Advertisement

ಸೋಲು ತಿಳಿದೇ ಸ್ಪರ್ಧಿಸಿದ್ದೆ !

07:00 AM Apr 08, 2018 | Team Udayavani |

ಧಾರ್ಮಿಕ, ಶೈಕ್ಷಣಿಕ, ರಾಜಕೀಯ?
         ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ, ಅನೇಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷನಾಗಿದ್ದ ನಾನು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿಯವರಿಂದ ಪ್ರಭಾವಿತನಾಗಿ ಏಕಾಏಕಿ ರಾಜಕೀಯಕ್ಕೆ ಬಂದೆ. ಚುನಾವಣೆಗೆ ಒಂದೂವರೆ ತಿಂಗಳು ಇರುವಾಗ ಪಕ್ಷಕ್ಕೆ ಸೇರ್ಪಡೆಯಾದೆ. ಚುನಾವಣೆಗೆ 15 ದಿನ ಮೊದಲು ನನಗೆ ಟಿಕೆಟ್‌ ಖಚಿತವಾಯ್ತು. ಈ ಮಧ್ಯೆಯೇ ಯಡಿಯೂರಪ್ಪ ಹೊಸ ಪಕ್ಷ ಕೆಜೆಪಿ ಮಾಡಿದ್ದರು. ನನಗೆ ಪಕ್ಷದಲ್ಲಿ ಎಲ್ಲವೂ ಹೊಸತು. ಹಾಗಾಗಿ ಸ್ಪರ್ಧಿಸಲಾರೆ 
ಎಂದು ಹಿಂದೆ ಸರಿದೆ.

Advertisement

ಆದರೂ ಸ್ಪರ್ಧಿಸಿದಿರಿ?
        ನಾಯಕರ ಒತ್ತಾಯಕ್ಕೆ ಮಣಿದು ಸ್ಪರ್ಧಿಸಿದೆ. ಪಕ್ಷದ ಒಳಜಗಳ, ಕೆಜೆಪಿಯಿಂದಾಗಿ ನಾನು ನಡುಬೀದಿ ನಾರಾಯಣನಾದೆ. ಹೋರಾಟ ಮಾಡಬೇಕು, ಹೇಡಿಯಾಗಬಾರದು ಎಂದು ನಿಶ್ಚಯಿಸಿ ಸೋಲುತ್ತೇನೆ ಎಂದು ಗೊತ್ತಿದ್ದೇ ಸ್ಪರ್ಧಿಸಿದೆ. ಮತ ಎಣಿಕೆಗೂ ಹೋಗಲಿಲ್ಲ. ಸೋಲು ಎಂಬುದನ್ನು ಮೊದಲೇ ಬುತ್ತಿಯಲ್ಲಿ ಕಟ್ಟಿಟ್ಟಿದ್ದೆ!

ಸೋಲಿನ ಪಾಠ ಏನು?
        ಆ ಚುನಾವಣೆ ನೆನೆದಾಗ ಚಳಿಯಲ್ಲೂ ಬೆವರುತ್ತದೆ. ಪಕ್ಷದ ಕಾರ್ಯಕರ್ತರ ಪೂರ್ಣ ಒಡನಾಟ ಇಲ್ಲದೆ, ಕ್ಷೇತ್ರದ ಮತದಾರರ ಸಂಪರ್ಕ ಇಲ್ಲದೆ, ಕ್ಷೇತ್ರದ ಪರಿಚಯ ಇಲ್ಲದೆ, ಬೂತ್‌ಗಳ ಮಾಹಿತಿಯಿಲ್ಲದೆ ಚುನಾವಣೆಗೆ ಸ್ಪರ್ಧಿಸಬಾರದು; ಕ್ಷೇತ್ರದ ಸಂಪೂರ್ಣ ಅನುಭವ ಬೇಕು ಎಂಬ ಪಾಠ ಕಲಿತೆ. ಚುನಾವಣೆ ಎಂದರೇನೆಂದು ಮರೆಯಲಾಗದಂತೆ ಕಲಿತೆ.

ಪುನಃ ಯಾಕೆ ಸ್ಪರ್ಧೋತ್ಸಾಹ?
        ಉಡುಪಿ, ಕುಂದಾಪುರ, ಭಟ್ಕಳದಲ್ಲಿ ಪಕ್ಷ, ಸಂಘಟನೆ ಬಲಿಷ್ಠವಾಗಿದ್ದರೂ ಮತ ಗಳಿಕೆ 16,000 ದಾಟಲಿಲ್ಲ. ಆದರೆ ಬೈಂದೂರಿನ ಅಭ್ಯರ್ಥಿಯಾದ ನನಗೆ 51,000ಕ್ಕೂ ಅಧಿಕ ಮತ ಬಿದ್ದಿತ್ತು. ಜನರ ಪ್ರೀತಿಗೆ ತಲೆಬಾಗಬೇಕು. ಆದ್ದರಿಂದ ಸೋಲಿನ ಅನಂತರ ಸುಮ್ಮನುಳಿಯಲಿಲ್ಲ. 

5 ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಟ್ಟೆ. ಈಗ ಬೈಂದೂರು ಕ್ಷೇತ್ರದಲ್ಲಿ ದೇವದುರ್ಲಭ ಬಿಜೆಪಿ ಕಾರ್ಯಕರ್ತರ ದಂಡೇ ಇದೆ. ಕಾರ್ಯಕರ್ತರ ಶ್ರಮ, ರಾಜ್ಯ ಸರಕಾರದ ಹಿಂದೂ ವಿರೋಧಿ ಧೋರಣೆ ನಮಗೆ ಪೂರಕ. ಅಭಿವೃದ್ಧಿಯಲ್ಲಿ ಹಿಂದುಳಿದ ಬೈಂದೂರು ಕ್ಷೇತ್ರವನ್ನು ಉತ್ಥಾನಕ್ಕೆ ಕೊಂಡೊಯ್ಯಬೇಕೆಂದು ಎಲ್ಲ ಬಿಜೆಪಿ ಕಾರ್ಯಕರ್ತರ ಬಯಕೆಯಾಗಿದೆ. ಕೊಲ್ಲೂರು ದೇವಸ್ಥಾನದ ಮೂಲಕ ಶಿಕ್ಷಣ ಸಂಸ್ಥೆಗಳನ್ನು ತೆರೆದು, ನನ್ನದೇ ಆದ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯೆ ಹಂಚುವ ಕಾಯಕದಲ್ಲಿದ್ದೇನೆ. ಅಭಿವೃದ್ಧಿ ಎಂದರೇನೆಂದು ತೋರಿಸಿಕೊಡಬೇಕೆಂದು ನಿಶ್ಚಯಿಸಿ ಸ್ಪರ್ಧೆಗೆ ಉತ್ಸಾಹ ತೋರುತ್ತಿದ್ದೇನೆ. ಪಕ್ಷದ ಘೋಷಣೆಗೆ ಕಾಯುತ್ತಿದ್ದೇನೆ.

Advertisement

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next