Advertisement

ವಿಧಾನಸೌಧ ಚಲೋ ಅಸ್ತ್ರಕ್ಕೆ ಎಫ್ಐಆರ್‌ ಬ್ರಹ್ಮಾಸ್ತ್ರ

06:00 AM Aug 18, 2017 | Team Udayavani |

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಭ್ರಷ್ಟಾಚಾರ ವಿಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಜಿದ್ದಾಜಿದ್ದಿಗೆ ಬಿದ್ದಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ತಂತ್ರ-ಪ್ರತಿತಂತ್ರ ಹೆಣೆಯುತ್ತಿವೆ.

Advertisement

ಇದರ ಅಂಗವಾಗಿಯೇ ಭ್ರಷ್ಟಾಚಾರ ಆರೋಪ ಹೊತ್ತಿರುವ ಸಚಿವರಾದ ಡಿ.ಕೆ.ಶಿವಕುಮಾರ್‌ ಮತ್ತು ರಮೇಶ್‌ ಜಾರಕಿಹೊಳಿ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಶುಕ್ರವಾರ(ಇಂದು) ವಿಧಾನಸೌಧ ಚಲೋ ಪ್ರತಿಭಟನೆ ಹಮ್ಮಿಕೊಂಡಿದೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕರ ವಿರುದ್ಧ ಎಸಿಬಿ ಅಸ್ತ್ರ ಪ್ರಯೋಗಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಶಿವರಾಮ ಕಾರಂತ ಬಡಾವಣೆಯಲ್ಲಿನ ಡಿನೋಟಿಫಿಕೇಶನ್‌ ಪ್ರಕರಣ ಸಂಬಂಧ ಎಸಿಬಿ ಮೂಲಕ ಎರಡು ಪ್ರತ್ಯೇಕ ಎಫ್ಐಆರ್‌ ದಾಖಲಿಸಿದೆ.

2009ರಿಂದ 2012ರ ಅವಧಿಯಲ್ಲಿ ಯಲಹಂಕ ಹೋಬಳಿಯ ಆವಲಹಳ್ಳಿ ಗ್ರಾಮದ ಸರ್ವೇ ನಂಬರ್‌ 109/1 ರಲ್ಲಿ 3 ಎಕರೆ 6 ಗುಂಟೆ ಜಮೀನು ಡಿನೋಟಿಫಿಕೇಶನ್‌ ಮಾಡಿದ ಸಂಬಂಧ ಯಡಿಯೂರಪ್ಪ, ಬಿಡಿಎ ಅಂದಿನ ಭೂಸ್ವಾಧೀನ ಉಪ ಆಯುಕ್ತ ಗೌರಿ ಶಂಕರ ಎಸ್‌.ಎನ್‌, ನಗರಾಭಿವೃದ್ಧಿ ಇಲಾಖೆಯ ಅಂದಿನ ಅಧೀನ ಕಾರ್ಯದರ್ಶಿ ಪ್ರೇಮಚಂದ್ರ, ಅಂದಿನ ಉಪಕಾರ್ಯದರ್ಶಿ ಬಸವರಾಜು, ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ಸುಭೀರ್‌ ಹರಿಸಿಂಗ್‌ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ.

ಬೆಂಗಳೂರು ನಗರ ವಿಭಾಗದ ಡಿವೈಎಸ್‌ಪಿ ಆ್ಯಂಟನಿ ಜಾನ್‌ ಜೆ.ಕೆ ಅವರು, ಇವರೆಲ್ಲರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ಮುಂದುವರಿಸಿರುವುದಾಗಿ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಜತೆಗೆ ಎಲ್ಲಾ ಆರೋಪಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಬಿಡಿಎ ಹಾಗೂ ನಗರಾಭಿವೃದ್ಧಿ ಅಧಿಕಾರಿಗಳ ಜೊತೆ ಸೇರಿ ಆವಲಹಳ್ಳಿ ವ್ಯಾಪ್ತಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಜಮೀನು ಡಿನೋಟಿಫಿಕೇಶನ್‌ ಮಾಡಿದ್ದು ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಜನಸಾಮಾನ್ಯರ ವೇದಿಕೆಯ ಡಾ.ಡಿ ಅಯ್ಯಪ್ಪ ಎಸಿಬಿಗೆ ದೂರು ನೀಡಿದ್ದರು.

