Advertisement

ದೇಶ, ಕುಟುಂಬ ಮತ್ತು ಶಿವಣ್ಣ

09:46 AM Nov 16, 2019 | mahesh |

ಶಿವರಾಜಕುಮಾರ್‌ ನೆಗೆಟಿವ್‌ ಪಾತ್ರ ಮಾಡಲು ಮುಂದಾಗಿದ್ದಾರೆ. ಯೋಗಿ ಜಿ ರಾಜ್‌ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಶಿವರಾಜಕುಮಾರ್‌ ನೆಗೆಟಿವ್‌ ಪಾತ್ರ ಮಾಡಲಿದ್ದಾರೆ. ಈ ಬಗ್ಗೆ ಮಾತನಾಡುವ ಶಿವಣ್ಣ, “ಎಷ್ಟು ದಿನಾಂತ ಒಳ್ಳೆಯವನಾಗಿ ಇರೋದು, ಒಮ್ಮೆ ಕೆಟ್ಟವನಾಗಿ ನೋಡೋಣ, ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೋ ನೋಡಬೇಕು’ ಎನ್ನುತ್ತಾರೆ. ಡಾ.ರಾಜ್‌ಕುಮಾರ್‌ ಕೂಡಾ ನೆಗೆಟಿವ್‌ ಪಾತ್ರ ಮಾಡಿದ್ದರೂ ಎಂದರೆ, “ಅಪ್ಪಾಜಿಗೆ ನನ್ನ ಹೋಲಿಸಬೇಡಿ. ಅವರು ಅವರೇ. ಅವರ ಸಿನಿಮಾ ಇವತ್ತಿನ ಜನರೇಶನ್‌ಗೂ ಇಷ್ಟವಾಗುತ್ತದೆ ಎಂದರೆ ಆ ಸಮಯದಲ್ಲೇ ಆ ತರಹದ ಸಿನಿಮಾಗಳನ್ನು ಮಾಡಿಬಿಟ್ಟಿದ್ದಾರೆಂದರ್ಥ’ ಎನ್ನುವುದು ಶಿವಣ್ಣ ಮಾತು.

