Advertisement

ಉಡುಪಿ, ದ.ಕ. ಜಿಲ್ಲೆಯಿಂದ ಅತೀ ಹೆಚ್ಚು ತೆರಿಗೆ ಬಂದರೂ ನಿರ್ಲಕ್ಷ್ಯ: ಹರಿಪ್ರಸಾದ್‌ ಆರೋಪ

11:03 PM Feb 13, 2023 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನ ಅನಂತರ ಅತೀ ಹೆಚ್ಚು ತೆರಿಗೆ ಕಟ್ಟುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬಗ್ಗೆ ಎಲ್ಲ ಸರಕಾರಗಳು ಮಲತಾಯಿ ಧೋರಣೆ ತೋರಿವೆ ಎಂದು ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಆರೋಪಿಸಿದ್ದಾರೆ.

Advertisement

ಪ್ರಶ್ನೋತ್ತರ ಅವಧಿ ಯಲ್ಲಿ ಉಳ್ಳಾಲ ಬೀಚ್‌ ಪ್ರದೇಶದ ಅಭಿವೃದ್ಧಿ ಕುರಿತು ಜೆಡಿಎಸ್‌ ಸದಸ್ಯ ಬಿ.ಎಂ. ಫಾರೂಕ್‌ ಅವರ ಪರವಾಗಿ ಎಸ್‌.ಎಲ್‌. ಭೋಜೇಗೌಡ ಕೇಳಿದ ಪ್ರಶ್ನೆಗೆ ಸರಕಾರದ ಪರವಾಗಿ ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಅವರು ಉತ್ತರ ನೀಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಹರಿಪ್ರಸಾದ್‌ ಈ ಆರೋಪ ಮಾಡಿದರು.

ಕರಾವಳಿ ಭಾಗದಲ್ಲಿ 320 ಕಿ.ಮೀ ಸಮುದ್ರತೀರ ಇದೆ. ಉಳ್ಳಾಲ ಬೀಚ್‌ ಪ್ರದೇಶದಲ್ಲಿ ರಾಣಿ ಅಬ್ಬಕ್ಕ ಇದ್ದರೆ, ಮತ್ತೂಂದು ತುದಿಯಲ್ಲಿ ದರ್ಗಾ ಇದೆ. ಆದರೆ, ಇದರ ಅಭಿವೃದ್ಧಿ ಆಗಿಲ್ಲ. ಬೆಂಗಳೂರು ಬಿಟ್ಟರೆ ಅತೀಹೆಚ್ಚು ತೆರಿಗೆ ಕಟ್ಟುವವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ. ಹೀಗಿದ್ದರೂ ಸರಕಾರ ಕರಾವಳಿ ಬಗ್ಗೆ ಮಲತಾಯಿ ಧೋರಣೆ ತೋರಿವೆ ಎಂದರು.

ಇದಕ್ಕೆ ತಿರುಗೇಟು ನೀಡಿದ ಸಚಿವ ಅಶ್ವತ್ಥನಾರಾಯಣ ಹಿಂದೆ ಹೇಗಿತ್ತೋ ಗೊತ್ತಿಲ್ಲ, ನಮ್ಮ ಸರಕಾರದ ಅವಧಿಯಲ್ಲಿ ಕರಾವಳಿ ಭಾಗಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದೇವೆ ಎಂದರು. ನಾನು ರಾಜಕಾರಣ ಮಾಡುತ್ತಿಲ್ಲ ಎಂದು ಹರಿಪ್ರಸಾದ್‌ ಮರು ಉತ್ತರ ನೀಡಿದರು. ಉಳ್ಳಾಲ ಬೀಚ್‌ ಪ್ರದೇಶದಲ್ಲಿ ಶೌಚಾಲಯ, ಬೀದಿದೀಪ ಕೊಡಲು ಸರಕಾರಕ್ಕೆ ಏನು ಬಡತನ ಬಂದಿದೆ ಎಂದು ಭೋಜೇಗೌಡ ಟೀಕಿಸಿದರು.

