Advertisement

ಸಾಲ ಮನ್ನಾ ಕದನ:ಬಿಎಸ್‌ವೈ-ಎಚ್‌ಡಿಕೆ ಜಗಳ್ಬಂದಿ

06:00 AM Jul 04, 2018 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ
ಎಚ್‌.ಡಿ. ಕುಮಾರಸ್ವಾಮಿ ಅವರ ಜಗಳ ವಿಧಾನಸಭೆಯಲ್ಲೂ ಮುಂದುವರಿದಿದ್ದು, ಇಬ್ಬರಿಗೂ ಸ್ಪೀಕರ್‌ ರಮೇಶ್‌ ಕುಮಾರ್‌ ಬುದ್ಧಿವಾದ ಹೇಳಿದ ಪ್ರಸಂಗವೂ ಮಂಗಳವಾರ ನಡೆಯಿತು.

Advertisement

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಯಡಿಯೂರಪ್ಪ ಅವರು ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ ಬಗ್ಗೆ ಟೀಕೆಗಳ ಸುರಿಮಳೆಗೈದರು. ಮೊದಲು ಮುಖ್ಯಮಂತ್ರಿ ಕುಮಾರಸ್ವಾಮಿ ಮೌನವಾಗಿದ್ದರು. ಆದರೆ ಯಾವಾಗ ರೈತರು ಖಾಸಗಿಯವರಿಂದ ಪಡೆದ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಯಡಿಯೂರಪ್ಪ ಹೇಳಿದರೋ ಆಕ್ರೋಶಗೊಂಡ ಕುಮಾರಸ್ವಾಮಿ, ನಾನು ಆ ರೀತಿ ಹೇಳಿಯೇ ಇಲ್ಲ. ಸದನಕ್ಕೆ ಸುಳ್ಳು ಮಾಹಿತಿ ಕೊಡಬೇಡಿ ಎಂದು ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಧರ್ಮಸ್ಥಳಕ್ಕೆ ಹೋದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ಖಾಸಗಿಯವರಿಂದ ಪಡೆದ ಸಾಲ ಮನ್ನಾ ಮಾಡುವುದಾಗಿ ನೀವು ಹೇಳಿದ್ದೀರಿ ಎಂದು ಯಡಿಯೂರಪ್ಪ ಹೇಳಿದಾಗ, ಖಾಸಗಿಯವರಿಂದ ಮೀಟರ್‌ ಬಡ್ಡಿ ಆಧಾರದ ಮೇಲೆ ರೈತರು ಸಾಲ ಪಡೆದಿದ್ದು, ಆ ಬಗ್ಗೆಯೂ ಚಿಂತನೆ ನಡೆದಿದೆ ಎಂದಷ್ಟೇ ಹೇಳಿದ್ದೆ. ನಾನು ಖಾಸಗಿಯ ವರಿಂದ ರೈತರು ಮಾಡಿದ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರೆ ಅದಕ್ಕೆ ದಾಖಲೆಗಳನ್ನು ಕೊಡಿ. ಸದನಕ್ಕೆ ಸುಳ್ಳು ಮಾಹಿತಿ ನೀಡಬೇಡಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು. ಅಲ್ಲದೆ, ನಾನೇನೂ ನೈತಿಕತೆ ಕಳೆದುಕೊಂಡು ಈ ಸ್ಥಾನದಲ್ಲಿ ಕುಳಿತಿಲ್ಲ. ಉತ್ತರ ಕೊಡುವಾಗ ನಿಮ್ಮೆಲ್ಲ ಟೀಕೆಗಳಿಗೆ ಸರಿಯಾಗಿಯೇ ಪ್ರತಿಕ್ರಿಯಿಸುತ್ತೇನೆ ಎಂದರು.

