Advertisement

ಬಡವರ ಆರೋಗ್ಯ ಕಾಪಾಡಲು ಆಯುಷ್ಮಾನ್‌ ಯೋಜನೆ ಜಾರಿ

05:28 PM Apr 19, 2022 | Team Udayavani |

ದಾವಣಗೆರೆ: ಜನಸಾಮಾನ್ಯರು ಉತ್ತಮ ಆರೋಗ್ಯ ಸೇವೆ ಪಡೆಯಬೇಕು ಎಂಬ ಸದುದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಗೆ ತರಲಾಗಿದೆ ಎಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರ ತಿಳಿಸಿದರು.

Advertisement

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೋಮವಾರ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಬಡವರು ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯಲು ಹೊಲ-ಮನೆಗಳನ್ನು ಮಾರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದನ್ನು ತಡೆಯುವ ಸಲುವಾಗಿಯೇ ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಜನರ ದೃಷ್ಟಿಯಲ್ಲಿ ವೈದ್ಯರೇ ದೇವರು. ಹಾಗಾಗಿ ಪ್ರತಿಯೊಬ್ಬ ವೈದ್ಯರು ಪ್ರಾಮಾಣಿಕವಾಗಿ ಸೇವೆ ಮಾಡಬೇಕು. ಸೇವಾವಲಯದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸೌಲಭ್ಯಗಳು ಜನರಿಗೆ ತಲುಪುತ್ತವೆ. ಕುಷ್ಠ ಹಾಗೂ ಕ್ಷಯರೋಗದಂತಹ ಕಾಯಿಲೆಗಳ ನಿರ್ಮೂಲನೆಗಾಗಿ ವೈದ್ಯರು ಶ್ರಮಿಸುತ್ತಿದಾರೆ. ಕ್ಷಯರೋಗ ಜಿಲ್ಲೆಯಲ್ಲಿ ಶೇ. 20 ರಷ್ಟು ಕಡಿಮೆಯಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಕಂಚಿನ ಪದಕ ನೀಡಿ ಗೌರವಿಸಿದೆ. ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ವ್ಯವಸ್ಥಿತವಾಗಿ ಮುನ್ನಡೆಸಲು ಶ್ರಮಿಸೋಣ ಎಂದರು.

ಮನುಷ್ಯನಿಗೆ ಅನೇಕ ರೋಗಗಳು ಬರುವುದು ಸಹಜ. ಆದರೆ, ಅವುಗಳಿಗೆ ಸೂಕ್ತ ಚಿಕಿತ್ಸೆ ಪಡೆಯಲು ಬೇರೆ ಬೇರೆ ಆಸ್ಪತ್ರೆಗಳಿಗೆ ಹೋಗಿ ಹಣ ಕಳೆದುಕೊಂಡವರನ್ನು ಮತ್ತು ಚಿಕಿತ್ಸೆ ಪಡೆಯಲು ಸಾಧ್ಯವಾಗದವರನ್ನು ನಾವು ಕಾಣಬಹುದು. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂತಹ ಪರಿಸ್ಥಿತಿ ನಿಭಾಯಿಸಲು ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರಿಗೆ ಐದು ಲಕ್ಷದ ವರೆಗೆ ಉಚಿತ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯ ಬಹುದಾಗಿದೆ. ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕಾರ್ಡ್‌ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕೊರೊನಾ ಸಂದರ್ಭದಲ್ಲಿ ಜೀವವೇ ಉಳಿಯದ ಪರಿಸ್ಥಿತಿ ಕಂಡಿದ್ದೇವೆ. ಆಗ ವೈದ್ಯರು ಜನರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗಿದೆ. ಬಡವರಿಗೆ ಒಂದೂವರೆ ವರ್ಷಗಳ ಕಾಲ ಉಚಿತವಾಗಿ ಆಹಾರ ಒದಗಿಸಲಾಗಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ.ರವೀಂದ್ರನಾಥ್‌ ಮಾತನಾಡಿ, ಈ ಹಿಂದೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವುದಕ್ಕೆ ಜನ ಭಯ ಪಡುತ್ತಿದ್ದರು. ಆದರೆ, ಈಗ ವಾತಾವರಣ ಬದಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಸೇವೆ ದೊರೆಯುವ ಹಿನ್ನೆಲೆಯಲ್ಲಿ ನಿತ್ಯ ಸಾವಿರಾರು ಜನ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಸಹ ಇರಲಿಲ್ಲ. ಈಗ ಅದನ್ನು ಕಲ್ಪಿಸಲಾಗಿದೆ. ಕೋವಿಡ್‌ ವೇಳೆಯಲ್ಲಿ ವೈದ್ಯರು ಹಗಲು-ರಾತ್ರಿ ಎನ್ನದೇ ನಿರ್ವಹಿಸಿದ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಮೇಯರ್‌ ಆರ್‌.ಜಯಮ್ಮ ಗೋಪಿನಾಯ್ಕ, ತಹಶೀಲ್ದಾರ್‌ ಬಸವನಗೌಡ ಕೊಟೂರು, ಮಾಜಿ ಶಾಸಕ ಎಂ. ಬಸವರಾಜ್‌ ನಾಯ್ಕ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಷಣ್ಮುಖಪ್ಪ, ಆಯುಷ್‌ ಅಧಿಕಾರಿ ಡಾ| ಶಂಕರಗೌಡ, ಡಾ| ನೀಲಕಂಠ ನಾಯ್ಕ, ಡಾ| ಮೀನಾಕ್ಷಿ, ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ| ಡಿ.ಜಿ. ರಾಘವನ್‌, ಡಾ| ಸುರೇಶ್‌ ಎನ್‌.ಬಾರ್ಕಿ ಇತರರು ಇದ್ದರು. ಹೆಲ್ತ್‌ಕಾರ್ಡ್‌, ವಿವಿಧ ಸವಲತ್ತು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next