Advertisement

ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡಿದ ರಾಜಾಹುಲಿ..: BSY ನಿರ್ಧಾರದ ಹಿಂದಿನ ಲೆಕ್ಕಾಚಾರವೇನು?

03:34 PM Jul 22, 2022 | Team Udayavani |

ಬೆಂಗಳೂರು: ಕರ್ನಾಟಕ ಬಿಜೆಪಿಯ ಭೀಷ್ಮ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ತಮ್ಮ‌ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಬಿಟ್ಟುಕೊಡುತ್ತೇನೆ ಎಂದು ಕೊನೆಗೂ ಘೋಷಣೆ ಮಾಡಿದ್ದಾರೆ. ಇದೊಂದು ರೀತಿಯಲ್ಲಿ ಸ್ವಯಂ‌‌ ನಿವೃತ್ತಿಯ ದಾಖಲೆ ಪತ್ರಕ್ಕೆ ಕೊನೆಯ ಸಹಿಯಂತಾಗಿದ್ದು, ಸಕ್ರಿಯ ರಾಜಕಾರಣದಿಂದ ಹೋರಾಟ ಜೀವಿ ವಿಶ್ರಾಂತಿ ಪಡೆಯುವುದು ನಿಶ್ಚಿತವಾದಂತಾಗಿದೆ.

Advertisement

‘’ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂಬ ಹೆಸರಿನವನಾದ ನಾನು…’’ ಎಂಬ ಸಾಲಿನೊಂದಿಗೆ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪ ಕಳೆದ ವರ್ಷ ಮುಖ್ಯಮಂತ್ರಿ ಸ್ಥಾನದಿಂದ ವಿರಮಿಸಿದಾಗಲೇ ಅವರು ರಾಜಕೀಯವಾಗಿ ತೆರೆಗೆ ಸರಿಯುವುದು ಬಹುತೇಕ ನಿಶ್ಚಿತವಾಗಿತ್ತು. ಆದರೆ ತಮ್ಮ ಪುತ್ರ ವಿಜಯೇಂದ್ರ ಅವರನ್ನು ರಾಜಕೀಯದ ದಡ ಹತ್ತಿಸಲೇಬೇಕೆಂದು ಪಣ ತೊಟ್ಟಿದ್ದ ಯಡಿಯೂರಪ್ಪ ಅವರಿಗೆ ಬಹುಶಃ ಈಗ ವರಿಷ್ಠರಿಂದ ನಿಖರ ಭರವಸೆ ಸಿಕ್ಕಂತೆ ಕಾಣುತ್ತಿದೆ. ಹೀಗಾಗಿ ಶಿಕಾರಿಪುರ ಕ್ಷೇತ್ರದಿಂದ ವಿಜಯೇಂದ್ರ ಮುಂದಿನ ಬಾರಿ ಸ್ಪರ್ಧಿಸುತ್ತಾರೆಂದು ಘೋಷಿಸಿದ್ದು, ತಾವು ಸ್ಪರ್ಧೆಯಿಂದ ‌ಹಿಂದೆ ಸರಿಯುತ್ತಿರುವುದನ್ನು ದೃಢಪಡಿಸಿದ್ದಾರೆ.

ಇದರೊಂದಿಗೆ ರಾಜ್ಯ ಕಂಡ ಹೋರಾಟಗಾರರೊಬ್ಬರು ತುಂಬು ರಾಜಕಾರಣ ನಡೆಸಿ ಬದುಕಿನ ಸಂಧ್ಯಾ ಕಾಲದಲ್ಲಿ ವಿರಮಿಸುತ್ತಿದ್ದಾರೆ.

ಹಸಿರು ನಿಶಾನೆ: ಪುತ್ರ ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಸಬೇಕೆಂದು ಯಡಿಯೂರಪ್ಪ ಪ್ರಯತ್ನ ನಡೆಸುತ್ತಲೇ ಇದ್ದರು. ಕೋರ್ ಕಮಿಟಿ ಸಭೆಯಲ್ಲಿ ಅವರ ಹೆಸರನ್ನು ಅಂಗೀಕರಿಸಿ ಕಳುಹಿಸಿದ್ದರೂ ವರಿಷ್ಠರು ನಿರಾಕರಿಸಿದ್ದರು. ಆದರೆ ಇದಕ್ಕಿದ್ದಂತೆ ಈ ಘೋಷಣೆ ಮಾಡಿದ್ದರ ಹಿಂದೆ ವರಿಷ್ಠರ ಒಪ್ಪಿಗೆ ಇದ್ದಿರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.

Advertisement

ಯಡಿಯೂರಪ್ಪ ಅವರನ್ನು ಬಿಟ್ಟು ಚುನಾವಣೆ ಎದುರಿಸುವುದಕ್ಕೆ ಸದ್ಯಕ್ಕೆ ಬಿಜೆಪಿ ಸಿದ್ದರಿಲ್ಲ. ಹೀಗಾಗಿ ಒಪ್ಪಿಗೆ ಲಭಿಸಿದೆ ಎಂದು ಹೇಳಲಾಗುತ್ತಿದೆ. ಒಂದು ಮೂಲದ ಪ್ರಕಾರ ವಿಜಯೇಂದ್ರ ಅವರನ್ನು ಮುಂದಿನ‌ ತಿಂಗಳು ನಡೆಯುವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವರನ್ನಾಗಿ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.

ಬಿಜೆಪಿಗೆ ಲಾಭ: ವಿಜಯೇಂದ್ರ ರಾಜಕೀಯ‌ ಪ್ರವೇಶದ ಬಗ್ಗೆ ಬಿಜೆಪಿಯ ಕೆಲ ಮುಖಂಡರಿಗೆ ಆಸಕ್ತಿ ಇಲ್ಲವಾದರೂ ಅವರಿಂದ ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಅನುಕೂಲ ಜಾಸ್ತಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next