Advertisement

ಕಾಂಗ್ರೆಸ್‌ ಪ್ರತಿತಂತ್ರ?
ಐಟಿ ದಾಳಿಯನ್ನೇ ಪ್ರಮುಖವಾಗಿಟ್ಟುಕೊಂಡು ತಮ್ಮ ವಿರುದ್ಧ ಬಿಜೆಪಿ ಶುಕ್ರವಾರದಿಂದ ಒಂದು ವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಕ್ಕೆ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಸಹಿತ ಕಾಂಗ್ರೆಸ್‌ ನಾಯಕರು ಗರಂ ಆಗಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ಸಹ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಬಿಜೆಪಿಯ ಆಡಳಿತ ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಬಿಜೆಪಿಯ ಸಚಿವರು, ಶಾಸಕರ ಭೂ ಹಗರಣಗಳು ಮತ್ತು ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆಯುವಂತೆ ಸೂಚನೆ ನೀಡಿದೆ ಎಂದು ಹೇಳಲಾಗಿದೆ.

ಹೈಕಮಾಂಡ್‌ನ‌ ಈ ನಿರ್ದೇಶನದಿಂದಾಗಿ ಸಚಿವ ಡಿ.ಕೆ.ಶಿವಕುಮಾರ್‌, ಬಿಜೆಪಿ ಕಾಲದ ಎಲ್ಲಾ ಹಗರಣಗಳ ದಾಖಲೆ ಮತ್ತು ಮಾಹಿತಿ ಸಂಗ್ರಹಿಸಲು ನುರಿತ ಆರ್‌ಟಿಐ ಕಾರ್ಯಕರ್ತರು ಮತ್ತು ನಿವೃತ್ತ ಪೊಲಿಸ್‌ ಅಧಿಕಾರಿಗಳ ತನಿಖಾ ತಂಡವನ್ನು ರಚಿಸಿದ್ದಾರೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪ ವಿರುದ್ಧದ ಭೂ ಹಗರಣಗಳ ಆರೋಪ, ಕೇಂದ್ರ ಸಚಿವ ಅನಂತ ಕುಮಾರ್‌ ವಿರುದ್ಧವಿರುವ ಹುಡ್ಕೊ ಹಗರಣ ಆರೋಪ, ಮಾಜಿ ಡಿಸಿಎಂ ಆರ್‌.ಅಶೋಕ್‌ ವಿರುದ್ಧದ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಗರ್‌ ಹುಕುಂ ಸಾಗುವಳಿ ಹೆಸರಿನಲ್ಲಿ ಅಕ್ರಮವಾಗಿ ಆಪ್ತರಿಗೆ ಜಮೀನು ಮಂಜೂರು ಮಾಡಿರುವ ಆರೋಪ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ಕೆಎಚ್‌ಬಿ ಹಗರಣ, ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಕೆಐಎಡಿಬಿ, ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌, ನಂದೀಶ್‌ ರೆಡ್ಡಿ ಹಾಗೂ ಮಾಜಿ ಶಾಸಕ ಸತೀಶ್‌ ರೆಡ್ಡಿ ಅವರ ಮೇಲಿರುವ ಭೂ ಕಬಳಿಕೆ ಆರೋಪ, ಶೋಭಾ ಕರಂದ್ಲಾಜೆ ಅವರು ಇಂಧನ ಇಲಾಖೆಯಲ್ಲಿ ಮಾಡಿದ್ದರೆನ್ನಲಾದ ಹಗರಣಗಳ ಬಗ್ಗೆ ಸಮಗ್ರ ದಾಖಲೆಗಳನ್ನು  ಸಂಗ್ರಹಿಸುವಂತೆ ತಂಡಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ.

ಪ್ರತಿಭಟನೆ VS ಎಫ್ಐಆರ್‌
ಬಿಜೆಪಿ ರಾಜ್ಯ ಘಟಕ ಆಯೋಜಿಸಿರುವ ವಿಧಾನಸೌಧ ಚಲೋ ಮುನ್ನಾ ದಿನವೇ ಈ ಎಫ್ಐಆರ್‌ ಸಂಗತಿ ಬಯಲಾಗಿರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ. ಆ.10 ರಂದೇ ಬಿಎಸ್‌ವೈ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಆದರೆ ಈಗ ಬಯಲು ಮಾಡಿರುವ ಹಿಂದೆ ಬಿಜೆಪಿಗೆ ತಿರುಗೇಟು ನೀಡುವ ತಂತ್ರವಿದೆ ಎಂದೇ ಹೇಳಲಾಗುತ್ತಿದೆ.