ಮಾತು ಮುಂದುವರಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿ ದ್ದಾಗ ನೀವು ಎಷ್ಟರ ಮಟ್ಟಿಗೆ ಮಾತು ಉಳಿಸಿಕೊಂಡಿದ್ದೀರಿ ಎಂದು ನನಗೂ ಗೊತ್ತಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಚುನಾವಣೆ ಸಂದರ್ಭದಲ್ಲಿ ವೋಟ್‌ ಹಾಕಲು ಜನರಿಗೆ ಭರವಸೆ ನೀಡುತ್ತೇವೆ. ಎಲ್ಲವನ್ನೂ ಈಡೇರಿಸಲು ಸಾಧ್ಯವೇ ಎಂದು ಹೇಳಿದ್ದೀರಿ. ಅಂಥವರು ನನಗೆ ಬುದ್ಧಿ ಹೇಳಲು ಬರಬೇಡಿ ಎಂದು ಯಡಿಯೂರಪ್ಪ ಅವರಿಗೆ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಾನು ಉಪ ಮುಖ್ಯ ಮಂತ್ರಿಯಾಗಿದ್ದಾಗ ಏನೇನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನೆಲ್ಲ ಇಲ್ಲಿ  ಹೇಳಬಾರದು ಎಂದು ಸುಮ್ಮನಿದ್ದೇನೆ. ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಸಾಲ ಮನ್ನಾ ನಿರ್ಧಾರ ಕೈಗೊಂಡಿದ್ದೇ ನಾನು ಮಧ್ಯ ಪ್ರವೇಶಿಸಿದ ಸ್ಪೀಕರ್‌ ರಮೇಶ್‌ಕುಮಾರ್‌, ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ್ದನ್ನು ಇಲ್ಲಿ ಹೇಳುವುದು ಸರಿಯಲ್ಲ ಎಂದರು. ಈಗಾಗಲೇ ಬಹಿರಂಗವಾಗಿರುವುದನ್ನು ಹೇಳುವುದು ತಪ್ಪಲ್ಲ ಎಂದು ಕುಮಾರಸ್ವಾಮಿ ಸಮಜಾಯಿಷಿ ನೀಡಿದರು.

Advertisement

ನಾನು ರೈತರ ಸಾಲ ಮನ್ನಾ ಮಾಡಿದಾಗ ನಿಮ್ಮ ತಂದೆ ಮನೆಗೆ ಕರೆಸಿ, ಈ ನಿರ್ಧಾರ ಕೈಗೊಳ್ಳಲು ಯಾರು ಹೇಳಿದರು? ಹಣ ಎಲ್ಲಿಂದ ಹೊಂದಿಸುತ್ತೀರಿ ಎಂದು ವಿರೋಧ ವ್ಯಕ್ತಪಡಿಸಿದ್ದು ಮರೆತಿರಾ ಮುಖ್ಯಮಂತ್ರಿಗಳೇ ಎಂದು ಯಡಿಯೂರಪ್ಪ, ಪ್ರಶ್ನೆ ಮಾಡಿದರು. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ವಿರುದ್ಧ ನೀಡಿದ್ದ ಹೇಳಿಕೆಗಳನ್ನು ಸದನದಲ್ಲಿ ಪ್ರಸ್ತಾವಿಸಿದರು.

ಸಚಿವ ಎಚ್‌.ಡಿ. ರೇವಣ್ಣ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಬಲಕ್ಕೆ ನಿಂತಾಗ ಅವರ ಮಾತನ್ನು ಅರ್ಧಕ್ಕೆ ತಡೆದ ಸ್ಪೀಕರ್‌ ರಮೇಶ್‌ಕುಮಾರ್‌, ಸಮಾಜದಲ್ಲಿ ರಾಜಕಾರಣಿಗಳು ಮೂದಲಿಕೆಗೆ ಒಳಗಾಗುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಹೇಳಿದ್ದನ್ನೆಲ್ಲ ಈಗ ಪ್ರಸ್ತಾವಿಸಿ ಇವರಿಗೆ (ಮಾಧ್ಯಮ) ಸರಕು ಕೊಡುವುದು ಬೇಡ. ಏನೂ ಇಲ್ಲದೇನೆ ಏನೇನೋ ಹೇಳುತ್ತಾರೆ. ನಾವೇ ಸರಕು ಕೊಟ್ಟರೆ ತೊಳೆದೇ ಬಿಡುತ್ತಾರೆ. ವೈಯಕ್ತಿಕ ಮಾತುಕತೆ ಬೇಡ ಎಂದರು.

