ಹೊನ್ನಾವರ: ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಯೋಜನೆಯಲ್ಲಿರುವ ತೊಡಕುಗಳನ್ನು ನಿವಾರಿಸಿ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆ ಪ್ರಯೋಜನ ಎಲ್ಲ ಕಾರ್ಡುದಾರರಿಗೂ ಸಿಗುವಂತೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಶಾಸಕ ದಿನಕರ ಶೆಟ್ಟಿ ಮತ್ತು ಸುನೀಲ ನಾಯ್ಕ ಹೇಳಿದರು.
ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ತೆರೆಯಲಾದ ಆಯುಷ್ಮಾನ್ ಕಾರ್ಡ್ ವಿತರಣಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಕನಸಿನ ಯೋಜನೆ ಇದಾಗಿದ್ದು, ಇದರ ಪ್ರಯೋಜನ ಇಡೀ ದೇಶದ ಜನತೆಗೆ ಆರೊಗ್ಯ ಸುಧಾರಣೆಗೆ ಏಕರೂಪವಾಗಿ ಜಾರಿಗೆ ತರಲಾಗಿದ್ದು ನಮ್ಮ ರಾಜ್ಯದ ಆರೋಗ್ಯ ಕರ್ನಾಟಕ ಯೋಜನೆ ಸೇರಿಸಿ ಜಾರಿಗೆ ತರಲಾಗಿದೆ. ಇದರಲ್ಲಿ ಕೆಲವೊಂದು ದೋಷಗಳಿದ್ದು ಅದನ್ನು ಸರಿಪಡಿಸಲು ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದು ಉತ್ತರಕನ್ನಡ ಸಹಿತ ಹಲವು ಜಿಲ್ಲೆಗಳಿಗೆ ಇದು ಸಮಸ್ಯೆಯಾಗಿದೆ. ಬಿಜೆಪಿಯ ಎಲ್ಲ ಶಾಸಕರು ಒಟ್ಟಾಗಿ ಶೀಘ್ರದಲ್ಲಿ ಆಯುಷ್ಮಾನ್ ಯೋಜನೆ ಕಾನೂನನ್ನು ಮಾತ್ರ ಅನ್ವಯಿಸುವಂತೆ ಮಾಡಲು ಸರ್ಕಾರ ನಿರ್ಣಯಿಸುವಂತೆ ಮಾಡಲಾಗುವುದು ಎಂದರು.
ಪ್ರಾಸ್ತಾವಿಕ ಮಾತನಾಡಿದ ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ| ರಾಜೇಶ ಕಿಣಿ, ಈವರೆಗೆ ಒಟ್ಟು ಈ ಯೋಜನೆಯಲ್ಲಿ 1,356 ಒಳ ರೋಗಿಗಳು ಚಿಕಿತ್ಸೆ ಪಡೆದು ಈ ಯೋಜನೆ ಲಾಭ ಪಡೆದಿದ್ದಾರೆ. ಮೂರನೇ ಹಂತದ ಚಿಕಿತ್ಸೆಗೆ ಈ ಆಸ್ಪತ್ರೆಯಿಂದ 881 ಜನ ಶಿಫಾರಸ್ಸು ಪಡೆದು ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಿದರು.
ಕೇಂದ್ರದ ಮುಖ್ಯಸ್ಥ ಆರೋಗ್ಯ ಮಿತ್ರ ವೆಂಕಟೇಶ ಪಟಗಾರ ಮಾತನಾಡಿ ಈ ಕೇಂದ್ರದಲ್ಲಿ ಪ್ರತಿದಿನಕ್ಕೆ 50 ಕಾರ್ಡ್‌ಗಳನ್ನು ಮಾಡಿಕೊಡಲಾಗುವುದು. ಪ್ರತಿಯೊಬ್ಬರೂ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡದಾರರು ಈ ಯೋಜನೆ ಲಾಭ ಪಡೆಯಲು ಸಾಧ್ಯವಿದೆ. ಮುಂಗಡವಾಗಿ ಫಾರ್ಮುಗಳನ್ನು ನೀಡಿ, ದಿನಾಂಕ, ವೇಳೆ ಸೂಚಿಸಲಾಗುವುದು. ಅಂದು ಬಂದು ಕಾರ್ಡ್ ಪಡೆಯಬೇಕೇ ವಿನಃ ಒತ್ತಡ ತರಬಾರದು. ಕಾರ್ಡಿಗೆ ಕೇವಲ 10 ರೂ. ಪಡೆಯಲಾಗುವುದು ಎಂದು ಹೇಳಿದರು. ಕಾರ್ಡ್ ಇಲ್ಲದವರು ಅವಸರಿಸದೆ ಬಿಪಿಎಲ್ ಕಾರ್ಡ್ ನೀಡಿ ಈ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.
ಪಪಂ ಸದಸ್ಯ ಮಹೇಶ ಮೇಸ್ತ, ಉಮೇಶ ನಾಯ್ಕ, ಮಂಜುನಾಥ ನಾಯ್ಕ, ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.