Advertisement

ಬಿ.ಸಿ. ರೋಡ್‌ KSRTC ಬಸ್‌ ನಿಲ್ದಾಣ ಉದ್ದೇಶ ಈಡೇರಿಲ್ಲ

06:35 AM May 24, 2018 | Karthik A |

ಬಂಟ್ವಾಳ : ಏರ್‌ ಪೋರ್ಟ್‌ ಮಾದರಿ ಎಂದೇ ಬಣ್ಣಿಸಲ್ಪಟ್ಟ ಬಿ.ಸಿ. ರೋಡ್‌ KSRTC ಬಸ್‌ ನಿಲ್ದಾಣವು ಯಾವ ಸದುದ್ದೇಶದಿಂದ ಅನುಷ್ಠಾನಕ್ಕೆ ಬಂತೋ ಆ ಉದ್ದೇಶ ಈಡೇರಿಸುವಲ್ಲಿ ವಿಫಲವಾಗಿದೆ. ಮಂಗಳೂರಿಂದ ಬೆಂಗಳೂರಿಗೆ ನೇರ ಹೋಗುವ ಐರಾವತ, ರಾಜಹಂಸ, ವೋಲ್ವೋ ಬಸ್‌ಗಳು ಬಿ.ಸಿ. ರೋಡ್‌ ಬಸ್‌ ನಿಲ್ದಾಣದ ಒಳಗೆ ಪ್ರವೇಶಿಸುವಲ್ಲಿ ಇರುವಂತಹ ಗೊಂದಲ ನಿವಾರಣೆ ಆಗಬೇಕಾಗಿದೆ. ಬಸ್‌ ನಿಲ್ದಾಣ ಉದ್ಘಾಟನೆಗೆ ಮೊದಲು ಎಲ್ಲ ಬಸ್‌ಗಳು ಸಂಪರ್ಕಿಸುವ ಸೌಲಭ್ಯ ಒದಗಿಸುವ ಬಗ್ಗೆ ಭರವಸೆ ವ್ಯಕ್ತವಾಗಿತ್ತು. ಆದರೆ ಬಸ್‌ ನಿಲ್ದಾಣ ಲೋಕಾರ್ಪಣೆಯಾಗಿ ಎಂಟು ತಿಂಗಳು ಮುಗಿಯುತ್ತಾ ಬಂದರೂ ಘೋಷಿತ ಭರವಸೆಗಳು ಅನುಷ್ಠಾನಕ್ಕೆ ಬಂದಿಲ್ಲ.

Advertisement

ಸಾಧನೆ
ಕಾಸರಗೋಡಿಗೆ ಬಿ.ಸಿ. ರೋಡ್‌ನಿಂದ ಬಸ್‌ ಸರ್ವಿಸ್‌ ಹಾಗೂ ಬಿ.ಸಿ. ರೋಡ್‌ ನಿಂದ ರಾತ್ರಿ ಬೆಂಗಳೂರಿಗೆ ಸ್ಲೀಪರ್‌ ಸರ್ವಿಸ್‌ ಬಸ್‌ ಗಳು ಆರಂಭಗೊಂಡದ್ದನ್ನು ಸಾಧನೆ ಎನ್ನಬೇಕು. ಈ ಹಿಂದೆ ಅಂತಹ ಸೌಲಭ್ಯವೂ ಇರಲಿಲ್ಲ. ಮಂಗಳೂರಿಗೆ ತೆರಳುವ ಕಟ್‌ ರೂಟ್‌ ಬಸ್‌ಗಳು ನಿಲ್ದಾಣ ಪ್ರವೇಶಿಸುವುದೊಂದೇ ಜನರಿಗಾದ ಪ್ರಯೋಜನ. ಮಂಗಳೂರು, ಪುತ್ತೂರು, ಧರ್ಮಸ್ಥಳ, ಬೆಳ್ತಂಗಡಿ, ವಿಟ್ಲ ಸಹಿತ ಅನೇಕ ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ಜನರಿಗೆ ಬಿ.ಸಿ. ರೋಡಿನ ಅಂಗಡಿಯ ಜಗಲಿ, ಫ್ಲೈ ಓವರ್‌ ತಳ, ಸರ್ವಿಸ್‌ ರಸ್ತೆಯ ಮೊದಲ ಮತ್ತು ಕೊನೆಯ ತುದಿಗಳು ಬಸ್‌ ಹತ್ತುವ, ಇಳಿಯುವ ತಾಣವಾಗಿವೆ. ಇದಕ್ಕೆ ಮುಖ್ಯ ಕಾರಣ ಸರ್ವಿಸ್‌ ಬಸ್‌ ಗಳು ಎಂಬ ಆರೋಪವಿದೆ.