Advertisement

“ರಿಯಲ್‌ ಸಿನಿಮಾ ಮೇಕಿಂಗ್‌ ಅಂದರೆ, ಹಿಂದಿನ ಸಿನಿಮಾಗಳದ್ದು, ಆ ಮಜಾನೇ ಬೇರೆ …’
– ಹೀಗೆ ಹೇಳಿಕೊಂಡರು ಶಿವರಾಜಕುಮಾರ್‌. ಶಿವಣ್ಣ ಹೀಗೆ ಹೇಳಿಕೊಂಡಿದ್ದು ಸಿನಿಮಾ ಮೇಕಿಂಗ್‌ ಬಗ್ಗೆ. ಸಿನಿಮಾ ಮೇಕಿಂಗ್‌ ಕಾಲ ಕಾಲಕ್ಕೆ ಬದಲಾಗುತ್ತಾ ಬಂದಿದೆ. ತಾಂತ್ರಿಕತೆ ಬೆಳೆಯುತ್ತಾ ಹೋದಂತೆ ಸಿನಿಮಾ ಮಂದಿ ಆ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುತ್ತಾ ಸಿನಿಮಾ ಮೇಕಿಂಗ್‌ ಅನ್ನು ಸುಲಭ ಮಾಡುತ್ತಾ ಬಂದಿದ್ದಾರೆ. ಆದರೆ, ಶಿವರಾಜಕುಮಾರ್‌ ಅವರಿಗೆ ಇವತ್ತಿಗೂ ಖುಷಿ ಕೊಡೋದು, ನಿಜವಾದ ಸಿನಿಮಾ ಮೇಕಿಂಗ್‌ ಅನಿಸೋದು ಹಳೆಯ ಶೈಲಿಯಂತೆ. “ಇವತ್ತು ಸಿಜಿ ಬಂದು ಎಲ್ಲವೂ ಸುಲಭವಾಗಿದೆ. ಗ್ರೀನ್‌ಮ್ಯಾಟ್‌ ಹಾಕಿ ಎಂತಹ ದೃಶ್ಯವನ್ನಾದರೂ ತೆಗೆಯಬಹುದು. ಆದರೆ, ಹಿಂದೆಲ್ಲಾ ಛಾಯಾಗ್ರಾಹಕರು ಎಷ್ಟೊಂದು ಕಷ್ಟಪಟ್ಟು, ಮೂರ್‍ನಾಲ್ಕು ಶಾಟ್‌ಗಳನ್ನು, ವ್ಯಕ್ತಿಗಳನ್ನು ಬಳಸಿಕೊಂಡು ಇವತ್ತಿನ ಸಿಜಿ ಶಾಟ್‌ಗಳನ್ನು ತೆಗೆಯುತ್ತಿದ್ದರು. ರಿಯಲ್‌ ಮೇಕಿಂಗ್‌ ಅಂದರೆ ಅದು. ಆದರೆ, ಈಗ ತಾಂತ್ರಿಕತೆ ಬಂದು ಎಲ್ಲವೂ ಬದಲಾಗಿದೆ. ಹಾಗಂತ ತಪ್ಪು ಎಂದು ಹೇಳುತ್ತಿಲ್ಲ. ಆಯಾಯ ಕಾಲಕ್ಕೆ ಏನು ಬೇಕೋ ಅದನ್ನು ಮಾಡಬೇಕು ಮತ್ತು ಒಪ್ಪಿಕೊಳ್ಳಬೇಕು. ನನಗೊಂದು ಖುಷಿ ಇದೆ, ಅದೇನೆಂದರೆ ಗ್ರೀನ್‌ಮ್ಯಾಟ್‌ ಬಾರದ ಕಾಲದ ಮೇಕಿಂಗ್‌ ಅನ್ನು ನೋಡಿದ್ದೇನೆ’ ಎನ್ನುತ್ತಾ ಇವತ್ತಿನ ಸಿನಿಮಾ ಮೇಕಿಂಗ್‌ ಬಗ್ಗೆ ಮಾತನಾಡಿದರು ಶಿವಣ್ಣ.

