Advertisement

ಪುಣೆ : ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಸಮ್ಮಾನ

05:00 PM Jun 05, 2017 | Team Udayavani |

ಪುಣೆ: ಖ್ಯಾತ ಯಕ್ಷಗಾನ ಕಲಾವಿದ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಕೆರೆಮನೆ ಶಿವಾನಂದ ಹೆಗಡೆ ಅವರನ್ನು ಮೇ 30 ರಂದು ಪುಣೆಯ  ಕನ್ನಡ ಮಾಧ್ಯಮ ಹೈಸ್ಕೂಲ ಆವರಣದಲ್ಲಿ  ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿ ಪುಣೆ ವತಿಯಿಂದ ಸತ್ಕರಿಸಲಾಯಿತು.

Advertisement

ಈ  ಸಂದರ್ಭ ಕಲಾವಿದರನ್ನುದ್ದೇಶಿಸಿ ಮಾತನಾಡಿದ ಶಿವಾನಂದ ಹೆಗಡೆ ಅವರು,  ಹೊರನಾಡಾದ ಪುಣೆಯಲ್ಲಿದ್ದುಕೊಂಡು ಮಾತೃಭೂಮಿಯ ಬಗ್ಗೆ ಅಪಾರ ಅಭಿಮಾನವಿರುವ ತಾವುಗಳು ತಮ್ಮ ತಮ್ಮ ಕಾಯಕಗಳೊಂದಿಗೆ ಬಿಡುವಿನ ಸಮಯವನ್ನು ಉಪಯೋಗಿಸಿಕೊಂಡು ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ನಮ್ಮ ಕರಾವಳಿಯ ಹೆಮ್ಮೆಯ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಿ ಪೋಷಿಸುವ ಕಾರ್ಯವನ್ನು ಮಾಡುತ್ತಿರುವುದನ್ನು ಕಂಡಾಗ ಅಭಿಮಾನ ಉಕ್ಕಿ ಬರುತ್ತಿದೆ. ಒಂದು ರೀತಿಯ ಕರುಳುಬಳ್ಳಿಯ ಸಂಬಂಧವನ್ನು ಬೆಸೆಯುವ ಕಾರ್ಯವನ್ನು ಮಾಡುತ್ತಿರುವುದು ನಿಜವಾಗಿಯೂ ಸ್ತುತ್ಯರ್ಹವಾಗಿದೆ. ಇಂದು ಪರಂಪರಾಗತವಾದ ಯಕ್ಷಗಾನ ಕಲೆಯು ನಮ್ಮ ವೇಗದ ಜೀವನದ ಧಾವಂತದಲ್ಲಿ ಹಲವಾರು ಬದಲಾವಣೆಗಳನ್ನು ಕಾಣುತ್ತಾ ಸಾಗಿ ಬರುತ್ತಿದೆ. ಹಲವಾರು ಸಮಸ್ಯೆಗಳ ಮಧ್ಯೆಯೂ ಅಸ್ತಿತ್ವವನ್ನು ಉಳಿಸಿಕೊಂಡು ಸಮೃದ್ಧವಾಗಿದೆ. ಯಕ್ಷಗಾನ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಬದಲಾವಣೆಗಳನ್ನು ನಾವು ಸ್ವೀಕರಿಸಬೇಕಾಗಿದೆ. ಕಲಾವಿದನಾದವನು ಸೃಜನಶೀಲತೆಯನ್ನು ಬೆಳೆಸಿಕೊಂಡು ಕಲೆಯನ್ನು  ಪ್ರೀತಿಸಿ ಸಂಯಮದೊಂದಿಗೆ ನಿಸ್ವಾರ್ಥಭಾವದಿಂದ  ಬೆಳೆಸಬೇಕಾಗಿದೆ. ಆರ್ಥಿಕತೆಯ ಆಧಾರದಲ್ಲಿ ಕಲೆಯನ್ನು ತೂಗಹೊರಟರೆ ಕಲೆಯ ನಿಜವಾದ ಮೌಲ್ಯ ಉಳಿಯಲು  ಸಾಧ್ಯವಿಲ್ಲ. ಮನಸ್ಸನ್ನು ಸಂತೋಷಗೊಳಿಸುವ ಅದ್ಭುತ ಸಾಮರ್ಥ್ಯವಿರುವ ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ಸಾಗಿಸುವ ಕಾರ್ಯ ನಿರಂತರವಾಗಿ ನಮ್ಮಿಂದ ಆಗಬೇಕಾಗಿದೆ. ಯುವ ಪೀಳಿಗೆಗೆ ಸರಿಯಾದ ರೀತಿಯಲ್ಲಿ ತರಬೇತಿಗೊಳಿಸುವ ಕಾರ್ಯವೂ ಆಗಬೇಕಾಗಿದೆ. ಯಕ್ಷಗಾನವನ್ನು  ಶಾಸ್ತ್ರೀಯ ಕಲೆಯಾಗಿ ಗುರುತಿಸುವಂತೆ ಮಾಡುವ ಸಂಕಲ್ಪ$ ನಮ್ಮದಾಗಬೇಕಾಗಿದೆ. ಪುಣೆಯ ಅಯ್ಯಪ್ಪ ಯಕ್ಷಗಾನ ಮಂಡಳಿಯ ಮೂಲಕ ಯಕ್ಷಗಾನ ಕಲೆಯ ಬೆಳವಣಿಗೆಗೆ ದೊಡ್ಡ  ಕೊಡುಗೆ ಸಲ್ಲುವಂತಾಗಲಿ ಎಂದರು.

ವೇದಿಕೆಯಲ್ಲಿ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ, ನಾಟ್ಯಗುರು ಮದಂಗಲ್ಲು ಆನಂದ ಭಟ್‌, ಕನ್ನಡ ಮಾಧ್ಯಮ ಹೈಸ್ಕೂಲ್‌ ಪ್ರಾಚಾರ್ಯರಾದ ಚಂದ್ರಕಾಂತ ಹರ್ಕುಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಜೇಶ್ವರಿ ಎಸ್‌. ಹೆಗಡೆ, ಶ್ರೀಧರ್‌ ಹೆಗಡೆ, ಹೇಮಾ ಎ. ಭಟ್‌, ಕಲಾವಿದರುಗಳಾದ ವಾಸು ಕುಲಾಲ್‌ ವಿಟ್ಲ, ನಾಗೇಶ್‌  ಕುಲಾಲ… ಮತ್ತಿತರರು ಉಪಸ್ಥಿತರಿದ್ದರು. ಮದಂಗಲ್ಲು ಆನಂದ ಭಟ್‌ ಅವರು  ಶಿವಾನಂದ ಹೆಗಡೆಯವರನ್ನು ಪರಿಚಯಿಸಿ ಸ್ವಾಗತಿಸಿದರು. ವಿಶ್ವನಾಥ ಶೆಟ್ಟಿಯವರು ಅಯ್ಯಪ್ಪ ಯಕ್ಷಗಾನ ಮಂಡಳಿಯ ಕಾರ್ಯಯೋಜನೆಗಳ ಬಗ್ಗೆ ತಿಳಿಸಿದರು. ಕಲಾವಿದ ವಾಸು ಕುಲಾಲ… ವಿಟ್ಲ ಅವರು ವಂದಿಸಿದರು. 

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next