ಬೆಂಗಳೂರು: ಕೆಲವು ತಿಂಗಳುಗಳಿಂದ ನಡೆದ ನಡೆದ ನಾಯಕತ್ವ ಬದಲಾವಣೆ ಚರ್ಚೆಗೆ ಕೊನೆಗೂ ತೆರೆ ಬಿದ್ದಿದೆ. ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನಿರ್ಧರಿಸಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದ ಬಿ.ಎಸ್.ಯಡಿಯೂರಪ್ಪ ಇಂದು ರಾಜೀನಾಮೆ ನೀಡಿ, ಬಿಜೆಪಿಯಲ್ಲಿ ಹೊಸ ಶಕೆಗೆ ನಾಂದಿ ಹಾಡಿದ್ದಾರೆ.
ಸಾಧನಾ ಸಮಾವೇಶದಲ್ಲಿ ಭಾಷಣ ಮಾಡಿದ ಬಿಎಸ್ ವೈ, ಇಂದು ಮಧ್ಯಾಹ್ನ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತೇನೆ ಎಂದರು. ಯಾವುದೇ ದುಖಃ ವಿಲ್ಲದೆ ಸಂತೋಷದಿಂದ ರಾಜೀನಾಮೆ ನೀಡುತ್ತೇನೆ. 75 ವರ್ಷ ದಾಟಿದ ಮೇಲೂ ನನಗೆ ಅವಕಾಶ ನೀಡಿದ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾಗೆ ಶಬ್ದಗಳಲ್ಲಿ ಧನ್ಯವಾದ ಹೇಳಲು ಸಾಧ್ಯವಿಲ್ಲ ಎಂದರು.
ಶಿಕಾರಿಪುರಿಂದ ಬಿಜೆಪಿಯೊಂದಿಗೆ ನಾನು ಬಂದಿದ್ದೇನೆ. ಶಿಕಾರಿಪುರದಲ್ಲಿ ಸಂಘದ ಪ್ರಚಾರಕನಾಗಿ ಕಾರ್ಯ ನಿರ್ವಹಿಸಿ, ಚುನಾವಣೆಯಲ್ಲಿ ಗೆದ್ದು, ಘಟಕದ ಅಧ್ಯಕ್ಷನಾಗಿ, ವಿಧಾನಸಭಾ ವಿಪಕ್ಷ ನಾಯಕನಾಗಿ, ಮುಖ್ಯಮಂತ್ರಿಯಾಗಿ ಪಕ್ಷದ ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸ ಮಾಡಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ ಎಂಬ ತೃಪ್ತಿ ನನಗಿದೆ ಎಂದು ಬಿಎಸ್ ವೈ ಭಾವುಕರಾಗಿ ನುಡಿದರು.
ಇದನ್ನೂ ಓದಿ:ಭಾವುಕರಾಗಿಯೇ ಭಾಷಣ ಆರಂಭಿಸಿದ ಬಿ ಎಸ್ ವೈ ..!
ರಾಜ್ಯದ ಉದ್ದಗಲಕ್ಕೂ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಪಕ್ಷ ಸಂಘಟನೆ ಮಾಡಿದ್ದೇನೆ, ಬೈಸಿಕಲ್ ನಲ್ಲಿ ಓಡಾಡಿದೆ. ಅಧಿಕಾರಕ್ಕೆ ಬಂದ ಎಲ್ಲಾ ಸಂದರ್ಭದಲ್ಲೂ ನನಗೆ ಅಗ್ನಿಪರೀಕ್ಷೆ ಎದುರಾಗಿದೆ. ಪ್ರವಾಹದಲ್ಲಿ ಹುಚ್ಚನಂತೆ ಎಲ್ಲಾ ಕಡೆ ಸುತ್ತಿದೆ ಎಂದರು.
ಇಂದು ಸಂಜೆ 4 ಗಂಟೆಗೆ ರಾಜಭವನಕ್ಕೆ ಸಿಎಂ ಯಡಿಯೂರಪ್ಪ ಆಗಮಿಸಿ ರಾಜ್ಯಪಾಲರ ಭೇಟಿ ಮಾಡಿ ರಾಜೀನಾಮೆ ನೀಡಲಿದ್ದಾರೆ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷವನ್ನು ಅಧಿಕಾರ ತಂದ ಕೀರ್ತಿ ಯಡಿಯೂರಪ್ಪನವರದು. 2007, 2008, 2018 ಮತ್ತು 2019ರಲ್ಲಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಗಾದಿಗೆ ಏರಿದ್ದರು. ಕರ್ನಾಟಕದಲ್ಲಿ ನಾಲ್ಕು ಬಾರಿ ಸಿಎಂ ಕುರ್ಚಿಗೆ ಏರಿದ ಏಕೈಕ ವ್ಯಕ್ತಿ ಬಿ.ಎಸ್.ಯಡಿಯೂರಪ್ಪ.