ಸಮಸ್ಯೆ ಪರಿಹಾರ
ರಾ.ಹೆ.ಯಲ್ಲಿ ಬಿ.ಸಿ. ರೋಡ್‌ ಬಸ್‌ ನಿಲ್ದಾಣಕ್ಕೆ ರಾಜಹಂಸ, ಐರಾವತ ಬಸ್‌ ಗಳು ಬರುವುದಕ್ಕೆ ಸಮರ್ಪಕ ಎಂಟ್ರಿ ಇಲ್ಲ.  ದೊಡ್ಡ ಬಸ್‌ಗಳು ನಿಲ್ದಾಣಕ್ಕೆ ತಿರುಗುವ ಸ್ಥಳದಲ್ಲಿ ಡಿವೈಡರ್‌ ಬದಿ ಬಸ್‌ ಗಳಿಗೆ ಉಜ್ಜುವಷ್ಟು ಹತ್ತಿರಕ್ಕೆ ಬರುತ್ತವೆ. ಫ್ಲೈ ಓವರ್‌ನಲ್ಲಿ ರಭಸದಿಂದ ಬರುವ ಇತರ ವಾಹನಗಳಿಗೆ ತಿರುವಿನ ಸಂದರ್ಭ ತಡೆಯಾಗಿ ಸಮಸ್ಯೆ ಎದುರಾಗುತ್ತದೆ. ಸರ್ವಿಸ್‌ ರಸ್ತೆ ಮತ್ತು ಫ್ಲೈ ಓವರ್‌ ಸೇರುವಲ್ಲಿ  ಹೆದ್ದಾರಿಗೆ ಇನ್ನೂ ಸಮರ್ಪಕ ಡಾಮರು ಅಥವಾ ಕಾಂಕ್ರೀಟ್‌ ಕಾಮಗಾರಿ ಆಗಿಲ್ಲ.  ಮಂಗಳೂರಿಂದ ಬರುವ ಬಸ್‌ ಗಳು ಬಿ.ಸಿ. ರೋಡ್‌ ಹಳೆ ನಿಲ್ದಾಣಕ್ಕೆ ನೇರ ಬರುವುದರಿಂದ ಜನರಿಗೂ ಬಿ.ಸಿ. ರೋಡ್‌ ನೂತನ ಬಸ್‌ ನಿಲ್ದಾಣದ ಸಂಪರ್ಕವೇ ಇಲ್ಲದಂತಾಗಿದ್ದು, ಅದಕ್ಕೆ ಪರಿಹಾರ ಬೇಕಿದೆ. ಅಧಿಕಾರಿಗಳ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಹೆದ್ದಾರಿ ಸುರಕ್ಷೆ ಆಡಳಿತ ಇನ್ನೂ KSRTC ಬಸ್‌ ನಿಲ್ದಾಣದ ಎದುರು ಇರುವ ಡಿವೈಡರ್‌ ತೆರವುಗೊಳಿಸಿಲ್ಲ. ವೋಲ್ವೋ ಬಸ್‌ ಸಹಿತ ಬಿ.ಸಿ. ರೋಡಿಗೆ ಮಂಗಳೂರಿನಿಂದ ಬರುವ ಎಲ್ಲ ಬಸ್‌ಗಳು ನಿಲ್ದಾಣ ಪ್ರವೇಶಿಸುವಲ್ಲಿ ಇರುವಂತ ಅಡೆತಡೆಗಳ ನಿವಾರಣೆ ಆಗಬೇಕಿದೆ.