ಬಿಎಸ್‌ವೈ ವಿರುದ್ಧದ ಆರೋಪವೇನು?
ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಹೆಸರಘಟ್ಟ – ಯಲಹಂಕ ವ್ಯಾಪ್ತಿಯಲ್ಲಿ  19 ಸಾವಿರ ನಿವೇಶನಗಳ ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬಿಡಿಎ 3546 ಎಕರೆ ಜಮೀನು ಸ್ವಾಧೀನ ಪಡೆಸಿಕೊಂಡಿತ್ತು.  ಈ ಪೈಕಿ ಯಡಿಯೂರಪ್ಪ ಕಾನೂನು ಬಾಹಿರವಾಗಿ 257 ಎಕರೆ ಡಿನೋಟಿಫಿಕೇಶನ್‌ ಮಾಡಿದ್ದಾರೆ ಎಂದು ಆರೋಪಿಸಿ ದೂರುದಾರರು ಆರೋಪಿಸಿದ್ದರು.

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ಬಿಜೆಪಿ ನಾಯಕರ ಮೇಲಿದೆ. ಯಡಿಯೂರಪ್ಪನವರು ಚೆಕ್‌ ಮೂಲಕ ಲಂಚ ಪಡೆದಿರುವುದು ನಾವು ಸಾಬೀತುಪಡಿಸಿದ್ದೇವೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಯಾವುದಾದರೂ ಸಾಕ್ಷಿ ಇದ್ದರೆ, ದಾಖಲೆ ತೋರಿಸಲಿ. ಅದು ಬಿಟ್ಟು ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ.
– ಡಾ. ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

ಅಮಿತ್‌ ಶಾ ಹಿತವಚನದಿಂದಾಗಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ನನ್ನ ಮೇಲಿನ ಐಟಿ ದಾಳಿ ಹಿಂದಿನ ಕುತಂತ್ರ ಎಲ್ಲರಿಗೂ ಗೊತ್ತಿದೆ. ಬಿಜೆಪಿ ಪ್ರತಿಭಟನೆಗೆ ಸೂಕ್ತ ಸಂದರ್ಭದಲ್ಲಿ ಉತ್ತರಿಸುತ್ತೇನೆ. ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ, ಕಾಂಗ್ರೆಸ್‌ ದ್ವೇಷ ರಾಜಕಾರಣ ಮಾಡುವುದಿಲ್ಲ. ನನಗೂ ಸಾಕಷ್ಟು ವಿಷಯಗಳು, ಮಾಹಿತಿಗಳು ಗೊತ್ತಿವೆ. ಅದನ್ನು ಸಂದರ್ಭ ಬಂದಾಗ ಹೇಳುತ್ತೇನೆ.
– ಡಿ.ಕೆ. ಶಿವಕುಮಾರ್‌, ಇಂಧನ ಸಚಿವ.

ಯಡಿಯೂರಪ್ಪವಿರುದ್ಧ ಹೊಸ ಎಫ್ಐಆರ್‌ ದಾಖಲಿಸಿರುವುದು ರಾಜಕೀಯ ದ್ವೇಷದ ಕ್ರಮ, ಅಮಿತ್‌ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಕಾಂಗ್ರೆಸ್‌ ಭಯಭೀತವಾಗಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸದಂತೆ ಬೆದರಿಸಲು ಈ ರೀತಿ ಮಾಡಲಾಗುತ್ತಿದೆ. ಇಡೀ ಪಕ್ಷ ಯಡಿಯೂರಪ್ಪಜತೆಗಿದೆ. ಶೀಘ್ರವೇ ಕಾಂಗ್ರೆಸ್‌ನವರು ಇದರ ಪ್ರತಿಫ‌ಲ ಅನುಭವಿಸಲಿದ್ದಾರೆ.
– ಆರ್‌. ಅಶೋಕ್‌, ಮಾಜಿ ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next