Advertisement

ಇಲಾಖೆಯಿಂದ ಸ್ಥಳದಲ್ಲೇ ಆಯುಷ್ಮಾನ್‌ ಕಾರ್ಡ್‌

09:06 PM Dec 17, 2019 | Lakshmi GovindaRaj |

ಹುಣಸೂರು: ಐದು ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಕಲ್ಪಿಸುವ ಮಹತ್ವಾಕಾಂಕ್ಷಿ ಆಯುಷ್ಮಾನ್‌ ಆರೋಗ್ಯ ಯೋಜನೆಯ ಕಾರ್ಡ್‌ ಪಡೆಯಲು ಆರೋಗ್ಯ ಇಲಾಖೆ ವತಿಯಿಂದಲೇ ಕಾರ್ಯಕ್ರಮ ರೂಪಿಸಲಾಗಿದೆ. ನಗರದ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಬರೋಬ್ಬರಿ 10 ಕಂಪ್ಯೂಟರ್‌ಗಳನ್ನು ತೆರೆದು ಫ‌ಲಾನುಭವಿಗಳ ಹೆಸರು, ಅಗತ್ಯ ದಾಖಲೆ ಪಡೆದುಕೊಂಡು ಸ್ಥಳದಲ್ಲೇ ಆಯುಷ್ಮಾನ್‌ ಕಾರ್ಡ್‌ ವಿತರಿಸಲಾಯಿತು.

Advertisement

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ್‌ ಬಸವರಾಜ್‌, ಆಯುಷ್ಮಾನ್‌ ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆಯಲ್ಲಿ ವಿಳಂಬವಾಗುತ್ತಿರುವುದನ್ನು ಮನಗಂಡು ಆರೋಗ್ಯ ಇಲಾಖೆ ವತಿಯಿಂದಲೇ ಕಾರ್ಡ್‌ ವಿತರಣೆಗೆ ಕ್ರಮವಹಿಸಲಾಗಿದೆ ಎಂದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಆಯುಷ್ಮಾನ್‌ ಭಾರತ ಯೋಜನೆಯಡಿ ಬಿಪಿಎಸ್‌ ಕಾರ್ಡ್‌ದಾರರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಕಲ್ಪಿಸಲಾಗುವುದು. ಆದರೆ, ಆರೋಗ್ಯ ಯೋಜನೆಯ ಕಾರ್ಡ್‌ ಪಡೆಯಲು ಕೆಲವೆಡೆ ಸರ್ವರ್‌ ಸಮಸ್ಯೆ, ಸಿಬ್ಬಂದಿ ಕೊರತೆ ಇದೆ. ಮತ್ತೂಂದೆಡೆ ಸಾರ್ವಜನಿಕರು ಕಾರ್ಡ್‌ ಮಾಡಿಸಿಕೊಳ್ಳಲು ಮುಂದಾಗದಿರುವುದರಿಂದ ಕಾರ್ಡ್‌ ವಿತರಣೆ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದಲೇ ಸ್ಥಳೀಯ ಏಜೆಸ್ಸಿಗಳ ಸಹಕಾರ ಪಡೆದು ಒಂದೆಡೆ ವಿತರಣೆಗೆ ಕ್ರಮ ವಹಿಸಲಾಗಿದೆ.

ಇಲ್ಲಿ ನಿಗದಿತ ಶುಲ್ಕ ಪಾವತಿಸಿದಲ್ಲಿ ಸ್ಥಳದಲ್ಲೇ ಕಾರ್ಡ್‌ ವಿತರಿಸಲಾಗುವುದು ಎಂದರು. ಮುಂದಿನ ದಿನಗಳ‌ಲ್ಲಿ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳವರು ಹಾಗೂ ಕುಟುಂಬದವರಿಗೆ ಮತ್ತು ಚಾಲಕರುಗಳಿಗೆ ನಿಗದಿತ ದಿನಾಂಕದಂದು ವಿತರಣೆಗೆ ಕ್ರಮವಹಿಸಲಾಗುವುದು. ಎಲ್ಲರೂ ಕುಟುಂಬದವರನ್ನು ಕರೆತಂದು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶೇ.25 ರಷ್ಟು ವಿತರಣೆ: ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್‌ ಮಾತನಾಡಿ, ತಾಲೂಕಿನಲ್ಲಿ 3.24 ಲಕ್ಷ ಲಕ್ಷ ಕಾರ್ಡ್‌ ವಿತರಣೆಯಾಗಬೇಕಿದೆ. ಆದರೆ, ಈವರೆಗೆ ಶೇ.24 ರಷ್ಟು(60 ಸಾವಿರ) ಕಾರ್ಡ್‌ ವಿತರಣೆಯಾಗಿದೆ. ಇದರಲ್ಲಿ ಎಪಿಎಲ್‌ ಹಾಗೂ ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೂ ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಿಸಲಾಗುತ್ತಿದೆ. ಬಿಪಿಎಲ್‌ನವರಿಗೆ ಉನ್ನತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭಿಸಲಿದೆ. ಎಪಿಎಲ್‌ ಕಾರ್ಡ್‌ದಾರರಿಗೆ ಕಡಿಮೆ ಹಣದಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಒಂದೇ ದಿನದಲ್ಲಿ 1942 ಕಾರ್ಡ್‌ ವಿತರಿಸಲಾಯತು. ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸರ್ವೇಶ್‌ ರಾಜೇಅರಸ್‌, ಆರೋಗ್ಯ ಇಲಾಖೆಯ ಜಿಲ್ಲಾ ನೋಡೆಲ್‌ ಅಧಿಕಾರಿ ಮಂಜುನಾಥಪ್ರಸಾದ್‌, ಆರೋಗ್ಯ ಶಿಕ್ಷಣಾಧಿಕಾರಿ ಮಹದೇವು, ಹಿರಿಯ ಆರೋಗ್ಯ ಸಹಾಯಕ ಶಿವನಂಜು, ಸತೀಶ್‌ ಸೇರಿದಂತೆ ನಗರದ 10ಕ್ಕೂ ಹೆಚ್ಚು ಕಂಪೂಟರ್‌ ಕೇಂದ್ರಗಳ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next