ದಾರೆ. ನಮ್ಮ ಸಂಘಟನೆ ಪ್ರತಿಯೊಬ್ಬರಿಗೂ ದೇಶ, ಪಕ್ಷ ಮೊದಲು ಎಂದು ಹೇಳಿಕೊಟ್ಟಿದೆ. ಸಂಘಟನೆಯ ಚೌಕಟ್ಟಿನಲ್ಲಿ ಸೀಮಿತವಾಗಿ ಸಿಎಂ ಹೇಳಿಕೆ ನೀಡಿರಬಹುದು. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಮ್ಮ ಪಕ್ಷದ ಮೂಲ ಸಿದ್ದಾಂತದಂತೆ ಸಿಎಂ ಹೇಳಿಕೆ ನೀಡಿದ್ದಾರೆ. ಸಿಎಂ ಬದಲಾವಣೆ ಸಾಧ್ಯತೆ ಇಲ್ಲ” ಎಂದು ರಾಘವೇಂದ್ರ ಹೇಳಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಿಎಂ ಹಾಗೂ ಸಚಿವರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ಕುಟುಂಬ ಎಂದರೆ ಭಿನ್ನಮತ ಇದ್ದೇ ಇರುತ್ತದೆ. ಅದೇ ರೀತಿ ನಮ್ಮಲ್ಲೂ ಸಣ್ಣಪುಟ್ಟ ಭಿನ್ನಮತ ಇರಬಹುದು. ಯಡಿಯೂರಪ್ಪ ನೇತೃತ್ವದಲ್ಲಿ ಒಳ್ಳೆಯ ಕೆಲಸವಾಗುತ್ತಿದೆ. ನಮ್ಮ ಪಕ್ಷ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದೆ. ಹಾಗಾಗಿ ಪಕ್ಷ ಹೇಳಿದಂತೆ ಕೇಳುತ್ತೇನೆ ಎಂದು ಸಿಎಂ ಹೇಳಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಯಾವಾಗ ಕೇಳುತ್ತಾರೋ ಆಗ ರಾಜೀನಾಮೆ ಕೊಟ್ಟು ಹೋಗುತ್ತೇನೆ: ನಾಯಕತ್ವ ಬದಲಾವಣೆ ವಿಚಾರಕ್ಕೆ ಸಿಎಂ