ಮಂಗಳೂರು: ದ.ಕ. ಜಿಲ್ಲೆಯಲ್ಲಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನೀಡಲು “ಆಯುಷ್ಮಾನ್’ ಯೋಜನೆಯನ್ನು ಕಡ್ಡಾಯವಾಗಿ ಎರಡು ವಾರದೊಳಗೆ ನೋಂದಣಿ ಮಾಡಬೇಕು. ಈ ಮೂಲಕ ಕೊರೊನಾಕ್ಕೆ ಎಲ್ಲ ಆಸ್ಪತ್ರೆಗಳಲ್ಲಿಯೂ ಉಚಿತ ಚಿಕಿತ್ಸೆ ಸಿಗುವಂತಾಗಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಯವರಿಗೆ ಸೂಚನೆ ನೀಡಿದ್ದಾರೆ.
ದ.ಕ. ಜಿಲ್ಲಾಡಳಿತದ ವತಿಯಿಂದ ಕೋವಿಡ್-19, ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ವಿಚಾರದ ಕುರಿತಂತೆ ಮಂಗಳೂರು ಪುರಭವನದಲ್ಲಿ ಬುಧವಾರ ನಡೆದ ವಿಶೇಷ ಜನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದ.ಕ. ಜಿಲ್ಲೆಯಲ್ಲಿ ಒಟ್ಟು 95 ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, 32 ಆಸ್ಪತ್ರೆಗಳು ಇತರ ರೋಗಗಳಿಗೆ ಅನ್ವಯವಾಗುವಂತೆ ಆಯುಷ್ಮಾನ್ ಯೋಜನೆ ನೋಂದಣಿ ಮಾಡಿವೆ. ಆದರೆ ಕೋವಿಡ್ ಚಿಕಿತ್ಸೆಗಾಗಿ 8 ಮೆಡಿಕಲ್ ಕಾಲೇಜು ಆಸ್ಪತ್ರೆ ಸೇರಿದಂತೆ ಇಟ್ಟು 12 ಆಸ್ಪತ್ರೆಗಳು ಮಾತ್ರ ನೋಂದಣಿ ಮಾಡಿವೆ. ಉಳಿದಂತೆ 12 ಆಸ್ಪತ್ರೆಗಳು ನೋಂದಣಿ ಪ್ರಕ್ರಿಯೆ ನಡೆಸುತ್ತಿವೆ. ಆದರೆ ಮುಂದಿನ ಎರಡು ವಾರದೊಳಗೆ ಎಲ್ಲ ಆಸ್ಪತ್ರೆಗಳು ಕೂಡ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಇಲ್ಲವಾದರೆ, ಅಂತಹ ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊರೊನಾ ಕಾರಣದಿಂದ ಚಿಕಿತ್ಸೆ ನೀಡುವ ಆಸ್ಪತ್ರೆಯವರು ದುಬಾರಿ ಮೊತ್ತ ಪಡೆಯುತ್ತಿದ್ದಾರೆ ಎಂಬ ಆರೋಪವಿದೆ. ಇದು ನಿಜವಾಗಿದ್ದರೆ ತನಿಖೆ ನಡೆಸಿ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಚಿಕಿತ್ಸೆ ಪಡೆಯುವ ರೋಗಿಗಳನ್ನು ಸಂಬಂಧಪಟ್ಟ ಆ್ಯಂಬುಲೆನ್ಸ್‌ನ ಚಾಲಕರು ಕಡ್ಡಾಯವಾಗಿ ಆಯುಷ್ಮಾನ್ ಯೋಜನೆ ಇರುವ ಆಸ್ಪತ್ರೆಯಲ್ಲಿಯೇ ದಾಖಲು ಮಾಡಬೇಕು. ಎಲ್ಲ ಆಸ್ಪತ್ರೆಗಳಲ್ಲಿಯೂ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಅವರು ಕಡ್ಡಾಯವಾಗಿ ಜನರ ಕರೆ ಸ್ವೀಕರಿಸಿ ಸೂಕ್ತ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಅಂಥವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಡಿ. ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ| ವೈ. ಭರತ್ ಶೆಟ್ಟಿ, ಮೇಯರ್ ದಿವಾಕರ್ ಪಾಂಡೇಶ್ವರ, ಉಪಮೇಯರ್ ವೇದಾವತಿ, ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ, ಜಿ.ಪಂ. ಸಿಇಒ ಆರ್. ಸೆಲ್ವಮಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯರಿ, ವೆನ್ಲಾಕ್ ಅಧೀಕ್ಷಕ ಡಾ| ಸದಾಶಿವ ಎಸ್., ಡಿಸಿಪಿ ಅರುಣ್, ಮನಪಾ ಉಪ ಆಯುಕ್ತ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಆಯುಷ್ಮಾನ್ ಕಾರ್ಡ್ ಬಗ್ಗೆ ಡಾ| ರತ್ನಾಕರ್ ಹಾಗೂ ಕೊರೊನಾ ವಿವರದ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ| ಸುಜಯ್ ಮಾಹಿತಿ ನೀಡಿದರು.
ಸಾವಿನ ಸಂಖ್ಯೆ ಮಂಗಳೂರಿನಲ್ಲಿ ಗರಿಷ್ಠ: ಡಿಸಿ
ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಏರಿಕೆ ಪ್ರಮಾಣದಲ್ಲಿದ್ದು ಶೇ.95ರಷ್ಟು ಜನರು ಮಂಗಳೂರು ಪಾಲಿಕೆ ವ್ಯಾಪ್ತಿಯವರು. ಹೀಗಾಗಿ ಪಾಲಿಕೆಯ ಎಲ್ಲ 60 ವಾರ್ಡ್‌ಗಳಲ್ಲಿ ಟಾಸ್ಕ್ ಪೋರ್ಸ್ ತಂಡ ರಚಿಸಲಾಗಿದೆ ಎಂದರು.