Advertisement

ಅರ್ಧಕ್ಕೆ ನಿಂತ ಕಾಮಗಾರಿ: ರಸ್ತೆ ಬದಿ ತಗ್ಗು -ಗುಡ್ಡ ಕುಸಿತದ ಭೀತಿ

11:58 AM May 22, 2019 | Team Udayavani |

ಮಂಗಳೂರು: ಮಂಗಳೂರಿನಿಂದ ರಾಜಧಾನಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ. ರೋಡ್‌-ಅಡ್ಡಹೊಳೆ ನಡುವಣ ಚತುಷ್ಪಥ ಕಾಂಕ್ರೀಟ್‌ ಕಾಮಗಾರಿ ಕೆಲವೇ ದಿನಗಳಲ್ಲಿ ಎದುರಾಗುವ ಮಳೆಗಾಲದಲ್ಲಿ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ. ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು, ಮಳೆ ನೀರು ರಸ್ತೆಯ ಅಕ್ಕಪಕ್ಕದ ಭಾರೀ ತಗ್ಗು ಸ್ಥಳಗಳಲ್ಲಿ ನಿಲ್ಲುವುದು, ಗುಡ್ಡ ಕುಸಿತದ ಅಪಾಯ ನಿಶ್ಚಿತ ಎಂಬಂತಿದೆ.

Advertisement

ಬಿ.ಸಿ.ರೋಡ್‌ನಿಂದ ಕಲ್ಲಡ್ಕ, ಉಪ್ಪಿನಂಗಡಿಯಾಗಿ ಅಡ್ಡಹೊಳೆ ವರೆಗೆ ಚತುಷ್ಪಥ ರಸ್ತೆ ನಿರ್ಮಾಣವನ್ನು ಕಳೆದ ವರ್ಷ ಎಲ್‌ ಆ್ಯಂಡ್‌ ಟಿ ಕಂಪೆನಿ ಆರಂಭಿಸಿತ್ತು. ನೇರ ಹೆದ್ದಾರಿ ನಿರ್ಮಿಸುವುದಕ್ಕಾಗಿ ಗುಡ್ಡಗಳನ್ನು ಅಗೆಯಲಾಗಿದೆ, ತಗ್ಗು ಸ್ಥಳಗಳಿಗೆ ಮಣ್ಣು ತುಂಬಲಾಗಿದೆ, ಕೆಲವೆಡೆ ರಸ್ತೆಯ ಪಕ್ಕದಲ್ಲಿ ಮಣ್ಣು ಅಗೆದು ತಗ್ಗಾಗಿಸಲಾಗಿದೆ. ಅರೆಬರೆ ಕೆಲಸಗಳಷ್ಟೇ ಆಗಿರುವುದರಿಂದ ರಸ್ತೆಯುದ್ದಕ್ಕೂ ಮೋರಿಗಳು, ತೋಡುಗಳಲ್ಲಿ ಮಣ್ಣು ತುಂಬಿದೆ. ಮಳೆ ಬಂದರೆ ರಸ್ತೆ ಮೇಲೆ ನೀರು ನಿಲ್ಲುವುದು ಖಚಿತ.

ಸದ್ಯ ಮೆಲ್ಕಾರ್‌ನಿಂದ ಮಾಣಿವರೆಗೆ ದೊಡ್ಡ ಸಮಸ್ಯೆ ಇಲ್ಲ. ಆ ಬಳಿಕ ಬುಡೋಳಿ, ಗಡಿಯಾರ, ಪೆರ್ನೆ, ಉಪ್ಪಿನಂಗಡಿ ಸೇರಿದಂತೆ ಹಲವು ಭಾಗ ಗಳಲ್ಲಿ ಅಪಾಯ ಸಾಧ್ಯತೆ ಇದೆ. ನಿರ್ದಿಷ್ಟವಾಗಿ ನೀರಕಟ್ಟೆಯಿಂದ ಅಡ್ಡಹೊಳೆ ವರೆಗೆ ಅಪೂರ್ಣ ಕಾಮಗಾರಿಯಿಂದ ಸಂಚಾರಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಪೆರಿಯಶಾಂತಿ ಬಳಿ ಕಳೆದ ಬಾರಿ ಮಳೆಗೆ ಗುಡ್ಡ ಜರಿದು ಸಂಚಾರ ಬಂದ್‌ ಆಗಿತ್ತು. ಈ ಬಾರಿಯೂ ಅಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.

