Advertisement

ಅಜ್ಲಾನ್‌ ಶಾ ಹಾಕಿ: ಭಾರತಕ್ಕೆ ಸೋಲು

08:15 AM Mar 07, 2018 | |

ಇಪೋ (ಮಲೇಶ್ಯ): ನೀರಸ ಆಟದ ಪ್ರದರ್ಶನ ನೀಡಿದ ಭಾರತೀಯ ಹಾಕಿ ಆಟಗಾರರು 27ನೇ ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ ಕೂಟದ ಮಂಗಳವಾರ ನಡೆದ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯ ವಿರುದ್ಧ 2-4 ಗೋಲುಗಳಿಂದ ಶರಣಾಗಿದ್ದಾರೆ. 

Advertisement

ಕೊನೆ ಹಂತದಲ್ಲಿ ರಮಣ್‌ದೀಪ್‌ ಸಿಂಗ್‌ ಅವಳಿ ಗೋಲು ಹೊಡೆದ ಕಾರಣ ಭಾರತ ವೈಟ್‌ವಾಶ್‌ ಸೋಲು ತಪ್ಪಿಸಿಕೊಂಡಿತು. ಇದು ಈ ಕೂಟದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಭಾರತದ ಎರಡನೇ ಸೋಲು ಆಗಿದೆ. ಮೊದಲ ಪಂದ್ಯದಲ್ಲಿ ಆರ್ಜೆಂಟೀನಾ ವಿರುದ್ಧ ಸೋತಿದ್ದ ಭಾರತ ಇಂಗ್ಲೆಂಡ್‌ ವಿರುದ್ಧ ಡ್ರಾ ಮಾಡಿಕೊಂಡಿತ್ತು. ಬುಧವಾರ ನಡೆಯುವ ನಾಲ್ಕನೇ ಪಂದ್ಯದಲ್ಲಿ ಭಾರತ ಆತಿಥೇಯ ಮಲೇಶ್ಯವನ್ನು ಎದುರಿಸಲಿದೆ.

ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದ ರಿಂದ ಭಾರತ ಈ ಕೂಟದಲ್ಲಿ ನೀರಸ ಪ್ರದರ್ಶನ ನೀಡಿದೆ. ಮಂಗಳವಾರದ ಗೆಲ್ಲಲೇಬೇಕಾದ ಪಂದ್ಯದಲ್ಲೂ ಭಾರತ ಕಳಪೆಯಾಗಿ ಆಡಿತು. ಇದರ ಲಾಭ ಪಡೆದ ಆಸ್ಟ್ರೇಲಿಯ ಭರ್ಜರಿಯಾಗಿ ಆಡಿ ಮೇಲುಗೈ ಸಾಧಿಸಿತು. 28ನೇ ನಿಮಿಷದಲ್ಲಿ ಮಾರ್ಕ್‌ ನೋಲ್ಸ್‌ ಮೊದಲ ಗೋಲು ಹೊಡೆದರೆ 35ನೇ ನಿಮಿಷದಲ್ಲಿ ಆರನ್‌ ಜಲೇವ್‌ಸ್ಕಿ ಎರಡನೇ ಗೋಲು ಗಳಿಸಿದರು. ಎರಡು ನಿಮಿಷಗಳ ಅಂತರದಲ್ಲಿ ಡೇನಿಯಲ್‌ ಬೀಲೆ ಮತ್ತು ಬ್ಲೇಕ್‌ ಗೋವರ್  ಗೋಲು ಹೊಡೆದ ಕಾರಣ ಆಸ್ಟ್ರೇಲಿಯ 4-0 ಮುನ್ನಡೆ ಸಾಧಿಸಿತಲ್ಲದೇ ಗೆಲುವು ಖಚಿತಪಡಿಸಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next