ಪ್ರವಾಸೋದ್ಯಮ-ಆತಿಥ್ಯಕ್ಕೆ ಉತ್ತೇಜನ
ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ (ಹಾಸ್ಪಿಟಾಲಿಟಿ)ಕ್ಕೆ ಹೆಚ್ಚು ಉತ್ತೇಜನ ನೀಡಲಾಗುತ್ತಿದ್ದು, 20ಕ್ಕೂ ಹೆಚ್ಚು ಯೋಜ ನೆಗಳು ಈ ಭಾಗದಲ್ಲಿ ಬರಲಿವೆ. ಕರ್ನಾಟಕ ಪ್ರವಾಸೋದ್ಯಮ ನೀತಿ: 2020-26ರಲ್ಲಿ ಉಳ್ಳಾಲ ಬೀಚ್‌ ಅನ್ನು ಪ್ರವಾಸಿ ತಾಣವಾಗಿ ಗುರುತಿಸಲಾಗಿದೆ. ಉಳ್ಳಾಲ ಕಡಲ ತೀರದಲ್ಲಿ ಪ್ರವಾಸಿ ಮೂಲಸೌಕರ್ಯಗಳ ಅಭಿವೃದ್ಧಿ ಸಂಬಂಧ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಯವರಿಂದ ಪ್ರಸ್ತಾವನೆ ಬಂದಲ್ಲಿ ಬಜೆಟ್‌ನಲ್ಲಿ ಇಲಾಖೆಗೆ ಒದಗಿಸುವ ಅನುದಾನ ಲಭ್ಯತೆಗನುಗುಣವಾಗಿ ಹಾಗೂ ಪ್ರವಾಸಿ ಮೂಲ ಸೌಕರ್ಯಗಳ ಅಗತ್ಯತೆಯ ಅನುಗುಣವಾಗಿ ಪರಿಗಣಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.

Advertisement

ಅದೇ ರೀತಿ ರಾಜ್ಯದ ಕಡಲ ತೀರಗಳ ಅಭಿವೃದ್ದಿ ಸಂಬಂಧ ಸಿದ್ದಪಡಿಸಿಕೊಂಡಿರುವ ಕರ್ನಾಟಕ ಕರಾವಳಿ ವಲಯ ನಿರ್ವಹಣ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯದ ಸಿಆರ್‌ಜೆಡ್‌ ವಿಭಾಗದಿಂದ 2022ರ ನ. 2ರಂದು ಅನುಮೋದನೆ ಸಿಕ್ಕಿದೆ. ಈ ಯೋಜನೆಯಲ್ಲಿ ಪ್ರಸ್ತಾವಿಸಿರುವ ಉಳ್ಳಾಲ ಕಡಲ ತೀರವೂ ಸೇರಿದಂತೆ ರಾಜ್ಯದ ಎಲ್ಲ ಕಡಲ ತೀರಗಳನ್ನು ಅಭಿವೃದ್ಧಿಪಡಿಸಲು ಆಯವ್ಯಯದಲ್ಲಿ ಇಲಾಖೆಗೆ ಲಭ್ಯತೆಗೆ ಅನುಗುಣವಾಗಿ ಹಂತ-ಹಂತವಾಗಿ ಅನುದಾನ ಒದಗಿಸಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

ಯಾತ್ರಿ ನಿವಾಸ 6 ತಿಂಗಳಲ್ಲಿ ಪೂರ್ಣ
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಜಮಲಾಬಾದ್‌ ಕೋಟೆ (ಗಡಾಯಿಕಲ್ಲು) ಪ್ರದೇಶದಲ್ಲಿ 10 ಕೊಠಡಿಗಳ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಯನ್ನು 40 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು 2015ರ ಆ. 18ರಂದು ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗೆ ಪ್ರವಾಸೋದ್ಯಮ ಇಲಾಖೆಯಿಂದ ಹಂತ-ಹಂತವಾಗಿ 20 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಹಣ ಬಳಕೆ ಪ್ರಮಾಣ ಪತ್ರ ಹಾಗೂ ಮೂರನೇ ವ್ಯಕ್ತಿ ತಪಾಸಣ ವರದಿಯನ್ನು ಜಿಲ್ಲಾಧಿಕಾರಿಗಳು 2022ರ ನ. 15ರಂದು ಸಲ್ಲಿಸಿದ್ದಾರೆ. ಕಾಮಗಾರಿಗೆ ಸಂಬಂಧಿಸಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೆಶಕರು 2023ರ ಜ. 20ರಂದು ವರದಿ ಸಲ್ಲಿಸಿದ್ದಾರೆ. ಕಾಮಗಾರಿಯ ಬಾಕಿ ಹಣವನ್ನು ಬಿಡುಗಡೆ ಮಾಡಿ 6 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕಾಂಗ್ರೆಸ್‌ ಸದಸ್ಯ ಕೆ. ಹರೀಶ್‌ ಕುಮಾರ್‌ ಅವರ ಪ್ರಶ್ನೆಗೆ ಸಚಿವ ಅಶ್ವತ್ಥನಾರಾಯಣ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next