Advertisement

ಅಜರ್‌ ಆಸ್ತಿ ಫ್ರಾನ್ಸ್‌ನಲ್ಲಿ ಮುಟ್ಟುಗೋಲು

12:30 AM Mar 16, 2019 | |

ಹೊಸದಿಲ್ಲಿ: ಪುಲ್ವಾಮಾ ದಾಳಿಯ ಸಂಚುಕೋರ, ಜೈಶ್‌ ಉಗ್ರ ಮಸೂದ್‌ ಅಜರ್‌ಗೆ ವಿಶ್ವಸಂಸ್ಥೆಯಲ್ಲಿ ನಿಷೇಧ ಹೇರಲು ಚೀನ ಅಡ್ಡಿಪಡಿಸಿದ ಬೆನ್ನಲ್ಲೇ, ಆತನ ಎಲ್ಲ ಸ್ವತ್ತುಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲು ಫ್ರಾನ್ಸ್‌ ನಿರ್ಧರಿಸಿದೆ. ಇದರಿಂದಾಗಿ ಈತನನ್ನು ಜಾಗತಿಕ ಉಗ್ರ ಎಂದು ಘೋಷಿಸದೆಯೂ ನಿರ್ಬಂಧ ವಿಧಿಸಬಹುದಾದ ಹೊಸ ತಂತ್ರವೊಂದು ಕಂಡುಕೊಂಡಂತಾಗಿದೆ. ವಿಶ್ವಸಂಸ್ಥೆಯೇ ಉಗ್ರ ಎಂದು ಘೋಷಿಸಿದರೆ ಆಗ ಎಲ್ಲ ದೇಶಗಳೂ ಆತನಿಗೆ ಸಂಬಂಧಿಸಿದ ಸ್ವತ್ತು ಗಳನ್ನು ಮುಟ್ಟು ಗೋಲು ಹಾಕಿಕೊಳ್ಳಬೇಕಾ ಗುತ್ತಿತ್ತು. ಈಗ ಫ್ರಾನ್ಸ್‌ ಸ್ವಯಂಪ್ರೇರಿತವಾಗಿ ಆತನ ಸ್ವತ್ತು ಮುಟ್ಟು ಗೋಲು ಹಾಕಿಕೊಳ್ಳಲು ನಿರ್ಧರಿಸಿರುವುದು ಭಾರತದ ರಾಜತಾಂತ್ರಿಕ ಕ್ರಮಕ್ಕೆ ಸಂದ ಜಯವಾಗಿದೆ.

Advertisement

ಫ್ರಾನ್ಸ್‌ನ ಯುರೋಪ್‌ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಆರ್ಥಿಕ ಮತ್ತು ಹಣಕಾಸು ಸಚಿವಾಲಯ ಹಾಗೂ ಗೃಹ ಸಚಿವಾಲಯಗಳು ಜಂಟಿ ಹೇಳಿಕೆ ನೀಡಿ ಈ ಕ್ರಮವನ್ನು ಪ್ರಕಟಿಸಿವೆ. ಅಷ್ಟೇ ಅಲ್ಲ, ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳಿಗೆ ನಿರ್ಬಂಧ ಹೇರುವ ಐರೋಪ್ಯ ಒಕ್ಕೂಟದ ಪಟ್ಟಿಯಲ್ಲಿ ಮಸೂದ್‌ ಹೆಸರು ಸೇರಿಸುವ ನಿಟ್ಟಿನಲ್ಲಿ ಫ್ರಾನ್ಸ್‌ ಶ್ರಮಿಸಲಿದೆ. ಈ ನಿಟ್ಟಿನಲ್ಲಿ ಐರೋಪ್ಯ ಒಕ್ಕೂಟದ ದೇಶಗಳೊಂದಿಗೆ ನಾವು ಮಾತುಕತೆ ನಡೆಸಲಿದ್ದೇವೆ ಎಂದು ಫ್ರಾನ್ಸ್‌ ಸರಕಾರ ಹೇಳಿದೆ.

2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ 40 ಭಾರತೀಯ ಯೋಧರು ಸಾವನ್ನಪ್ಪಿದ್ದು, ಇದಕ್ಕೆ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಹೊಣೆ ಹೊತ್ತಿದೆ. ಈ ಸಂಘಟನೆ ಯನ್ನು ವಿಶ್ವಸಂಸ್ಥೆಯು 2001ರಲ್ಲೇ ನಿಷೇಧಿಸಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಅಲ್ಲದೆ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಫ್ರಾನ್ಸ್‌ ಎಂದಿಗೂ ಭಾರತದ ಪರವಾಗಿರುತ್ತದೆ ಎಂದೂ ಫ್ರಾನ್ಸ್‌ ಹೇಳಿದೆ.

2009ರಲ್ಲಿ ಭಾರತ ಒಂಟಿ: 2009ರಲ್ಲಿ ಯುಪಿಎ ಆಡಳಿತಾವಧಿಯಲ್ಲಿ ವಿಶ್ವಸಂಸ್ಥೆಯಲ್ಲಿ ಮಸೂದ್‌ ವಿಚಾರವನ್ನು ಪ್ರಸ್ತಾಪಿಸಿದಾಗ ಭಾರತ ಒಂಟಿಯಾಗಿತ್ತು. ಆದರೆ ಈಗ ಹಲವು ದೇಶಗಳು ಭಾರತದೊಂದಿಗೆ ಕೈಜೋಡಿಸಿವೆ. 2009ರಲ್ಲಿ ಭಾರತದ್ದು ರಾಜತಾಂತ್ರಿಕ ವೈಫ‌ಲ್ಯವಾಗಿತ್ತು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ. ಆಗ ಭಾರತ ಮಾತ್ರ ಪ್ರಸ್ತಾವನೆ ಸಲ್ಲಿಸಿತ್ತು. 2016ರಲ್ಲಿ ಅಮೆರಿಕ, ಫ್ರಾನ್ಸ್‌ ಮತ್ತು ಯುಕೆ ಪ್ರಾಯೋಜಿಸಿದ್ದವು. ಆದರೆ ಈ ಬಾರಿ ಅಮೆರಿಕ, ಫ್ರಾನ್ಸ್‌ ಮತ್ತು ಯುಕೆ ಪ್ರಸ್ತಾವನೆ ಸಲ್ಲಿಸಿ, 14 ದೇಶಗಳು ಪ್ರಾಯೋಜಿಸಿದ್ದವು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next