Advertisement

ಆಜ್ರಿ: ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆಯೇ ಇಲ್ಲ

09:42 PM Jun 10, 2019 | Sriram |

ಆಜ್ರಿ: ಮುಂಗಾರು ಇನ್ನೇನು ಆರಂಭವಾಗಲಿದೆ. ಆದರೆ ಕೆಲವು ಕಡೆಗಳಲ್ಲಿ ಮಳೆಗಾಲಕ್ಕೆ ಮುನ್ನ ಆಗಬೇಕಾದ ಸಿದ್ಧತೆ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಆಜ್ರಿಹರ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಜ್ರಿ ಪೇಟೆಯಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲದಂತಾಗಿದೆ. ಚರಂಡಿಯ ಹೂಳೆತ್ತುವ, ರಸ್ತೆ ಬದಿಯ ಗಿಡಗಂಟಿ ತೆರವು ಸಹಿತ ಮುಂಗಾರಿಗೆ ಮುನ್ನ ಆಗಬೇಕಾಗಿರುವ ಯಾವುದೇ ಸಿದ್ಧತೆ ಆಗಿಲ್ಲ.
ಮುಖ್ಯವಾಗಿ ಆಜ್ರಿಯ ಪೇಟೆಯಲ್ಲಿ ಪ್ರತಿ ವರ್ಷದ ಮಳೆಗಾಲದಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗುತ್ತದೆ. ಅಂದರೆ ಚರಂಡಿ ಸರಿಪಡಿಸದಿರುವುದು ಇದಕ್ಕೆ ಮುಖ್ಯ ಕಾರಣ. ಈ ಬಾರಿಯೂ ಸ್ಥಳೀಯಾಡಳಿತ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.

Advertisement

ಚರಂಡಿಯೇ ಇಲ್ಲ
ಕೆಲವೆಡೆಗಳಲ್ಲಿ ಚರಂಡಿಯಿದ್ದರೂ ಅದರಲ್ಲಿ ಹೂಳು ತುಂಬಿದೆ. ಕಸ, ಕಡ್ಡಿಗಳ ರಾಶಿಯೇ ಇದೆ. ಅದನ್ನು ತೆರವು ಮಾಡಿಲ್ಲ. ಇನ್ನು ಕೆಲವೆಡೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ. ಮತ್ತೆ ಕೆಲವು ಕಡೆಗಳಲ್ಲಿ ಚರಂಡಿಯಿಂದ ನೀರು ಬಂದು ಬೇರೆಡೆಗೆ ಹರಿದು ಹೋಗದೆ ರಸ್ತೆಯಲ್ಲಿಯೇ ನಿಲ್ಲುವ ಮೂಲಕ ಸಮಸ್ಯೆಯಾಗುವ ಭೀತಿ ಈ ಬಾರಿಯೂ ಇದೆ.

ಇನ್ನು ಆಜ್ರಿಯಿಂದ ನೇರಳಕಟ್ಟೆ ಕಡೆಗೆ ಸಂಚರಿಸುವ ಅಥವಾ ಸಿದ್ಧಾಪುರ
ಕಡೆಗೆ ಸಂಚರಿಸುವ ಪ್ರಮುಖ ರಸ್ತೆಗಳ ಬದಿ ಬೆಳೆದಿರುವ ಗಿಡಗಂಟಿಗಳು, ಪೊದೆಗಳು ರಸ್ತೆಗೆ ತಾಗಿಕೊಂಡು, ವಾಹನ ಸವಾರರಿಗೆ ಸಮಸ್ಯೆ ತಂದೊಡ್ಡುವ ಆತಂಕವೂ ಇದೆ. ಅದನ್ನು ಕೂಡ ಕೆಲವೆಡೆಗಳಲ್ಲಿ ತೆರವು ಮಾಡಿಲ್ಲ.

ಅನಾಹುತದ ಬಳಿಕ ಎಚ್ಚರ
ಮಳೆಗಾಲ ಆರಂಭವಾಗುವ ಮುನ್ನವೇ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡರೆ ಉತ್ತಮ. ಆ ಬಳಿಕ ಎಚ್ಚೆತ್ತುಕೊಂಡರೆ ಏನು ಪ್ರಯೋಜನ. ಪ್ರತಿ ಬಾರಿಯೂ ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವುದು ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳ ಜಾಯಮಾನವಾಗಿದೆ. ಅಲ್ಲಿಯವರೆಗೆ ಏನೂ ಮಾಡದೇ ಸುಮ್ಮನಿರುತ್ತಾರೆ ಎನ್ನುವುದು ಆಜ್ರಿಯ ಗ್ರಾಮಸ್ಥರ ಆರೋಪವಾಗಿದೆ.

ವಾರದೊಳಗೆ ಪೂರ್ಣ
ಈಗಾಗಲೇ ಕೆಲವೆಡೆಗಳಲ್ಲಿ ಚರಂಡಿ ಸ್ವತ್ಛತೆ ಕಾರ್ಯ ಮಾಡಲಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಬಾಕಿ ಇದೆ. ಇನ್ನು ಒಂದು ವಾರದೊಳಗೆ ಮಳೆಗಾಲಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳಲಿದೆ. ಈ ಬಾರಿ 2 ಲಕ್ಷ ರೂ. ವೆಚ್ಚದಲ್ಲಿ ಒಂದು ಕಡೆ ಒಳಚರಂಡಿ ಕಾಮಗಾರಿ ಮಾಡಲಾಗಿದೆ. ಮೀನು ಮಾರುಕಟ್ಟೆ ಸಮೀಪ ಉದ್ದಕ್ಕೆ ಚರಂಡಿ ನಿರ್ಮಾಣದ ಯೋಜನೆಯಿದೆ.
– ಗೋಪಾಲ ದೇವಾಡಿಗ, ಪಿಡಿಒ, ಆಜ್ರಿಹರ ಗ್ರಾ.ಪಂ.

Advertisement

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next