ಗದಗ : ಕಾಂಗ್ರೆಸ್ ನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಮಧ್ಯೆ ಪೈಪೋಟಿ ರಾಜಕಾರಣ ನಡೆಯುತ್ತಿದ್ದು, ಕೆಜಿಎಫ್ ಚಾಪ್ಟರ್1, ಚಾಪ್ಟರ್ 2ರ ಮಾದರಿಯಲ್ಲಿ ರಾಕಿ ವರ್ಸಸ್ ರಾಕಿ ಫೈಟ್ ಜೋರಾಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಲೇವಡಿ ಮಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರು ಸಾಮೂಹಿಕ ನಾಯಕತ್ವ ಎಂದು ಹೇಳುತ್ತಿದ್ದರೆ, ಮತ್ತೊಬ್ಬರು ಶಕ್ತಿ ಪ್ರದರ್ಶನ ಎನ್ನುತ್ತಿದ್ದಾರೆ, ಮತ್ತೆ ಕೆಲವರು ಸಿದ್ದರಾಮ ಉತ್ಸವ ಮಾಡುತ್ತೇನೆ ಅಂತಿದ್ದಾರೆ. ಬಹುಶಃ ಇಂತಹ ರಾಜಕೀಯ ಪಕ್ಷಗಳಿಗೆ ರಾಷ್ಟ್ರ ಹಾಗೂ ರಾಜ್ಯದಲ್ಲಿ ಉತ್ತಮ ಭವಿಷ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ಇಬ್ಬರು ನಾಯಕರು ಹೋರಾಟ ಮಾಡುತ್ತಿದ್ದಾರೆ, ಆದರೆ, ಭಾರತೀಯ ಜನತಾ ಪಕ್ಷ ಇರುವವರೆಗೆ ಆ ಕುರ್ಚಿಯಂತೂ ಸಿಗೋದಿಲ್ಲ. ಅವರು ಹಗಲು ಕನಸು ಕಾಣುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸಕಾರವು ಅಭಿವೃದ್ಧಿ ಹಾಗೂ ಪ್ರಗತಿ ಪರ ಕೆಲಸ ಮಾಡುತ್ತಿದ್ದಾರೆ. ಎಲ್ಲ ಸಚಿವರು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 2023ರ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಬಸವರಾಜ ಬೊಮ್ಮಾಯಿ ಅವರೆ ಮತ್ತೆ ಸಿಎಂ ಆಗಿ ಮುಂದುವರಿಲಿದ್ದಾರೆ ಎಂದರು.
ಇದನ್ನೂ ಓದಿ : ಜುಲೈ 8ರವರೆಗೂ ಮುಂಬೈನಲ್ಲಿ ಧಾರಾಕಾರ ಮಳೆ, ತಗ್ಗು ಪ್ರದೇಶ ಜಲಾವೃತ; NDRF ರವಾನೆ
ರಾಜ್ಯಾದ್ಯಂತ ವಿವಿಧೆಡೆ ಎಸಿಬಿ ದಾಳಿ ನಡೆಯುತ್ತಿರುವುದು ಹೊಸತೇನಲ್ಲ. ಅದರಂತೆ ಶಾಸಕ ಜಮೀರ ಅಹ್ಮದ್ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿರುವುದು ಸಹಜ ಪ್ರಕ್ರಿಯೆ. ಇದರಲ್ಲೇನು ವಿಶೇಷತೆ ಇಲ್ಲ. ಅಧಿಕಾರಿಗಳು ತಮ್ಮ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆೆ ನಡೆಸಿದ ವೇಳೆ ದೇಶಾದ್ಯಂತ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿ ಬಿಜೆಪಿ ಮೇಲೆ ಆರೋಪಗಳ ಮಳೆ ಸುರಿಸಿದರು. ಇಂತಹ ಆರೋಪಗಳು ವಿರೋಧ ಪಕ್ಷಗಳಿಗೆ ಶೋಭೆ ತರುವಂತಹುದಲ್ಲ ಎಂದು ಹೇಳಿದರು.
ಪಿಎಸ್‌ಐ ಅಕ್ರಮ ನೇಮಕಾತಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸ್ವತಃ ಮುತುವರ್ಜಿ ವಹಿಸಿ ಪ್ರಕರಣಗಳನ್ನು ತನಿಖೆ ನಡೆಸಿ ಬಯಲಿಗೆಳೆದು ಅಪರಾಧಿಗಳನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಿದ್ದಾರೆ. ಅಕ್ರಮಕ್ಕೆ ಅವಕಾಶವಿಲ್ಲ. ಇದರಲ್ಲಿ ಎಷ್ಟೆ ಪ್ರಭಾವಿಗಳಿದ್ದರೂ ಕೈಬಿಡುವ ಮಾತೇ ಇಲ್ಲ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.