Advertisement
ಭೂ ಪರಿವರ್ತನೆಯಾದ ಆಸ್ತಿಗಳಿಗೆ “ಎ’ ಖಾತಾ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಭೂ ಪರಿವರ್ತನೆಯಾಗದ ಸ್ವತ್ತುಗಳಿಗೆ “ಬಿ’ ಖಾತಾ ನೀಡಲಾಗಿದೆ. ಇದೇ ರೀತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ “ಬಿ’ ಖಾತಾ ನೀಡಿದರೆ ಹೆಚ್ಚುವರಿ ಆದಾಯ ಸಂಗ್ರಹಿಸಬಹುದು ಎಂಬುದು ಸರಕಾರದ ಆಲೋಚನೆ.
1976ರ ಕೆಎಂಸಿ ಕಾಯಿದೆ ಪ್ರಕಾರ ಪಾಲಿಕೆಯು ತನ್ನ ವ್ಯಾಪ್ತಿಯ ಕಟ್ಟಡಗಳು, ಖಾಲಿ ಜಾಗಗಳಿಗೆ ಆಸ್ತಿ ತೆರಿಗೆ ವಿಧಿಸಲು ಅವಕಾಶವಿದೆ. ಪಾಲಿಕೆ ಆಯುಕ್ತರು ಅಥವಾ ಅವರಿಂದ ನಿಯೋಜಿಸಲ್ಪಟ್ಟ ಅಧಿಕಾರಿಯು ತೆರಿಗೆ ವಿವರವುಳ್ಳ ಪ್ರಮಾಣ ಪತ್ರವನ್ನು ಆಸ್ತಿ ಮಾಲಕರಿಗೆ ನೀಡಬಹುದು. ಯಾವುದೇ ಉಲ್ಲಂಘನೆಗಳಿಲ್ಲದ ಆಸ್ತಿ ಮಾಲಕರಿಂದ ಸಂಗ್ರಹಿಸುವ ತೆರಿಗೆ ವಿವರಗಳನ್ನು ನಮೂನೆ “ಎ’ಯಲ್ಲಿ ನಿರ್ವಹಿಸಲಾಗುತ್ತಿದೆ. ಅದನ್ನು ಆಡುಭಾಷೆಯಲ್ಲಿ “ಎ ಖಾತಾ’ ಎನ್ನಲಾಗುತ್ತಿದೆ. ಅನಧಿಕೃತ ಬಡಾವಣೆಯಲ್ಲಿ ನಿರ್ಮಿಸಿರುವ ಕಟ್ಟಡ, ನಿವೇಶನ, ಕಟ್ಟಡ ಬೈಲಾ ಉಲ್ಲಂಘಿಸಿ ಕಟ್ಟಿರುವ ಕಟ್ಟಡಗಳು, ಒಸಿ, ಸಿಸಿ ಪಡೆಯದ ಕಟ್ಟಡಗಳಿಂದಲೂ ತೆರಿಗೆ ವಸೂಲಿ ಮಾಡಲು ಈ ನಿಯಮದಲ್ಲಿ ಅವಕಾಶ ಇದೆ. ಇಂತಹ ಆಸ್ತಿಗಳಿಂದ ತೆರಿಗೆ ಸಂಗ್ರಹಿಸುವುದಕ್ಕೆ ಪ್ರತ್ಯೇಕ ನೋಂದಣಿಯನ್ನು ನಿರ್ವಹಿಸಲಾಗುತ್ತಿದೆ. ಅದನ್ನೇ “ಬಿ ಖಾತಾ’ ಎನ್ನುತ್ತಾರೆ.
