Advertisement

ಹೆದ್ದಾರಿಯೇ ಬಸ್‌ ನಿಲ್ದಾಣ; ಅದರ ಬದಿಯೇ ಪ್ರಯಾಣಿಕರ ತಂಗುದಾಣ

08:02 PM Jul 29, 2019 | mahesh |

ಬಂಟ್ವಾಳ: ಜನನಿಬಿಡ ಪ್ರದೇಶವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಹಾಗೂ ಬಂಟ್ವಾಳ ತಾಲೂಕು ಕೇಂದ್ರ ಸ್ಥಾನವಾಗಿ ಗುರುತಿಸಿ ಕೊಂಡಿರುವ ಬಿ.ಸಿ. ರೋಡ್‌ ನಗರಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಹೆದ್ದಾರಿಯೇ ಬಸ್‌ ನಿಲ್ದಾಣವಾಗಿದ್ದು, ಹೆದ್ದಾರಿ ಬದಿಯೇ ಪ್ರಯಾಣಿಕರ ತಂಗುದಾಣವಾಗಿ ಮಾರ್ಪಟ್ಟಿದೆ.

Advertisement

ಮಂಗಳೂರು ಭಾಗದಿಂದ ಪುತ್ತೂರು, ಧರ್ಮಸ್ಥಳ, ಉಪ್ಪಿನಂಗಡಿ, ವಿಟ್ಲ ಸಹಿತ ಬಿ.ಸಿ. ರೋಡ್‌ ಮೂಲಕ ದೂರದೂರುಗಳಿಗೆ ಸಾಗುವ ಬಸ್‌ಗಳು ಹೆದ್ದಾರಿಯಲ್ಲಿಯೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು- ಇಳಿಸುತ್ತಿದ್ದು, ಹೀಗಾಗಿ ಒಂದೆರಡು ನಿಮಿಷಗಳ ಕಾಲ ಇಲ್ಲಿ ಬಸ್‌ಗಳು ನಿಲ್ಲವುದು ಅನಿವಾರ್ಯವಾಗಿದೆ.

ಟ್ರಾಫಿಕ್‌ ಜಾಮ್‌ ಸಮಸ್ಯೆ
ಒಂದರ ಹಿಂದೆ ಒಂದರಂತೆ ಬಸ್‌ಗಳು ಆಗಮಿಸುತ್ತಲೇ ಇರುವುದರಿಂದ ಹೆದ್ದಾರಿಯುದ್ದಕ್ಕೂ ಬಸ್‌ಗಳು ಸರತಿ ಯಲ್ಲಿ ನಿಲ್ಲುತ್ತವೆ. ಹೆದ್ದಾರಿಯಲ್ಲಿ ಮೂರ್‍ನಾಲ್ಕು ಬಸ್‌ಗಳು ನಿಂತಾಗ ಹಿಂದಿನಿಂದ ಸಾಗುವ ವಾಹನಗಳಿಗೆ ತೊಂದರೆಯಾಗಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ಮತ್ತೂಂದೆಡೆ ಇಲ್ಲಿ ಹೆದ್ದಾರಿಯೂ ಹದಗೆಟ್ಟಿರು ವುದರಿಂದ ಮತ್ತಷ್ಟು ಸಮಸ್ಯೆ ಎದುರಾಗುತ್ತಿದೆ.

ಇಲ್ಲಿಗೆ ಕೆಲವು ಬಸ್‌ಗಳು ಪ್ರಯಾಣಿಕರು ಇಳಿದು-ಹತ್ತಿದ ಬಳಿಕ ತೆರಳಿದರೆ, ಕೆಲವು ಒಂದಷ್ಟು ಹೊತ್ತು ನಿಂತು ಸಾಗುತ್ತವೆ. ಸಂಚಾರ ಪೊಲೀಸರ ಸೂಚನೆ ಬಳಿಕವೂ ಕೆಲವು ಅಲ್ಲೇ ನಿಂತಿರು ವುದರಿಂದ ತೊಂದರೆಯಾಗುತ್ತಿದೆ.

ಪರ್ಯಾಯ ವ್ಯವಸ್ಥೆ ಅಗತ್ಯ
ಮಂಗಳೂರಿನಿಂದ ಆಗಮಿಸುವ, ತೆರಳುವ -ಹೀಗೆ ಎರಡೂ ಕಡೆಯ ಬಸ್‌ಗಳು ರಸ್ತೆಯಲ್ಲೇ ನಿಲ್ಲುತ್ತಿದ್ದು, ಮಂಗಳೂರಿಗೆ ತೆರಳುವ ಸರ್ವೀಸ್‌ ರಸ್ತೆಯಲ್ಲಿ ನಿಂತು ಹೆದ್ದಾರಿಯಲ್ಲಿ ನೇರವಾಗಿ ತೆರಳುವ ವಾಹನಗಳು ಫ್ಲೈಓವರ್‌ ಮೂಲಕ ಸಾಗುತ್ತವೆ.

