ಮಂಗಳೂರು: ವರ್ಷದ ಹಿಂದೆಯೇ ಸೇವಾರಂಭ ಮಾಡಬೇಕಿದ್ದ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಆಯುಷ್ ಆಸ್ಪತ್ರೆ ಇನ್ನೂ ಕಾರ್ಯನಿರ್ವಹಿಸಲು ಆರಂಭಿಸಿಲ್ಲ. ಕಟ್ಟಡ ನಿರ್ಮಾಣದಲ್ಲಿ ಆದ ವಿಳಂಬಗತಿಯೇ ಸೇವೆ ಅಲಭ್ಯವಾಗಲು ಕಾರಣ.
ಜಿಲ್ಲಾ ಸರಕಾರಿ ವೆನಲಾಕ್ ಆಸ್ಪತ್ರೆಯ ಆವರಣದಲ್ಲಿ ಸುಮಾರು 10 ಕೋ.ರೂ. ವೆಚ್ಚದಲ್ಲಿ 50 ಹಾಸಿಗೆ ಸಾಮರ್ಥ್ಯದ ಆಯುಷ್ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಕಟ್ಟಡದ ಶೇ. 70ರಷ್ಟು ನಿರ್ಮಾಣ ಕಾಮಗಾರಿ ಕಳೆದ ವರ್ಷದ ನವೆಂಬರ್‌ಗೆ ಮುಗಿದಿತ್ತು. 2019ರ ಜನವರಿ ವೇಳೆಗೆ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ ಎಂದು ಆಯುಷ್ ಅಧಿಕಾರಿಗಳು ತಿಳಿಸಿದ್ದರು. ಆದರೆ 2020ರ ಜನವರಿಗೆ ಇನ್ನೆರಡೇ ತಿಂಗಳಿದ್ದು, ವರ್ಷ ಕಳೆದರೂ ಆಸ್ಪತ್ರೆಯ ಸೇವೆ ಜನರಿಗೆ ಲಭ್ಯವಾಗಿಲ್ಲ.
ಯು.ಟಿ. ಖಾದರ್ ಆರೋಗ್ಯ ಸಚಿವರಾಗಿದ್ದಾಗ ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. 2018ರ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಬಳಿಕದ ಎಂಟೇ ತಿಂಗಳಲ್ಲಿ ಶೇ. 70ರಷ್ಟು ನಿರ್ಮಾಣ ಕಾಮಗಾರಿ ಮುಗಿದಿತ್ತಾದರೂ ಅನಂತರ ಕಾಮಗಾರಿ ಕುಂಟುತ್ತ ಸಾಗಿದೆ. ಪ್ರಸ್ತುತ ಕಟ್ಟಡ ಪೂರ್ಣಗೊಂಡಿದ್ದು, ಅಂತಿಮ ಹಂತದ ಕೆಲಸ ಶೇ. 5ರಷ್ಟು ಬಾಕಿ ಇದೆ. ಮುಂದಿನ ಎರಡು ತಿಂಗಳೊಳಗೆ ಇದೂ ಪೂರ್ಣಗೊಳ್ಳಬಹುದು ಎನ್ನುತ್ತಾರೆ ಆಯುಷ್ ಅಧಿಕಾರಿಗಳು. ಇದು ನಿಜವಾಗಬಹುದೇ ಎನ್ನುವುದನ್ನು ಕಾದು ನೋಡಬೇಕಿದೆ.
ಒಂದೇ ಸೂರಿನಡಿ ಐದು ವಿಭಾಗ
ನ್ಯಾಚುರೋಪಥಿ, ಹೋಮಿ ಯೋಪಥಿ, ಆಯುರ್ವೇದ, ಯುನಾನಿ ಮತ್ತು ಯೋಗ ವಿಭಾಗಗಳು ಒಂದೇ ಸೂರಿನಡಿ ಈ ಆಸ್ಪತ್ರೆಯಲ್ಲಿ ಲಭ್ಯವಾಗಲಿವೆ. ಈ ಐದೂ ವಿಭಾಗಗಳನ್ನು ಒಂದೇ ಕಡೆ ಹೊಂದಿರುವ ದೇಶದ ಮೊದಲ ಆಸ್ಪತ್ರೆ ಇದಾಗಲಿದೆ ಎಂದು ಆಯುಷ್ ಅಧಿಕಾರಿ ಡಾ| ಇಕ್ಬಾಲ್ ತಿಳಿಸಿದ್ದಾರೆ. ಮಹಿಳಾ ವಾರ್ಡ್, ಮಹಿಳಾ ವಿಶೇಷ ಕೊಠಡಿ, ಪುರುಷರ ವಾರ್ಡ್, ಪುರುಷರ ವಿಶೇಷ ಕೊಠಡಿ, ಡಯಟ್ ಕಿಚನ್, ಪಂಚಕರ್ಮ ಚಿಕಿತ್ಸೆ, ವಿವಿಧ ಥೆರಪಿಗಳು, ನ್ಯೂಟ್ರಿಷನ್ ಸೆಂಟರ್, ಥೆರಪಿ ಲ್ಯಾಬ್, ಎಲ್ಲ ರೀತಿಯ ಆಯುರ್ವೇದ ಚಿಕಿತ್ಸೆಗಳು ಇಲ್ಲಿ ಲಭ್ಯವಿರಲಿವೆ.
ಕಳೆದ ಜನವರಿಯಲ್ಲಿ ಆಸ್ಪತ್ರೆ ಕಟ್ಟಡವನ್ನು ಹಸ್ತಾಂತರಿಸುವುದಾಗಿ ಎಂಜಿನಿಯರ್‌ಗಳು ಹೇಳಿದ್ದರು. ಆದರೆ ಮರಳು ಸಮಸ್ಯೆ ಮತ್ತಿತರ ಕಾರಣಗಳಿಂದಾಗಿ ಕಟ್ಟಡ ಕಾಮಗಾರಿ ವಿಳಂಬವಾಯಿತು. ಈಗ ಶೇ. 100ರಷ್ಟು ಕಾಮಗಾರಿ ಮುಗಿದಿದ್ದು, ಕೆಲವೊಂದು ಅಂತಿಮ ಹಂತದ ಕೆಲಸಗಳು ಬಾಕಿ ಇದೆ. ಅನಂತರ ಸರಕಾರದಿಂದ ತಾಂತ್ರಿಕ ಅನುಮೋದನೆ ದೊರೆತ ಬಳಿಕ ಕಟ್ಟಡ ಸೇವಾರಂಭ ಮಾಡಲಿದೆ. ಈ ಜನವರಿ ವೇಳೆಗೆ ಕಟ್ಟಡದ ಎಲ್ಲ ಕೆಲಸ ಮುಗಿಯುವ ನಿರೀಕ್ಷೆ ಇದೆ.
– ಡಾ| ಇಕ್ಬಾಲ್, ಜಿಲ್ಲಾ ಆಯುಷ್ ಅಧಿಕಾರಿ