Advertisement

ಆಯುಷ್ಮಾನ್‌ ಭಾರತ್‌: ಮಣಿಪಾಲ ಆಸ್ಪತ್ರೆ ಸಾಧನೆ

02:21 AM Oct 17, 2019 | mahesh |

ಉಡುಪಿ: ಕೇಂದ್ರ ಸರಕಾರದ ಆಯುಷ್ಮಾನ್‌ ಭಾರತ್‌ ಆರೋಗ್ಯ ಯೋಜನೆಯಡಿ ಒಂದು ವರ್ಷದಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಅತ್ಯುತ್ತಮ ಸಾಧನೆ ಮಾಡಿದೆ. ದಿಲ್ಲಿಯಲ್ಲಿ ಆಯುಷ್ಮಾನ್‌ ಭಾರತದ ಪ್ರಥಮ ವಾರ್ಷಿಕ ಸಮಾವೇಶ “ಆಯುಷ್ಮಾನ್‌ ಭಾರತ್‌ – ಆರೋಗ್ಯ ಮಂಥನ್‌’ ಕಾರ್ಯಕ್ರಮದಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಪ್ರತಿನಿಧಿ, ದ.ಕ. ಜಿಲ್ಲೆಯ ಸುಳ್ಯದ ಆರೋಗ್ಯಮಿತ್ರ ಕಾರ್ಯಕರ್ತ, ಹಿರಿಯಡಕದ ಫ‌ಲಾನುಭವಿಯೊಬ್ಬರು ಪಾಲ್ಗೊಂಡಿದ್ದರು.

Advertisement

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಹಿರಿಯ ಅಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡು ಆಸ್ಪತ್ರೆ ಪ್ರತಿನಿಧಿಗಳು, ಆರೋಗ್ಯ ಮಿತ್ರ ಕಾರ್ಯಕರ್ತರು, ಫ‌ಲಾನುಭವಿಗಳಿಂದ ಮಾಹಿತಿ ಪಡೆದುಕೊಂಡು ಸೇವೆಯನ್ನು ಇನ್ನಷ್ಟು ಮೇಲ್ದರ್ಜೆಗೇರಿಸುವ ಇರಾದೆ ವ್ಯಕ್ತಪಡಿಸಿದ್ದಾರೆ.

5,528 ರೋಗಿಗಳಿಗೆ ಚಿಕಿತ್ಸೆ
ಮಣಿಪಾಲ ಆಸ್ಪತ್ರೆಯಲ್ಲಿ 2018ರ ಜೂನ್‌ನಿಂದ 2019ರ ಸೆಪ್ಟಂಬರ್‌ ತನಕ 5,528 ರೋಗಿಗಳನ್ನು ಉಪಚರಿಸಲಾಗಿದೆ. ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಅತಿ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ ರಾಜ್ಯದ ಆಸ್ಪತ್ರೆಗಳಲ್ಲಿ ಮಣಿಪಾಲ ಆಸ್ಪತ್ರೆ ಒಂದಾಗಿದೆ.

1,623 ರೋಗ ವಿಧಾನಗಳಿಗೆ ಚಿಕಿತ್ಸೆ ನೀಡಲು ಕರ್ನಾಟಕ ರಾಜ್ಯ ಸರಕಾರ ನಿರ್ದೇಶನ ನೀಡಿದೆ. ಅದರಂತೆ ನಾವು ಚಿಕಿತ್ಸೆ ನೀಡುತ್ತಿದ್ದೇವೆ. ಒಂದು ವರ್ಷದಲ್ಲಿ ಸರಕಾರದ ನಿಯಮಾನುಸಾರ 27 ಕೋ.ರೂ. ಮೌಲ್ಯದ ಚಿಕಿತ್ಸೆಯನ್ನು ನೀಡಿದ್ದೇವೆ. ದಿಲ್ಲಿ ಸಮಾವೇಶದಲ್ಲಿ ನಮ್ಮ ಅಭಿಪ್ರಾಯವನ್ನೂ ಕೇಳಿದ್ದಾರೆ ಎಂದು ಸಮಾವೇಶದಲ್ಲಿ ಪಾಲ್ಗೊಂಡ ಮಣಿಪಾಲ ಆಸ್ಪತ್ರೆಯ ಪ್ರತಿನಿಧಿ ಡಾ| ರಾಹುಲ್‌ ತಿಳಿಸಿದ್ದಾರೆ.

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ಮಿತ್ರ ಮುರಳಿ ಎನ್‌. ಚೊಕ್ಕಾಡಿ ಸಮಾವೇಶದ ಆಹ್ವಾನಿತರಲ್ಲಿ ಒಬ್ಬರು. ರಾಜ್ಯದಿಂದ ಆಯ್ಕೆಯಾದ ಇನ್ನೊಬ್ಬ ಆರೋಗ್ಯ ಮಿತ್ರ ಬೆಂಗಳೂರು ಕಿದ್ವಾಯಿ ಆಸ್ಪತ್ರೆಯ ಮಹೇಶ್‌. ಮೀಸಲು ಕ್ಷೇತ್ರವಾದ ಸುಳ್ಯದ ಪರಿಶಿಷ್ಟ ಜಾತಿ, ಪಂಗಡದ ಕಾಲನಿಗಳಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯ ಬಗ್ಗೆ ಮುರಳಿಯವರು ತಿಳಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

Advertisement

ಹಿರಿಯಡಕ ಗುಡ್ಡೆಯಂಗಡಿ ಗಜಾನನ ನಾಯಕ್‌ ರಾಜ್ಯದಿಂದ ದಿಲ್ಲಿಗೆ ತೆರಳಿದ ಆಯುಷ್ಮಾನ್‌ನ ಏಕೈಕ ಫ‌ಲಾನುಭವಿ. ಅವರಿಗೆ ಹೃದ್ರೋಗದ ಸಮಸ್ಯೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಕೊಂಡಿದ್ದರು.

ಸುಟ್ಟ ಗಾಯ, ಹೃದ್ರೋಗ, ಅಪಘಾತ, ಮೂತ್ರಪಿಂಡ ಸಮಸ್ಯೆ, ಸಣ್ಣಮಕ್ಕಳ ಕಾಯಿಲೆಗಳು ಹೀಗೆ ತುರ್ತಾಗಿ ಚಿಕಿತ್ಸೆ ಪಡೆದುಕೊಳ್ಳಬೇಕಾದ ಒಟ್ಟು 169 ರೀತಿಯ ರೋಗವಿಧಾನಗಳಲ್ಲಿ ರೋಗಿಗಳು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ದಾಖಲಾಗಬಹುದು. ಯಾವುದೇ ಜಿಲ್ಲೆಯವರು ಯಾವುದೇ ಯೋಜನೆಯಡಿ ಸಂಯೋಜಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ತುರ್ತಾಗಿ ಅಲ್ಲದ ರೋಗಗಳಿಗೆ ಸಂಬಂಧಿಸಿ ಜಿಲ್ಲಾ ಆಸ್ಪತ್ರೆಯ ಶಿಫಾರಸು ಪತ್ರವನ್ನು ಪಡೆದು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು.
– ಜಗನ್ನಾಥ್‌, ಜಿಲ್ಲಾ ಸಂಯೋಜಕರು, ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next