ಪ್ರಯತ್ನ ಆಗಲಿ
ಬೆಳಗ್ಗೆ  ಐರಾವತ ಬಸ್‌ ಗಳು ಫ್ಲೈಓವರ್‌ ಆರಂಭದಲ್ಲಿ ಅಥವಾ KSRTC ಬಸ್‌ ನಿಲ್ದಾಣದ ಎದುರು ಹೆದ್ದಾರಿಯಲ್ಲಿ ಪ್ರಯಾಣಿಕರನ್ನು ಇಳಿಸಿ ಹೋಗುತ್ತವೆ. ಒಳಗೆ ಬರುವ ಪ್ರಯತ್ನವನ್ನೇ ಮಾಡುವುದಿಲ್ಲ. ನಿಲ್ದಾಣಕ್ಕೆ ಬರುವ ಕೆಲಸ ಮೊದಲು ಆಗಬೇಕು. ರಾತ್ರಿ ಹೊತ್ತಿಗೆ  KSRTC ಬಸ್‌ ನಿಲ್ದಾಣದೊಳಗೆ ಪ್ರಯಾಣಿಕರು ಬರುವುದೇ ಇಲ್ಲ. ಪ್ರಮುಖವಾಗಿ ಬೆಂಗಳೂರು, ಮೈಸೂರಿಗೆ ತೆರಳುವ  ಬಸ್‌ ಗಳು ನಿಲ್ದಾಣಕ್ಕೆ ಬರುವುದಿಲ್ಲ. ಇಳಿಯುವ ಪ್ರಯಾಣಿಕರು ಇಲ್ಲ ಎಂಬ ಕಾರಣಕ್ಕಾಗಿ ನಿಲ್ದಾಣ ಪ್ರವೇಶಿಸುವುದಿಲ್ಲ. ಕನಿಷ್ಠ ಪ್ರಯಾಣಿಕರಿಗೆ ಪರಿಚಯಿಸುವ ಉದ್ದೇಶದಿಂದ ಐರಾವತ ಬಸ್‌ ಗಳನ್ನು ನಿಲ್ದಾಣಕ್ಕೆ  ಕೊಂಡೊಯ್ಯಬಹುದು ಎಂಬ ಅಭಿಪ್ರಾಯಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ.

ಅವಕಾಶ ಮಾಡಿಕೊಡಲಿ
ಮಂಗಳೂರಿಂದ ಬೆಂಗಳೂರಿಗೆ ಹೋಗುವ ರಾಜಹಂಸ, ವೋಲ್ವೊ ಬಸ್‌ ಗಳು ಬಿ.ಸಿ. ರೋಡ್‌ ಬಸ್‌ ನಿಲ್ದಾಣದ ಎದುರು ಫ್ಲೈ ಓವರ್‌ ಮುಕ್ತಾಯದಲ್ಲಿ ನೋ ಎಂಟ್ರಿ ಇರುವ ಕಾರಣಕ್ಕೆ ಬಸ್‌ ನಿಲ್ದಾಣಕ್ಕೆ ಬರಲು ಸಾಧ್ಯವಾಗುವುದಿಲ್ಲ. ಹೆದ್ದಾರಿ ಪ್ರಾಧಿಕಾರ ರಾ.ಹೆ.ಯಲ್ಲಿ ತಿರುವಿಗೆ ನಿಯಮಾನುಸಾರ ಸಂಚಾರ ಅವಕಾಶ ಮಾಡಿಕೊಟ್ಟರೆ ಬಸ್‌ಗಳು ಬರಲು ಅಡ್ಡಿ ಇಲ್ಲ. ಬಿ.ಸಿ. ರೋಡ್‌ ಖಾಸಗಿ ಬಸ್‌ ನಿಲ್ದಾಣದ ಸನಿಹ ಫ್ಲೈ ಓವರ್‌ ಅಡಿಯಲ್ಲಿ ಬಸ್‌ ಗಳು ತಿರುಗಿ ನಿಲ್ದಾಣಕ್ಕೆ ಬರುವುದಾದಲ್ಲಿ ಬಸ್‌ ನ ಅಡಿಭಾಗಕ್ಕೆ ರಸ್ತೆಯ ಅಂಚು ತಾಗುವುದರಿಂದ ಇಲ್ಲಿಂದಲೂ ಬರಲು ಸಾಧ್ಯವಾಗುವುದಿಲ್ಲ. ಸಂಬಂಧಪಟ್ಟ ಇಲಾಖೆ ಸೂಕ್ತ ಅವಕಾಶ ಮಾಡಿಕೊಟ್ಟಲ್ಲಿ ಬಸ್‌ ಗಳು ನಿಲ್ದಾಣಕ್ಕೆ ಬರುವುದಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. 
– ವೆಂಕಟರಮಣ ಭಟ್‌, ಸಂಚಾರ ನಿಯಂತ್ರಕರು, ಬಿ.ಸಿ. ರೋಡ್‌ KSRTC ಬಸ್‌ ನಿಲ್ದಾಣ

Advertisement

— ರಾಜಾ ಬಂಟ್ವಾಳ 

Advertisement

Udayavani is now on Telegram. Click here to join our channel and stay updated with the latest news.

Next