ಶಿವಣ್ಣ ಹೀಗೆ ಹೇಳಲು ಕಾರಣ “ಆಯುಷ್ಮಾನ್‌ ಭವ’ ಸಿನಿಮಾ. ಈ ಚಿತ್ರ ಇಂದು ತೆರೆಕಾಣುತ್ತಿದೆ. ದ್ವಾರಕೀಶ್‌ ಬ್ಯಾನರ್‌ನಲ್ಲಿ ತಯಾರಾಗಿರುವ ಈ ಚಿತ್ರವನ್ನು ಪಿ.ವಾಸು ನಿರ್ದೇಶಿಸಿದ್ದಾರೆ. “ಶಿವಲಿಂಗ’ ಚಿತ್ರದ ಯಶಸ್ಸಿನ ಬಳಿಕ ಶಿವಣ್ಣ ಹಾಗೂ ಪಿ.ವಾಸು ಕಾಂಬಿನೇಶನ್‌ನಲ್ಲಿ ಬರುತ್ತಿರುವ “ಆಯುಷ್ಮಾನ್‌ ಭವ’ ಸಿನಿಮಾದಲ್ಲಿ ಸಿಜಿ ಕೆಲಸ ಹೆಚ್ಚಿದೆಯಂತೆ. ಅದಕ್ಕೆ ಕಾರಣ, ಕಥೆ. “ಈ ಚಿತ್ರದಲ್ಲೂ ತುಂಬಾ ಸಿಜಿ ಕೆಲಸವಿದೆ. ಅದು ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ’ ಎನ್ನುವುದು ಶಿವಣ್ಣ ಮಾತು. ಆರಂಭದಲ್ಲಿ ಈ ಚಿತ್ರಕ್ಕೆ “ಆನಂದ್‌’ ಎಂದು ಟೈಟಲ್‌ ಇಡುವುದಾಗಿ ಹೇಳಲಾಗಿತ್ತು. ಆದರೆ, ಕೊನೆಗೆ “ಆಯುಷ್ಮಾನ್‌ ಭವ’ ಎಂದಾಯಿತು. ಈ ಬಗ್ಗೆ ಮಾತನಾಡುವ ಶಿವಣ್ಣ, “ಆರಂಭದಲ್ಲಿ ನಾವು “ಆನಂದ್‌’ ಎಂದಿಡಲು ಯೋಚಿಸಿದೆವು. ಆ ನಂತರ ಬೇಡವೆನಿಸಿತು. ಒಂದನೇಯದಾಗಿ ನನ್ನ ಮೊದಲ ಸಿನಿಮಾವದು. ಜೊತೆಗೆ ಈ ಕಥೆಗೆ ಅಷ್ಟೊಂದು ಹೊಂದಿಕೆಯಾಗು­ತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಕೆಲವು ಸಿನಿಮಾಗಳ ಶೀರ್ಷಿಕೆಯನ್ನು ನಾವು ಮುಟ್ಟಬಾರದು. ಅದು ಹಾಗೆಯೇ ಇರಬೇಕು. ಪಿ.ವಾಸು ಅವರು ತುಂಬಾ ಸೂಕ್ಷ್ಮಅಂಶಗಳನ್ನೂ ಗಮನಿಸುತ್ತಾರೆ. ಈ ಸಿನಿಮಾದಲ್ಲೂ ಅದು ಮುಂದುವರೆದಿದೆ. ಎಲ್ಲವೂ ಇಲ್ಲಿ ಕನೆಕ್ಟ್ ಆಗುತ್ತದೆ ಮತ್ತು ಪ್ರತಿಯೊಂದಕ್ಕೂ ಕಾರಣವಿದೆ. ಚಿತ್ರದಲ್ಲಿ ದೇಶವನ್ನೇ ಕುಟುಂಬ ರೂಪದಲ್ಲಿ ತೋರಿಸಿದ್ದಾರೆ. ಹಾಗಾಗಿ, ಚಿತ್ರಕ್ಕೆ “ಆಯುಷ್ಮಾನ್‌ ಭವ’ ಟೈಟಲ್‌ ತುಂಬಾ ಚೆನ್ನಾಗಿ ಹೊಂದುತ್ತದೆ’ ಎನ್ನುತ್ತಾರೆ ಶಿವಣ್ಣ. ಚಿತ್ರದಲ್ಲಿ ಕಾಡು, ಪ್ರಾಣಿ, ಹಾರರ್‌ ಫೀಲ್‌ ಕೂಡಾ ಇದೆ. ಹಾಗಾಗಿಯೇ ಶಿವಣ್ಣ, ಇದು ಕಂಪ್ಲೀಟ್‌ ಎಂಟರ್‌ಟೈನ್‌ಮೆಂಟ್‌ ಪ್ಯಾಕೇಜ್‌ ಎನ್ನುತ್ತಾರೆ. ಜೊತೆಗೆ ಒಂದಷ್ಟು ಅಡ್ವೆಂಚರ್‌ ಅಂಶಗಳು ಕೂಡಾ ಇವೆ ಎನ್ನಲು ಮರೆಯು­ವುದಿಲ್ಲ.