Related Articles
ಬೆಂಗಳೂರಿನಲ್ಲಿ 2007ಕ್ಕಿಂತ ಮೊದಲು “ಬಿ’ ಖಾತಾ ವ್ಯವಸ್ಥೆ ಇರಲಿಲ್ಲ. ಅಲ್ಲಿಯವರೆಗೆ ಸುಧಾರಣ ಶುಲ್ಕ ಕಟ್ಟಿಸಿಕೊಂಡು ಎಲ್ಲ ಆಸ್ತಿಗಳಿಗೂ “ಎ’ ಖಾತಾ ನೀಡಲಾಗುತ್ತಿತ್ತು. 2006ರಲ್ಲಿ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಭೂಪರಿವರ್ತನೆಯಾಗದ ನಿವೇಶನಗಳಿಗೆ “ಎ’ ಖಾತಾ ನೀಡಬಾರದೆಂದು ಅಧ್ಯಾದೇಶ ಹೊರಡಿಸಲಾಗಿತ್ತು. ಅನಂತರ ಕೇವಲ ತೆರಿಗೆ ಸಂಗ್ರಹಿಸುವ ಸಲುವಾಗಿ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೆಯೇ ನಿರ್ಮಿಸಿರುವ ಬಡಾವಣೆಗಳಲ್ಲಿರುವ ನಿವೇಶನಗಳು, ಭೂಪರಿವರ್ತನೆ ಮಾಡದೆ ಕಟ್ಟಡ ನಿರ್ಮಿಸಿರುವ ನಿವೇಶನಗಳನ್ನು “ಬಿ’ ವಹಿಯಲ್ಲಿ ದಾಖಲಿಸುವ ಪದ್ಧತಿ ಆರಂಭವಾಯಿತು.
Advertisement
ಪರಿಶೀಲನೆಗೆ “ಸದನ ಸಮಿತಿ’ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ “ಬಿ’ ಖಾತಾ ವ್ಯವಸ್ಥೆಯನ್ನು ರಾಜ್ಯದ ಇತರಡೆಗೆ ವಿಸ್ತರಿಸಲು ಇರುವ ಅವಕಾಶಗಳ ಬಗ್ಗೆ ಪರಾ ಮರ್ಶೆಗೆ ಈಗಾಗಲೇ ಸದನ ಸಮಿತಿ ಯನ್ನು ಸರಕಾರ ರಚಿಸಿದೆ. ಸಚಿವರಾದ ಈಶ್ವರ ಖಂಡ್ರೆ ಅಧ್ಯಕ್ಷತೆಯ ಸದನ ಸಮಿತಿಯಲ್ಲಿ ಸಚಿವ ಬೈರತಿ ಸುರೇಶ್, ಎಚ್.ಕೆ. ಪಾಟೀಲ್ ಇದ್ದಾರೆ. ಈಗಾಗಲೇ ಸಮಿತಿಯಿಂದ ಪರಾ ಮರ್ಶೆ ನಡೆಯುತ್ತಿದ್ದು, ಶೀಘ್ರದಲ್ಲಿ ವರದಿ ಸಿದ್ಧ ಗೊಳ್ಳಲಿದೆ. ಇದರ ಆಧಾರದಲ್ಲಿ ಬಿ ಖಾತಾ ವನ್ನು ರಾಜ್ಯಾದ್ಯಂತ ಪರಿಚಯಿಸಲು ನಿರ್ಧರಿಸಲಾಗಿದೆ. ಸ್ಥಳೀಯ ಸಂಸ್ಥೆಯಿಂದ ಸೌಲಭ್ಯ ಪಡೆಯುವ ಆಸ್ತಿಗಳು ಹಲವು ಕಾರಣಗಳಿಂದ ಎ ಖಾತಾ ವ್ಯವಸ್ಥೆಯೊಳಗೆ ಬಾರದೆ ತೆರಿಗೆ ಪಾವತಿಸುತ್ತಿಲ್ಲ. ಹೀಗಾಗಿ ಅವುಗಳನ್ನು ತೆರಿಗೆ ವ್ಯವಸ್ಥೆಯೊಳಗೆ ತರಬೇಕಾಗುತ್ತದೆ. ಇದಕ್ಕಾಗಿ ಬಿಬಿಎಂಪಿಯಲ್ಲಿ ಇರುವಂತೆ ಎಲ್ಲ ಸ್ಥಳೀಯ ಆಡಳಿತಗಳ ಮಟ್ಟದಲ್ಲಿಯೂ ಬಿ ಖಾತಾ ಪರಿಚಯಿಸಲು ಉದ್ದೇ ಶಿಸಲಾಗಿದೆ. ಸದನ ಸಮಿತಿಯ ತೀರ್ಮಾನ ಪರಿಶೀಲಿಸಿ 2 ತಿಂಗಳೊಳಗೆ ಇದರ ಜಾರಿಗೆ ಕ್ರಮ ಕೈಗೊಳ್ಳಲಾಗುವುದು.
– ಬೈರತಿ ಸುರೇಶ್,
ನಗರಾಭಿವೃದ್ಧಿ ಸಚಿವರು - ದಿನೇಶ್ ಇರಾ