Advertisement

ಶಿಕಾರಿಗೆ ವಿಜಯೇಂದ್ರ: ಇದು ರಾಜಕೀಯ ಲೆಕ್ಕಾಚಾರದ ನಡೆ

02:10 AM Jul 23, 2022 | Team Udayavani |

ಬೆಂಗಳೂರು: ಐದು ದಶಕಗಳ ಕಾಲ ಚುನಾವಣ ರಾಜಕೀಯದಲ್ಲಿ ಅಪರೂಪದ ಛಾಪು ಒತ್ತಿರುವ ಬಿ.ಎಸ್‌. ಯಡಿಯೂರಪ್ಪ ದಿಢೀರ್‌ ಆಗಿ ಪುತ್ರ ವಿಜಯೇಂದ್ರ ಅವರಿಗೆ ಶಿಕಾರಿಪುರ ಕ್ಷೇತ್ರವನ್ನು ಬಿಟ್ಟುಕೊಡುತ್ತಿರುವುದರ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳು ಇವೆ.

Advertisement

ಯಡಿಯೂರಪ್ಪ ಜನಸಂಘದಿಂದ ತೊಡಗಿ ರಾಜ್ಯದಲ್ಲಿ ಬಿಜೆಪಿ ಬೇರುಗಳು ಗಟ್ಟಿಯಾಗಿ ನೆಲೆಯೂರಲು ಅರ್ಧ ಶತಮಾನ ನಿರಂತರ ಹೋರಾಡಿದವರು. ಪಕ್ಷವನ್ನು ಅಧಿಕಾರದ ಗದ್ದುಗೆ ಏರುವ ಮಟ್ಟಕ್ಕೆ ತಂದು ನಿಲ್ಲಿಸುವಲ್ಲಿ ಮಹತ್ವದ ಪಾತ್ರ ಅವರದು.

ಚುನಾವಣೆಯ ಹೊಸ್ತಿಲಿನಲ್ಲಿ ಚುನಾವಣ ರಾಜಕೀಯಕ್ಕೆ ಅವರ ವಿದಾಯ ಕುತೂಹಲ ಕೆರಳಿಸಿದೆ.

ಪಕ್ಷ ಮತ್ತು ತಮ್ಮ ನಡುವಣ ಆಂತರಿಕ ಸಂಘರ್ಷವನ್ನು ಬಹಿರಂಗಗೊಳಿಸದೆ, ಅವೆಲ್ಲವನ್ನು ನುಂಗಿ ವಿಷಕಂಠನಂತೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಮಂತ್ರ ಪಠಿಸು ತ್ತಿರುವುದರ ಹಿಂದಿರಬಹುದಾದ ರಾಜಕೀಯ ಲೆಕ್ಕಾಚಾರ ಗಳನ್ನು ಅಷ್ಟು ಸುಲಭವಾಗಿ ಬಿಡಿಸುವುದು ಸಾಧ್ಯವಿಲ್ಲ.

ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ರಾಜಕೀಯವಾಗಿ ನೆಲೆ ಕಲ್ಪಿಸಬೇಕು ಎಂಬ ಹಂಬಲದಿಂದ ಯಡಿಯೂರಪ್ಪ ಅವರು 2018ರ ಚುನಾವಣೆಯಲ್ಲಿಯೇ ಅವರನ್ನು ಮೈಸೂರಿನ ವರುಣಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಲು ಕಸರತ್ತು ನಡೆಸಿದ್ದರು.