“ಚಿತ್ರದಲ್ಲಿ ನನಗೆ ಎರಡು ಶೇಡ್‌ನ‌ ಪಾತ್ರವಿದೆ. ಅದೇನೆಂಬುದನ್ನು ನೀವು ಸಿನಿಮಾದಲ್ಲಿ ನೋಡಬೇಕು. ತಲೆಯೊಳಗೆ ದೊಡ್ಡ ಭಾರ, ನೋವು ಇದ್ದರೂ ಅದನ್ನು ತೋರಿಸಿಕೊಳ್ಳದೇ ನಗು ನಗುತ್ತಾ ಇರುವ ಪಾತ್ರವೂ ಇದೆ. ನಿರ್ದೇಶಕ ವಾಸು ಅವರ ಜೊತೆ ಕೆಲಸ ಮಾಡೋದೇ ಖುಷಿ. ಇಷ್ಟು ವರ್ಷವಾದರೂ ಒಬ್ಬ ನಿರ್ದೇಶಕ ತನ್ನ ಜನಪ್ರಿಯತೆ ಕಳೆದುಕೊಂಡಿಲ್ಲ ಎಂದರೆ ಅದಕ್ಕೆ ಕಾರಣ ಅವರ ಶ್ರಮ, ಸಮಯಕ್ಕೆ ಸರಿಯಾಗಿ ಅಪ್‌ಡೇಟ್‌ ಆಗುವ ಗುಣ’ ಎನ್ನುವ ಶಿವರಾಜಕುಮಾರ್‌ ಅವರಿಗೆ ಹಿರಿಯ ನಟ ಅನಂತ್‌ನಾಗ್‌ ಜೊತೆ ಮತ್ತೂಮ್ಮೆ ನಟಿಸಿದ್ದು ಖುಷಿಕೊಟ್ಟಿದೆಯಂತೆ. “ಅನಂತ್‌ನಾಗ್‌ ಅವರ ಜೊತೆ ಕೆಲಸ ಮಾಡೋದೇ ಒಂದು ಖುಷಿ. ಅವರು ನಮ್ಮ ಇಂಡಿಯಾದ ಬ್ರಿಲಿಯಂಟ್‌ ನಟ. ಅವರ ಭಾಷೆ, ಕಣ್ಣೋಟ ಎಲ್ಲವೂ ಚೆಂದ. ಅವರ ನೋಟಕ್ಕೆ ತಕ್ಕಂತೆ ನಾವು ರಿಯಾಕ್ಟ್ ಮಾಡಬೇಕು’ ಎಂದು ಅನಂತ್‌ನಾಗ್‌ ಬಗ್ಗೆ ಹೇಳುತ್ತಾರೆ.

ಅಂದಹಾಗೆ, ಶಿವರಾಜಕುಮಾರ್‌ ನೆಗೆಟಿವ್‌ ಪಾತ್ರ ಮಾಡಲು ಮುಂದಾಗಿದ್ದಾರೆ. ಯೋಗಿ ಜಿ ರಾಜ್‌ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಶಿವರಾಜಕುಮಾರ್‌ ನೆಗೆಟಿವ್‌ ಪಾತ್ರ ಮಾಡಲಿದ್ದಾರೆ. ಈ ಬಗ್ಗೆ ಮಾತನಾಡುವ ಶಿವಣ್ಣ, “ಎಷ್ಟು ದಿನಾಂತ ಒಳ್ಳೆಯವನಾಗಿ ಇರೋದು, ಒಮ್ಮೆ ಕೆಟ್ಟವನಾಗಿ ನೋಡೋಣ, ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೋ ನೋಡಬೇಕು’ ಎನ್ನುತ್ತಾರೆ. ಡಾ.ರಾಜ್‌ಕುಮಾರ್‌ ಕೂಡಾ ನೆಗೆಟಿವ್‌ ಪಾತ್ರ ಮಾಡಿದ್ದರೂ ಎಂದರೆ, “ಅಪ್ಪಾಜಿಗೆ ನನ್ನ ಹೋಲಿಸಬೇಡಿ. ಅವರು ಅವರೇ. ಅವರ ಸಿನಿಮಾ ಇವತ್ತಿನ ಜನರೇಶನ್‌ಗೂ ಇಷ್ಟವಾಗುತ್ತದೆ ಎಂದರೆ ಆ ಸಮಯದಲ್ಲೇ ಆ ತರಹದ ಸಿನಿಮಾಗಳನ್ನು ಮಾಡಿಬಿಟ್ಟಿದ್ದಾರೆಂದರ್ಥ’ ಎನ್ನುವುದು ಶಿವಣ್ಣ ಮಾತು.

Advertisement

ಶಿವರಾಜಕುಮಾರ್‌ ಅವರ 125 ನೇ ಸಿನಿಮಾವನ್ನು ತಮ್ಮ ಹೋಂಬ್ಯಾನರ್‌ನಲ್ಲೇ ನಿರ್ಮಿಸಲು ಮುಂದಾಗಿದ್ದಾರೆ. “ಭೈರತಿ ರಣಗಲ್‌’ ಚಿತ್ರ ಅವರದ್ದೇ ಹೋಂ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿದೆ.

– ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next