ಕೋಲಾರ: ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಯ ಆರೋಗ್ಯ ಸೇವೆ ನೀಡುವಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.
ಜಿಪಂನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತಂದು ಸೆ.23ಕ್ಕೆ ವರ್ಷವಾಯಿತು. ಈ ಅವ ಧಿಯಲ್ಲಿ ಜಿಲ್ಲೆಯ ಸರ್ಕಾರಿ ಹಾಗೂ ನೋಂದಾಯಿತ ಆಸ್ಪತ್ರೆಗಳು ಉತ್ತಮವಾದ ಆರೋಗ್ಯ ಸೇವೆಯನ್ನು ನೀಡಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ದಿರುವುದು ಶ್ಲಾಘನೀಯ ಎಂದರು.
ಶೇ.70 ರೋಗಿಗಳು ಕೊಡಬೇಕು: ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಇದರಲ್ಲಿ ಕೇಂದ್ರ ಸರ್ಕಾರವು ಶೇ.60, ರಾಜ್ಯ ಸರ್ಕಾರ ಶೇ.40 ಭರಿಸುತ್ತದೆ. ಎಪಿಎಲ್ ಕುಟುಂಬಗಳಿಗೆ ಸರ್ಕಾರವು ಚಿಕಿತ್ಸಾ ವೆಚ್ಚದ ಶೇ.30 ಅನ್ನು ಅಂದರೆ, ವಾರ್ಷಿಕ ಗರಿಷ್ಠ 1.5 ಲಕ್ಷ ರೂ. ಭರಿಸುತ್ತದೆ. ಉಳಿದ ಶೇ.70 ರೋಗಿಯು ನೀಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
1.75 ಲಕ್ಷ ನೋಂದಣಿ: ಜಿಲ್ಲೆಯಲ್ಲಿ 1,75,881 ಆರೋಗ್ಯ ಕಾರ್ಡ್ ನೋಂದಣಿ ಮಾಡಲಾಗಿದೆ. ಇಲ್ಲಿಯವರೆಗೆ 2.5 ಕೋಟಿ ರೂ. ಅನುದಾನದಲ್ಲಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಸುವರ್ಣ ಆರೋಗ್ಯ, ಟ್ರಸ್ಟ್, ಸೌಲಭ್ಯದಡಿ ಜಿಲ್ಲೆಗೆ 1 ಕೋಟಿ 11 ಲಕ್ಷ ಇಲ್ಲಿಯವರೆಗೆ ಬಿಡುಗಡೆಯಾಗಿದೆ. ಸೆ.30 ಮತ್ತು ಅ.1 ರಂದು ದೆಹಲಿಯಲ್ಲಿ ನಡೆಯುವ ಆರೋಗ್ಯ ಮಂಥನ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಎಸ್.ಎನ್.ಆರ್ ಆಸ್ಪತ್ರೆಯು ಉತ್ತಮ ಆಸ್ಪತ್ರೆ ಗೌರವಕ್ಕೆ ಪಾತ್ರವಾಗಲಿದೆ. ನಕಲಿ ಕ್ಲಿನಿಕ್ ಜಿಲ್ಲೆಯಲ್ಲಿ ಬಂದ್ ಮಾಡಿಸಲಾಗಿದೆ. ಕೆ.ಎಂ.ಸಿ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಅಥವಾ ಆಯುಷ್ಮಾನ್‌ನಲ್ಲಿ ಅನುಮತಿ ಪಡೆದಿದ್ದರೆ ಮಾತ್ರ ಅವಕಾಶ ನೀಡಬಹುದಾಗಿದೆ ಎಂದು ಹೇಳಿದರು.
ಕೋಲಾರ ನಗರದ ರಸ್ತೆಗಳು ಹದಗೆಟ್ಟಿದ್ದು, ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ನಗರಸಭೆಯಿಂದ ಕೆಲವು ರಸ್ತೆಗಳ ರಿಪೇರಿ ಮುರ್‍ನಾಲ್ಕು ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದರು.
2ನೇ ಅತ್ಯುತ್ತಮ ಘಟಕ ಪ್ರಶಸ್ತಿ: ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ರಾಜ್ಯದಲ್ಲಿ 2ನೇ ಅತ್ಯುತ್ತಮ ಘಟಕ ಪ್ರಶಸ್ತಿ ಬಂದಿದೆ. ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ನಾರಾಯಣಸ್ವಾಮಿ ಮಾತನಾಡಿ, ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆಯಡಿ ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಸೇರಿ 1650 ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಜಿಪಂ ಸಿಇಒ ದರ್ಶನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯ್, ಎ.ಪಿ.ಎಂ.ಸಿ ಅಧ್ಯಕ್ಷ ವಡಗೂರು ನಾಗರಾಜ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುಖ್ಯಸ್ಥ ಕೆ.ವಿ.ಶಂಕರಪ್ಪ ಉಪಸ್ಥಿತರಿದ್ದರು.