Advertisement
ಸರಕಾರಿ ಕೋಟಾವನ್ನು ಶೇ. 20ರಿಂದ ಶೇ. 50ಕ್ಕೆ ಏರಿಕೆ ಮಾಡಿದ್ದರಲ್ಲಿ ಶೇ. 30ರಷ್ಟು ಹೆಚ್ಚುವರಿಯಾಗಿದ್ದು, ಅದಕ್ಕೆ ಮಾತ್ರ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕಳೆದ ವರ್ಷದಂತೆ 20:80ರ ಅನುಪಾತದಲ್ಲಿ ಸೀಟು ಹಂಚಿಕೆಗೆ ಅವಕಾಶ ನೀಡಬೇಕು ಎಂದು ಪ್ರಾಧಿಕಾರದ ಅಧಿಕಾರಿಗಳು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಸರಕಾರದಿಂದ ಈವರೆಗೆ ಪ್ರಾಧಿಕಾರಕ್ಕೆ ಯಾವುದೇ ಉತ್ತರ ಬಂದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ನೀಟ್ ತೇರ್ಗಡೆಯಾಗಿರುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಸೋಮವಾರದಿಂದಲೇ ಆರಂಭವಾಗಿದ್ದು, ಹೊರ ರಾಜ್ಯದ ವಿದ್ಯಾರ್ಥಿಗಳು ಸಹಿತ ಕರ್ನಾಟಕದ ಬಹುತೇಕ ವಿದ್ಯಾರ್ಥಿಗಳು ಬೆಂಗಳೂರು ಕೇಂದ್ರ ಆಯ್ಕೆ ಮಾಡಿಕೊಂಡಿರುವುದರಿಂದ ಪರಿಶೀಲನೆ ವೇಳೆ ವಿದ್ಯಾರ್ಥಿಗಳ ಸಂಖ್ಯೆ ನಿರೀಕ್ಷೆಗೂ ಮೀರಿತ್ತು. ಪರಿಶೀಲನೆ ತ್ವರಿತಗತಿಯಲ್ಲಿ ಆಗದ ಕಾರಣ, ಅನೇಕ ವಿದ್ಯಾರ್ಥಿಗಳಲ್ಲಿ ಸಮರ್ಪಕ ದಾಖಲೆ ಇಲ್ಲದ ಕಾರಣ ಕೆಇಎ ಅಧಿಕಾರಿಗಳು, ವಿದ್ಯಾರ್ಥಿಗಳು, ಹೆತ್ತವರು ರಾತ್ರಿ ಪೂರ್ತಿ ಜಾಗರಣೆ ಮಾಡಿದ್ದಾರೆ. ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ, ದಂತವೈದ್ಯಕೀಯ ಸೀಟ್‌ಗೆ ನೀಟ್ ತೇರ್ಗಡೆಯಾದ ಸಾವಿರಾರು ವಿದ್ಯಾರ್ಥಿಗಳು ಪ್ರಾಧಿಕಾರದ ಸೂಚನೆಯಂತೆ ನೋಂದಣಿ ಮಾಡಿಕೊಂಡಿದ್ದರು. ಹೊರ ರಾಜ್ಯದವರಿಗೂ ಅವಕಾಶ ನೀಡಿರುವುದರಿಂದ ಅವರ ಸಂಖ್ಯೆಯೂ ಹೆಚ್ಚಿದೆ.