ಆರ್ಥಿಕ ಸ್ಥಿತಿ: ಶ್ವೇತಪತ್ರಕ್ಕೆ ಆಗ್ರಹ
ಬಜೆಟ್‌ ಮಂಡನೆಗೆ ಮುನ್ನ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ವಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದರು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರಕಾರ 2.38 ಲಕ್ಷ ಕೋಟಿ ರೂ. ಸಾಲದ ಹೊರೆಯಲ್ಲಿದೆ. ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ತಿಳಿಯುವ ಉದ್ದೇಶದಿಂದ ಶ್ವೇತಪತ್ರ ಹೊರಡಿಸಬೇಕಾಗಿದೆ ಎಂದು ಹೇಳಿದರು.

ಸಾಲ ಮಾತ್ರವಲ್ಲದೆ, ನೀರಾವರಿ, ಲೋಕೋಪಯೋಗಿ ಸಹಿತ ಪ್ರಮುಖ ಇಲಾಖೆಗಳಲ್ಲಿ 10 ಸಾವಿರ ಕೋಟಿ ರೂ. ಬಿಲ್‌ ಬಾಕಿ ಇದೆ. ಇಲಾಖೆಗಳಲ್ಲಿ ಬಾಕಿ ಪಾವತಿಯಾಗದ ಕಾರಣ ಯಾವುದೇ ಕಾಮಗಾರಿ ಮುಂದುವರಿಸದಂತೆ ಇಲಾಖಾ ಮುಖ್ಯಸ್ಥರಿಂದ ಅಧಿಕಾರಿಗಳಿಗೆ ಸೂಚನೆ ಹೋಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕೊನೆಯ ದಿನಗಳಲ್ಲಿ ಶಂಕುಸ್ಥಾಪನೆ ಮಾಡಿದ ಯೋಜನೆಗಳಿಗೆ 6-7 ಸಾವಿರ ಕೋಟಿ ರೂ. ಒದಗಿಸಬೇಕಿದೆ. ಇಂದಿರಾ ಕ್ಯಾಂಟೀನ್‌ಗೆ 35 ಕೋಟಿ ರೂ. ಅನುದಾನ ಒದಗಿಸಬೇಕಿದೆ. ಕಳೆದ ಜನವರಿ ತಿಂಗಳಿನಿಂದ ಅಂಗನವಾಡಿ ನೌಕರರಿಗೆ ಗೌರವಧನ ಸಿಕ್ಕಿಲ್ಲ. ಸಾಮಾಜಿಕ ಭದ್ರತಾ ಪಿಂಚಣಿ, ಕೆಪಿಟಿಸಿಎಲ್‌ಗೆ 16 ಸಾವಿರ ಕೋಟಿ ರೂ. ಬಾಕಿ ಪಾವತಿಸಬೇಕಾಗಿದೆ. ವೇತನ ಪರಿಷ್ಕರಣೆಯಿಂದ 10,800 ಕೋಟಿ ರೂ. ಹೊರೆ ಬಿದ್ದಿದೆ. ಮೈಸೂರು ಮಿನರಲ್ಸ್‌ಗೆ 1500 ಕೋಟಿ ರೂ. ಬಾಕಿ ಮರುಪಾವತಿ ಇದೆ. ಹೀಗಾಗಿ ಬಜೆಟ್‌ ಮಂಡಿಸುವ ಮುನ್ನ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next