Advertisement

ಆದರೆ ಸಮಸ್ಯೆ ಇರುವುದು ಮಂಗಳೂರಿನಿಂದ ಬಿ.ಸಿ. ರೋಡ್‌ ಕಡೆಗೆ ಆಗಮಿಸುವ ಹೆದ್ದಾರಿಯಲ್ಲಿ. ಇಲ್ಲಿ ಬಸ್‌ಗಳು ಹೆದ್ದಾರಿಯಲ್ಲೇ ನಿಲ್ಲಬೇಕಿದೆ. ಹೀಗಾಗಿ ಬಂಟ್ವಾಳ ಪುರಸಭೆ ಹಾಗೂ ಹೆದ್ದಾರಿ ಇಲಾಖೆ ಜಂಟಿಯಾಗಿ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯ ಮಾಡಬೇಕಿದೆ. ಈಗಾಗಲೇ ಪೊಲೀಸ್‌ ಇಲಾಖೆಯು ಬಸ್‌ಗೆ ಪರ್ಯಾಯ ನಿಲ್ದಾಣ ನೀಡುವ ಕುರಿತು ಪುರಸಭೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅದನ್ನು ಅನುಷ್ಠಾನಗೊಳಿಸುವತ್ತ ಚಿಂತನೆ ನಡೆಸಬೇಕಿದೆ.

ವರ್ತಕರಿಗೂ ತೊಂದರೆ?
ಪ್ರಸ್ತುತ ಮಳೆಗಾಲವಾಗಿದ್ದು, ಮಳೆ ಬಂದರೆ ಪ್ರಯಾಣಿಕರಿಗೆ ಸ್ಥಳೀಯ ವಾಣಿಜ್ಯ ಸಂಕೀರ್ಣವೇ ಗತಿಯಾಗಿದೆ. ಆದರೆ ಅಲ್ಲಿ ಅಂಗಡಿ ಮುಂಗಟ್ಟುಗಳು ಇರುವುದರಿಂದ ಪ್ರಯಾಣಿಕರು ನಿಂತಾಗ ವರ್ತ ಕರಿಗೂ ತೊಂದರೆಯಾಗುತ್ತಿದೆ. ದಿನದ ಎಲ್ಲ ಹೊತ್ತೂ ಇಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿರುವುದರಿಂದ ಗ್ರಾಹಕರಿಗೆ ಅಂಗಡಿಗಳಿಗೆ ಬರಲು ಕಷ್ಟವಾಗುತ್ತಿದೆ ಎಂದು ವರ್ತಕರು ಆರೋಪಿಸುತ್ತಾರೆ.

ನಗರ ಸುಂದರೀಕರಣ
ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಬಿ.ಸಿ. ರೋಡ್‌ ನಗರ ಸುಂದರೀಕರಣ ಎಂಬ ಯೋಜನೆ ಹಾಕಿಕೊಂಡಿದ್ದು, ಅದರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ದಾಣಕ್ಕೆ ಹೋಗುವ ಕುರಿತು ಪ್ರಸ್ತಾವವಿದೆ. ಇದು ಅನುಷ್ಠಾನಗೊಂಡರೆ ಬಸ್‌ಗಳು ಹೆದ್ದಾರಿಯಲ್ಲಿ ನಿಲ್ಲಬೇಕಾದ ಸಮಸ್ಯೆಗೆ ಒಂದಷ್ಟು ಪರಿಹಾರ ಸಿಕ್ಕಂತಾಗಬಹುದು. ಕೆಎಸ್‌ಆರ್‌ಟಿಸಿ ಬಸ್‌ಗಳ ಜತೆಗೆ ಖಾಸಗಿ (ಕಾಂಟ್ರಾಕ್ಟ್ ಕ್ಯಾರೇಜ್‌) ಬಸ್‌ಗಳಿಗೂ ಬದಲಿ ವ್ಯವಸ್ಥೆ ಕಲ್ಪಿಸಿದರೆ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಪರಿಹಾರವಾಗಬಹುದು ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.

 ಪ್ರಸ್ತಾವನೆ ಸಲ್ಲಿಸಿದ್ದೇವೆ
ಪ್ರಸ್ತುತ ಇಲ್ಲಿನ ರಸ್ತೆಗಳು ಕಿರಿದಾಗಿರುವ ಜತೆಗೆ ಬಸ್‌ಗಳು ಕೂಡ ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆೆ. ಹೀಗಾಗಿ ಸಂಚಾರ ಸಮಸ್ಯೆ ಉಂಟಾಗುತ್ತಿದ್ದು, ಬಸ್‌ಗಳಿಗೆ ನಿಲ್ಲುವುದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಬಂಟ್ವಾಳ ಪುರಸಭೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಹೊಸ ನಿಲ್ದಾಣಕ್ಕೆ ಹೋಗುವಂತಾದರೆ ಕೊಂಚ ಸಮಸ್ಯೆ ನಿವಾರಣೆಯಾಗಬಹುದು.
 -ಮಂಜುನಾಥ್‌
ಸಬ್‌ಇನ್ಸ್‌ಪೆಕ್ಟರ್‌, ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆ.

Advertisement

Udayavani is now on Telegram. Click here to join our channel and stay updated with the latest news.

Next