ಚಿಂಚೋಳಿ: ತಾಲೂಕಿನ ವನ್ಯಜೀವಿಧಾಮ ಹಾಗೂ ಪ್ರವಾಸಿ ತಾಣ ಚಂದ್ರಂಪಳ್ಳಿ ಗ್ರಾಮದ ರೈತ ಭವನದಲ್ಲಿ ತಾತ್ಕಾಲಿಕವಾಗಿ ಸರಕಾರದಿಂದ ಆಯುಷ್ ಪ್ರಕೃತಿ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲಾಗಿದೆ. ತಾಲೂಕಿನ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಆಯುಷ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಚಿಂಚೋಳಿ ತಾಲೂಕಿ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿನ ಗ್ರಾಮೀಣ ಭಾಗದ ಜನರಿಗೆ ಆಯುಷ ಪದ್ಧತಿಗಳಲ್ಲಿ ಸಮರ್ಪಕವಾದ ವೈದ್ಯಕೀಯ ಸೇವೆಗಳನ್ನು ಅತ್ಯವಶ್ಯಕವಾಗಿರುವುದರಿಂದ ಹೊಸದಾಗಿ ಆಯುಷ್ ಆಸ್ಪತ್ರೆ ಪ್ರಾರಂಭಿಸಲಾಗಿದೆ.
ಬಳ್ಳಾರಿ ಜಿಂದಾಲ್ ಆಸ್ಪತ್ರೆಯಲ್ಲಿ ನೀಡುವಂತಹ ಪ್ರಕೃತಿ ಚಿಕಿತ್ಸೆ ಮಾದರಿಯಂತೆ ಇಲ್ಲಿಯೂ ನೀಡಲಾಗುವುದು. ಈಗಾಗಲೇ ಒಪಿಡಿ ಪ್ರಾರಂಭಿಸಲಾಗಿದೆ. ಅಲ್ಲದೇ ಇಬ್ಬರು ವೈದ್ಯರು ಮತ್ತು 14 ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ತಿಳಿಸಿದರು.
ಜಿಲ್ಲಾ ಆಯುಷ್ ಆರೋಗ್ಯಾಧಿಕಾರಿ ಡಾ| ನಾಗರತ್ನ ಚಿಮ್ಮಲಗಿ ಮಾತನಾಡಿ, ಆಯುಷ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ ಔಷಧ ರಹಿತವಾಗಿರುತ್ತದೆ. ಅಲ್ಲದೇ ರೋಗ ಗುಣಮುಖರಾಗಲು ಯೋಗ ಪದ್ಧತಿ ಕಾಯಿಲೆಗನುಣವಾಗಿ ಪ್ರಾಣಯಾಮ, ಧ್ಯಾನ ಇವೆಲ್ಲವೂ ಪ್ರತಿನಿತ್ಯ ಮುಂಜಾನೆ ಮತ್ತು ರಾತ್ರಿ ರೋಗಿಗಳಿಗೆ ತಿಳಿಸಿಕೊಡಲಾಗುವುದು.
ಚಂದ್ರಂಪಳ್ಳಿ ಸುತ್ತಮುತ್ತ ಒಳ್ಳೆಯ ನಿಸರ್ಗ ಮಡಿಲಿನ ನೈಸರ್ಗಿಕವಾಗಿ ಬೆಳೆದಿರುವ ಬೆಟ್ಟಗುಡ್ಡ ಪರಿಸರದಿಂದಾಗಿ ಹಾಗೂ ಉತ್ತಮ ವಾತಾವರಣದಿಂದಾಗಿ ರೋಗ ಗುಣಮುಖವಾಗಬಹುದಾಗಿದೆ. ಅಲ್ಲದೇ ಇಲ್ಲಿನ ಗೊಟ್ಟಂಗೊಟ್ಟ ಬಕ್ಕಪ್ರಭು ದೇವಸ್ಥಾನ ಸುತ್ತಲು ಇರುವ ಅರಣ್ಯ ಪ್ರದೇಶದಲ್ಲಿ ಔಷಧಿ ಸಸ್ಯಗಳು ಹೇರಳವಾಗಿ ದೊರೆಯುವುದರಿಂದ ಇದು ಉತ್ತಮ ಆಯುಷ ಆಸ್ಪತ್ರೆಯಾಗಲಿದೆ ಎಂದು ತಿಳಿಸಿದರು.
ಡಾ| ಸನಾವುಲ್ಲಾ, ಡಾ| ಹರೀಶಬಾಬು, ಡಾ| ಪ್ರದೀಪ ಪಾಟೀಲ್, ಡಾ| ಉಮಾಶಂಕರ ಪ್ರಭಾರ, ಡಾ| ಮಹಮ್ಮದ ಗಫಾರ, ಡಾ| ಸಂಜಯ ಗೋಳೆ, ಡಾ| ಸಂತೋಷ ಪಾಟೀಲ್ ಇದ್ದರು.