Advertisement
ಈ ಬಾರಿ ಕಣದಲ್ಲಿರುವ ಹುರಿಯಾಳುಗಳು ಬದಲಾಗಿದ್ದಾರೆ. ಹಾಲಿ ಸಂಸದ ಮುಲಾಯಂ ಸಿಂಗ್ ಯಾದವ್ ಸ್ಥಾನದಲ್ಲಿ ಪುತ್ರ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್ ಯಾದವ್ ಒಂದು ಕೈ ನೋಡೋಣ ಎಂದು ಅಖಾಡಕ್ಕೆ ಇಳಿದಿದ್ದಾರೆ. ಅವರ ವಿರುದ್ಧ ಬಿಜೆಪಿ ವತಿಯಿಂದ ಭೋಜ್‌ಪುರಿ ಭಾಷೆಯ ಸಿನಿಮಾ ನಟ ದಿನೇಶ್ ಲಾಲ್ ಯಾದವ್ ನಿರಾಹುವಾ ಕಣದಲ್ಲಿದ್ದಾರೆ.
Related Articles
Advertisement
ಐದು ಕ್ಷೇತ್ರಗಳು: ಗೋಪಾಲಪುರ, ಸಾಗ್ರಿ, ಮುಬಾರಕ್‌ಪುರ್, ಆಜಂಗಢ, ಮೆಹ್‌ನಗರ್ ಎಂಬ ಐದು ವಿಧಾನಸಭಾ ಕ್ಷೇತ್ರಗಳು ಈ ಲೋಕಸಭೆಯ ವ್ಯಾಪ್ತಿಯಲ್ಲಿವೆ. ಈ ಕ್ಷೇತ್ರದಲ್ಲಿ ಮೂರು ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಶಾಸಕರೇ ಇದ್ದಾರೆ. ಇನ್ನು ಎರಡರಲ್ಲಿ ಬಹುಜನ ಸಮಾಜವಾದಿ ಪಕ್ಷದ ಶಾಸಕರು ಇದ್ದಾರೆ.
ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಕುತೂಹಲಕಾರಿ ಅಂಶವೆಂದರೆ, ಬಿಜೆಪಿ ಅಭ್ಯರ್ಥಿಯಾಗಿರುವ ದಿನೇಶ್ ಲಾಲ್ ಯಾದವ್ ನಿರಾಹುವಾ ಅವರಿಗೆ 2016ರಲ್ಲಿ ಅಖೀಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಪ್ರದೇಶ ಸರ್ಕಾರದ ಪ್ರತಿಷ್ಠಿತ ಯುವ ಪ್ರಶಸ್ತಿ ‘ಯಶ್ ಭಾರತಿ’ ಪ್ರಶಸ್ತಿ ನೀಡಿ ಗೌರವಿಸಿದ್ದರು. ‘ನಾನು ಮುಖ್ಯಮಂತ್ರಿಯಾಗಿದ್ದಾಗ ದಿನೇಶ್ ಲಾಲ್ ಯಾದವ್‌ಗೆ ಪ್ರಶಸ್ತಿ ನೀಡಿದ್ದೆ. ಅವರು ಈಗ ನನ್ನ ವಿರುದ್ಧ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಅವರು ಪ್ರಶಸ್ತಿಯ ಮೂಲಕ ಪ್ರತಿ ತಿಂಗಳು ನೀಡುತ್ತಿದ್ದ ಮೊತ್ತವನ್ನು ಹಿಂಪಡೆದವರ ಪರವಾಗಿ ಸ್ಪರ್ಧೆ ನಡೆಸುತ್ತಿದ್ದಾರೆ. ನನ್ನ ವಿರುದ್ಧ ಯಾರು ಸ್ಪರ್ಧೆ ಮಾಡಿದರೂ, ಚಿಂತೆ ಮಾಡುವುದಿಲ್ಲ’ ಎಂದು ಅಖೀಲೇಶ್ ಹೇಳಿಕೊಂಡಿದ್ದಾರೆ.
ಅಖೀಲೇಶ್ ಯಾದವ್ ನನಗೆ ಪ್ರಶಸ್ತಿ ಕೊಟ್ಟಿದ್ದಾರೆಂದು ಅವರಿಗೆ ಬೆಂಬಲ ಕೊಡಬೇಕಾಗಿಲ್ಲ. 12 ವರ್ಷಗಳಿಂದ ಭೋಜ್‌ಪುರಿ ಸಿನಿಮಾ ಕ್ಷೇತ್ರದಲ್ಲಿದ್ದೇನೆ ಎಂದು ದಿನೇಶ್ ಲಾಲ್ ಯಾದವ್ ತಿರುಗೇಟು ನೀಡುತ್ತಾರೆ. ಯಾದವ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಮಾತ್ರ ಸಮಾಜವಾದಿ ಪಕ್ಷ ನೋಡುತ್ತದಷ್ಟೇ ಎನ್ನುವುದು ಅವರ ವಾದ. ಹಾಗಿದ್ದರೆ ಆಜಂಗಢದ ಜನ ಯಾರ ಪರ ವಾಲಬಹುದು ಎನ್ನುವ ಪ್ರಶ್ನೆಯಂತೂ ಎದುರಾಗುತ್ತದೆ. ಕೆಲವು ರಾಜಕೀಯ ಪಂಡಿತರ ಪ್ರಕಾರ ನಿರಾಹುವಾರನ್ನು ಅಖೀಲೇಶ್ ಯಾದವ್‌ರ ವಿರುದ್ಧ ಕಣಕ್ಕಿಳಿಸಿದ ಬಿಜೆಪಿಯ ನಿರ್ಧಾರವು ಮಾಸ್ಟರ್ ಸ್ಟ್ರೋಕ್ ಅಂತೆ. ಏಕೆಂದರೆ ಭೋಜಪುರಿ ಗಾಯಕನಿಗೆ ಯುವಕರು ಮತ್ತು ಮಧ್ಯಮ ಆದಾಯದ ಜನರ ಬೆಂಬಲವಿದೆ ಎನ್ನುತ್ತಾರವರು. ಆದರೆ ಬಿಜೆಪಿ ಅಭ್ಯರ್ಥಿ ತಮ್ಮ ರ್ಯಾಲಿಗಳಲ್ಲಿ ಜನಸಾಗರವನ್ನು ಸೆಳೆಯುತ್ತಿದ್ದಾರಾದರೂ, ಕ್ಷೇತ್ರದ ಜನ ಅಖೀಲೇಶ್‌ರ ಪರವಾಗಿ ಇದ್ದಾರೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಮೇ 12 ಕ್ಕೆ ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.