Advertisement

ಆಗಿನ ರಾಜಕೀಯ ಲೆಕ್ಕಾಚಾರ ವ್ಯತ್ಯಾಸವಾದರೂ ಯಡಿಯೂರಪ್ಪ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಇದಕ್ಕೆ ತಕ್ಕನಾಗಿ ವಿಜಯೇಂದ್ರ ಅವರು ಯಡಿಯೂರಪ್ಪ ಅವರಿಗೆ ಪ್ರತೀ ಹೆಜ್ಜೆಯಲ್ಲಿಯೂ ಬೆನ್ನೆಲುಬಾಗಿ ನಿಲ್ಲುವ ಮೂಲಕ ತಾವೇ ಅವರ ಉತ್ತರಾಧಿಕಾರಿ ಎನ್ನುವುದನ್ನು ಸಾಬೀತು ಪಡಿಸುತ್ತಲೇ ಬಂದರು.

ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕವೂ ಪುತ್ರನಿಗೆ ವಿಧಾನ ಪರಿಷತ್‌ ಸ್ಥಾನ ಕೊಡಿಸಲು ನಡೆಸಿದ ಕಸರತ್ತು ವಿಫ‌ಲವಾಗಿತ್ತು. ಆಗಲೂ ಅವರು ಪಕ್ಷದ ನಾಯಕತ್ವದ ವಿರುದ್ಧ ಇದ್ದ ಮುನಿಸನ್ನು ಬಹಿರಂಗ ಪಡಿಸದೆ ಮೌನಿಯಾಗಿಯೇ ಉಳಿದರು. ಈಗ ಪುತ್ರನಿಗೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿಯಲು ಸಾಕಷ್ಟು ಬೇಡಿಕೆ ಇದ್ದರೂ ತಮ್ಮದೇ ಕ್ಷೇತ್ರವನ್ನು ಅವರಿಗೆ ಬಿಟ್ಟುಕೊಡುವ ನಿರ್ಧಾರ ಮಾಡಿದ್ದಾರೆ.

ಗೌರವದ ನಿರ್ಧಾರ
ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ಈ ನಿರ್ಧಾರ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರಾದರೂ ಆ ಸಂದರ್ಭದಲ್ಲಿ ಅವರ ಮೇಲಿದ್ದ ಒತ್ತಡಗಳು ಅವರ ಮುಖದಲ್ಲಿ ಪ್ರತಿಫ‌ಲಿಸುತ್ತಿದ್ದವು.

ಬಿಜೆಪಿಯಲ್ಲಿ 75 ವರ್ಷಕ್ಕೆ ಚುನಾವಣ ರಾಜಕೀಯ ದಿಂದ ನಿವೃತ್ತಿ ಎಂಬ ಅಲಿಖಿತ ನಿಯಮ ಇದ್ದರೂ ಆ ಬಳಿಕವೂ ಯಡಿಯೂರಪ್ಪ ಅವರಿಗೆ ಬಿಜೆಪಿ ಅವಕಾಶ ಕಲ್ಪಿಸಿತ್ತು. ಅದು ಯಡಿಯೂರಪ್ಪ ಅವರ ಅನುಕೂಲಕ್ಕಿಂತ ಹೆಚ್ಚಾಗಿ ಬಿಜೆಪಿಗೆ ಅವರ ಅಗತ್ಯ ಇತ್ತು ಎನ್ನುವುದು 2013ರ ವಿಧಾನಸಭಾ ಚುನಾವಣ ಫ‌ಲಿತಾಂಶದಿಂದ ಸಾಬೀತಾಗಿತ್ತು.

ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೂ ಪಕ್ಷದ ವರಿಷ್ಠರು ಮತ್ತು ಬಿಎಸ್‌ವೈ ವಿಜಯೇಂದ್ರ ಅವರ ಸ್ಥಾನಮಾನಕ್ಕಾಗಿ ಆಂತರಿಕ ತಿಕ್ಕಾಟ ಚಾಲ್ತಿಯಲ್ಲಿದೆ. ವಿಜಯೇಂದ್ರ ಅವರ ಬಗ್ಗೆ ವರಿಷ್ಠರ ನಿಲುವು ಸಕಾರಾತ್ಮಕವಾಗಿಲ್ಲ ಎನ್ನುವ ಮಾತುಗಳಿದ್ದವು. ಇದೇ ಕಾರಣದಿಂದ ವಿಜಯೇಂದ್ರ ಕ್ಷೇತ್ರ ಆಯ್ಕೆ ವಿಚಾರವಾಗಿ ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದಂತಿದ್ದರು. ಇದೆಲ್ಲವನ್ನೂ ಗಂಭೀರ ಆಲೋಚನೆಗೆ ಒಳಪಡಿಸಿಯೇ ಯಡಿಯೂರಪ್ಪ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಡುವ ಮೂಲಕ ಪುತ್ರನಿಗೆ ರಾಜಕೀಯ ಭದ್ರ ನೆಲೆ ಕಲ್ಪಿಸಲು ವೇದಿಕೆ ಸೃಷ್ಟಿಸಿದ್ದಾರೆ. ಜತೆಗೆ ಜತೆಗೆ ತಾವು ಚುನಾವಣ ರಾಜಕೀಯಕ್ಕೆ ಗೌರವಯುತ ವಿದಾಯ ಹೇಳಿದ್ದಾರೆ.

ಆಪ್ತರಲ್ಲಿ ಗೊಂದಲ
ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲದೆ ಅಧಿಕಾರದಿಂದ ವಂಚಿತರಾಗಿದ್ದ ಯಡಿಯೂರಪ್ಪ ಅವರು ಜೆಡಿಎಸ್‌, ಕಾಂಗ್ರೆಸ್‌ನಿಂದ ಶಾಸಕರನ್ನು ಕರೆತಂದು ಸರಕಾರ ರಚನೆ ಮಾಡಿದ್ದರು. ಈಗ ಅವರ ದಿಢೀರ್‌ ನಿರ್ಧಾರ ವಲಸಿಗರಷ್ಟೇ ಅಲ್ಲದೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕರಲ್ಲೂ ಅಚ್ಚರಿ ಮತ್ತು ಆತಂಕಕ್ಕೆ ಕಾರಣವಾಗಿದ್ದು, ಮುಂದಿನ ಚುನಾವಣೆಯ ಸಂದರ್ಭ ತಮ್ಮ ಜತೆಗೆ ಯಾರು ನಿಲ್ಲುತ್ತಾರೆ ಎಂಬ ಕಳವಳದಲ್ಲಿದ್ದಾರೆ.

ಬಿಜೆಪಿಗೂ ಅಗ್ನಿಪರೀಕ್ಷೆ
ಯಡಿಯೂರಪ್ಪ ಅವರ ನಿರ್ಧಾರ ಬಿಜೆಪಿಗೂ ಅಗ್ನಿಪರೀಕ್ಷೆಯೇ ಆಗಲಿದೆ. ದಕ್ಷಿಣ ಭಾರತ, ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಬಿಜೆಪಿಯ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದಿದ್ದರೆ ವ್ಯತಿರಿಕ್ತ ಪರಿಣಾಮ ಉಂಟಾಗುವುದನ್ನು ತಿಳಿಯದವರೇನೂ ಅಲ್ಲ.
2013ರಲ್ಲಿ ಯಡಿಯೂರಪ್ಪ ಬಿಜೆಪಿಯಿಂದ ದೂರವಾದಾಗ ಪಕ್ಷದ ಸ್ಥಿತಿ ಏನಾಗಿತ್ತು ಎನ್ನುವ ಅರಿವು ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಇರುವುದರಿಂದ ಬಿಎಸ್‌ವೈ ಅವರು ಚುನಾವಣ ರಾಜಕೀಯಕ್ಕೆ ವಿದಾಯ ಹೇಳಿದರೂ ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿರುವುದರಿಂದ ಅವರನ್ನು ಗೌರವಯುತವಾಗಿ ನಡೆಸಿಕೊಂಡು ಹೋಗುವ ಅನಿವಾರ್ಯ ಬಿಜೆಪಿಗಿದೆ.

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next