ಬಳ್ಳಾರಿ: ಜನಾರ್ದನ ರೆಡ್ಡಿ ಅವರು ಕೆಆರ್ ಪಿಪಿ ಪಕ್ಷ ಕಟ್ಟಿದಾಗ ಬಿಜೆಪಿ ವಿರುದ್ದ ಎಷ್ಟು ಅರೋಪ ಮಾಡಿದ್ದರು. ಬಿಜೆಪಿ ಮೇಲಿನ ಭಯದಿಂದ ಕೊಮುವಾದಿ ಪಕ್ಷಕ್ಕೆ ಸೇರಿದ್ದಾರೆ. ಇಡಿ, ಸಿಬಿಐ ಭಯಕ್ಕೆ ರೆಡ್ಡಿ ಬಿಜೆಪಿ ಸೇರಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಬಿ ನಾಗೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಸಂಡೂರಿನಲ್ಲಿ ಮನೆ ಅಲ್ಲ ಅರಮನೆ ಮಾಡಿದರೂ ಕಾಂಗ್ರೆಸ್ ಗೆಲುವು ಫಿಕ್ಸ್. ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದಿರುವುದು ನಮ್ಮ ಪಕ್ಷದ ಮೇಲೆ ಯಾವ ಪರಿಣಾಮ ಬೀರಲ್ಲ ಎಂದರು.
ಯುಪಿಎ ಸರ್ಕಾರ ಇದ್ದಾಗ ನಾಗೇಂದ್ರ ಜೈಲಿಗೆ ಹೋಗಿದ್ದರು ಎನ್ನುವ ರೆಡ್ಡಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿ ಅಥವಾ ಜನಾರ್ದನ ರೆಡ್ಡಿ ಜೊತೆಗೆ ಇದ್ದರೆ ನಾವು ಒಳ್ಳೆಯವರು. ಈಗ ಪಕ್ಷ ಬದಲಾದ ಕೂಡಲೇ ನಾಗೇಂದ್ರ ಕೆಟ್ಟವನಾಗುತ್ತಾನಾ? ಜನಾರ್ದನ ರೆಡ್ಡಿ ಅವರಿಗೆ ಸ್ವಲ್ಪ ಆತ್ಮಸಾಕ್ಷಿ ಇದ್ದರೆ ನೋಡಿಕೊಳ್ಳಲಿ. ಹೈ ವೋಲ್ಟೇಜ್ ಕ್ಷೇತ್ರವಲ್ಲ ಲಕ್ಷ ವೋಲ್ಟೆಜ್ ಇದ್ದರೂ ನಾವೇ ಸಂಡೂರು ಗೆಲ್ಲುವುದು. ಯಾರಿಗೆ ಎಷ್ಟು ವೋಲ್ಟೇಜ್ ಇದೆ ಎಂದು ಚುನಾವಣೆ ಬಳಿಕ ಗೊತ್ತಾಗಲಿದೆ. ಸಂಡೂರು ಕ್ಷೇತ್ರದಲ್ಲಿ ತಂತ್ರ ಪ್ರತಿತಂತ್ರ ಅಲ್ಲ ನಾವು ರಣತಂತ್ರ ಮಾಡುತ್ತೇವೆ. ಜನಾರ್ದನ ರೆಡ್ಡಿಯಾಗಲಿ ಯಾರೇ ಬಂದರೂ ಸಂಡೂರಲ್ಲಿ ಕಾಂಗ್ರೆಸ್ ಗೆಲುವು ಫಿಕ್ಸ್ ಎಂದು ವಿಶ್ವಾಸ ವ್ಯಕ್ತಪಡಿಸಸಿದರು.
ವಾಲ್ಮೀಕಿ ಸಮುದಾಯದ ಮಗನಾಗಿ ವಾಲ್ಮೀಕಿ ಜಯಂತಿ ದಿನ ವಾಲ್ಮೀಕಿ ಹಗರಣ ಎನ್ನುವ ಶಬ್ದ ಬಳಸಿ ಮಾತಾಡಲು ಬೇಸರವಾಗುತ್ತಿದೆ. ನಾವು ಯಾವುದೇ ಹಗರಣ ಮಾಡಿಲ್ಲ. ಇದೆಲ್ಲ ಬಿಜೆಪಿ ಕುತಂತ್ರ. ಸಿಬಿಐ, ಇಡಿ ಬಳಸಿ ಸರ್ಕಾರ ಅಸ್ಥಿರ ಮಾಡುವ ಪ್ರಯತ್ನಿದಿಂದ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಈ ಪ್ರಕರಣದಿಂದ ಶೀಘ್ರದಲ್ಲೇ ಆರೋಪ ಮುಕ್ತನಾಗುವೆ ಎಂದರು.