ಗುಡ್ಡಗಳೇ ಅಪಾಯಕಾರಿ
ಈಗ ಇರುವ ರಸ್ತೆಯ ಅಕ್ಕಪಕ್ಕದಲ್ಲಿ ಹೊಸ ರಸ್ತೆಗಾಗಿ ಕೆಲವೆಡೆ ತಗ್ಗು ತೆಗೆದಿದ್ದು, ಕಳೆದ ಮಳೆಗಾಲದಲ್ಲೂ ಮಳೆ ನೀರು ನಿಂತು ಸಮಸ್ಯೆಯಾಗಿತ್ತು. ಇಂತಹ ತಗ್ಗು ಪ್ರದೇಶಗಳು ಈಗಲೂ ಹಾಗೆಯೇ ಇವೆ. ಮಣ್ಣನ್ನು ರಸ್ತೆ ಪಕ್ಕದ ತೋಟಗಳ ಬದಿಗೆ ಹಾಕಿದ್ದು, ಅದು ಕೊಚ್ಚಿಹೋಗಿ ತೋಟಗಳನ್ನು ಆವರಿಸುವ ಅಪಾಯವೂ ಇದೆ. ಗುಡ್ಡಗಳನ್ನು ಅವೈಜ್ಞಾನಿಕವಾಗಿ ಲಂಬವಾಗಿ ಕತ್ತರಿಸಿದ್ದರಿಂದ ಭೂಕುಸಿತ ಉಂಟಾಗಿತ್ತು.

63 ಕಿ.ಮೀ. ಉದ್ದದ ರಸ್ತೆ
ಒಟ್ಟು 821 ಕೋಟಿ ರೂ. ವೆಚ್ಚದಲ್ಲಿ ಬಿ.ಸಿ. ರೋಡ್‌ – ಅಡ್ಡಹೊಳೆ ಮಧ್ಯೆ 63 ಕಿ.ಮೀ. ಕಾಂಕ್ರೀಟ್‌ ಹೆದ್ದಾರಿ ನಿರ್ಮಿಸಲು ಎಲ್‌ ಆ್ಯಂಡ್‌ ಟಿ ಸಂಸ್ಥೆಗೆ ಗುತ್ತಿಗೆ ವಹಿಸಲಾಗಿತ್ತು. 2017ರ ಮಾ.28ಕ್ಕೆ ಕಾಮಗಾರಿ ಆರಂಭಿಸಿದ್ದು, ಪೂರ್ಣ ಗೊಳಿಸಲು ಎರಡೂವರೆ ವರ್ಷಗಳ ಅವಧಿ ನೀಡಲಾಗಿತ್ತು. ಸದ್ಯ ಮಳೆಗಾಲಕ್ಕಾಗಿ ಪೂರಕ ಕಾಮಗಾರಿ ನಡೆಯುತ್ತಿದೆ.

Advertisement

ಅಪಾಯಕಾರಿ ಸ್ಥಿತಿ
ಬಿ.ಸಿ. ರೋಡ್‌-ಅಡ್ಡಹೊಳೆ ರಸ್ತೆ ಕಾಮಗಾರಿಯಲ್ಲಿ ಅರೆಬರೆ ಕೆಲಸಗಳಷ್ಟೇ ಆಗಿರುವುದರಿಂದ ಈ ಬಾರಿಯೂ ಮಳೆಗಾಲದಲ್ಲಿ ಪ್ರಯಾಣಿಕರಿಗೆ ಮತ್ತು ಸ್ಥಳೀಯರಿಗೆ ಆತಂಕ ಎದುರಾಗಿದೆ. ಗುಡ್ಡಗಳು ಕುಸಿಯುವ ಅಪಾಯವಿದೆ. ರಸ್ತೆ ಬದಿಯಲ್ಲಿ ಹೊಂಡಗಳಿದ್ದು, ಪ್ರಯಾಣಿಕರಿಗೆ ಸಮಸ್ಯೆಯಾಗಬಹುದು.
 ಕಿಶೋರ್‌ ಶಿರಾಡಿ, ಹೋರಾಟಗಾರರು.

ನಿರ್ವಹಣಾ ಕಾಮಗಾರಿಗೆ ಸೂಚನೆ
ಬಿ.ಸಿ.ರೋಡ್‌-ಅಡ್ಡಹೊಳೆ ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಮಳೆಗಾಲಕ್ಕೆ ಮುನ್ನ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು.
 - ಲಿಂಗೇಗೌಡ, ಯೋಜನಾ ನಿರ್ದೇಶಕರು, ರಾ.ಹೆ.ಪ್ರಾಧಿಕಾರ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next