Advertisement

Ayush hospital: ವೈದ್ಯರಿಲ್ಲದ ಆಯುಷ್‌ ಆಸ್ಪತ್ರೆಗೆ ಬೀಗ

03:59 PM Aug 28, 2023 | Team Udayavani |

ಕಲೇಶಪುರ: ಪಟ್ಟಣದ ಕ್ರಾಫ‌ರ್ಡ್‌ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗಿರುವ ತಾಲೂಕು ಆಯುಷ್‌ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಆಸ್ಪತ್ರೆ ಕಟ್ಟಡಕ್ಕೆ ಬೀಗ ಜಡಿಯಲಾಗಿದ್ದು, ಕೂಡಲೇ ಸರ್ಕಾರ ಇತ್ತ ಗಮನವರಿಸಿ ಶಾಶ್ವತ ಆಯುರ್ವೇದ ವೈದ್ಯರನ್ನು ನೇಮಕಾತಿ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ.

Advertisement

ಪಟ್ಟಣದ ಕ್ರಾಫ‌ರ್ಡ್‌ ಆಸ್ಪತ್ರೆ ಆವರಣದಲ್ಲಿ 2015ರಲ್ಲಿ ಅಂದಿನ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಆಯುಷ್‌ ಇಲಾಖೆ ವತಿಯಿಂದ ಸುಮಾರು 2 ಕೋಟಿ ರೂ.ಗೂ ಹೆಚ್ಚು ಅನುದಾನದಲ್ಲಿ ಆಸ್ಪತ್ರೆ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಪ್ರಾರಂಭದಲ್ಲಿ ವೈದ್ಯರಿದ್ದ ಕಾರಣ ರೋಗಿಗಳಿಗೆ ಬಹಳ ಅನುಕೂಲವಾಗುತ್ತಿತ್ತು. ಆದರೆ, ನಂತರದ ವರ್ಷಗಳಲ್ಲಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ವೈದ್ಯರನ್ನು ಸರ್ಕಾರ ನೇಮಕಾತಿ ಮಾಡದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ರೋಗಿಗಳಿಗೆ ಇದ್ದು ಇಲ್ಲದಂತಾಗಿದೆ.

ಅನಾಥವಾಗಿರುವ ಕಟ್ಟಡ: ಕೋವಿಡ್‌ ಸಂದರ್ಭದಲ್ಲಿ ಆಯುಷ್‌ ಆಸ್ಪತ್ರೆ ಕಟ್ಟಡವನ್ನು ಕೋವಿಡ್‌ ರೋಗಿಗಳ ತಪಾಸಣೆ ಮಾಡಲು ಬಳಸಲಾಗುತ್ತಿತ್ತು. ಆದರೆ, ಕೋವಿಡ್‌ ದೂರವಾದ ನಂತರ ಈ ಕಟ್ಟಡ ಸಂಪೂರ್ಣವಾಗಿ ಅನಾಥವಾಗಿದೆ. ಈ ಕಟ್ಟಡ ಆಯುಷ್‌ ಇಲಾಖೆ ಅಡಿಯಲ್ಲಿ ಬರುವುದರಿಂದ ಕ್ರಾಫ‌ರ್ಡ್‌ ಆಸ್ಪತ್ರೆಯ ಅಗತ್ಯಗಳಿಗೂ ಈ ಕಟ್ಟಡವನ್ನು ಬಳಸಲು ಸಾಧ್ಯವಾಗುತ್ತಿಲ್ಲ.

ಚಿಕಿತ್ಸೆ ವಂಚಿತ: ಕೆಲವು ರೋಗಗಳಿಗೆ ಜನ ಅಲೋಪಥಿಗಿಂತ ಆರ್ಯುವೇದಿಕ್‌ ಚಿಕಿತ್ಸೆ ಪಡೆಯಲು ಮುಂದಾಗುತ್ತಿದ್ದು, ಆದರೆ ಸರ್ಕಾರ ಆರ್ಯುವೇದಿಕ್‌ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಕಾತಿ ಮಾಡಲು ಮುಂದಾಗದ ಕಾರಣ ಜನ ಆರ್ಯುವೇದ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ.

ತಾತ್ಕಾಲಿಕ ವೈದ್ಯರ ನಿರುತ್ಸಾಹ: ಆಯುಷ್‌ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ ವೈದ್ಯರೋರ್ವರನ್ನು ನೇಮಕಾತಿ ಮಾಡಿದ್ದು, ಅವರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಆಸ್ಪತ್ರೆ ರೋಗಿಗಳಿಗೆ ಇದ್ದು ಇಲ್ಲದಂತಾಗಿದೆ. ಕೂಡಲೇ ಆಯುಷ್‌ ಇಲಾಖೆ ಇತ್ತ ಗಮನವರಿಸಿ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಗಳನ್ನು ನೇಮಕಾತಿ ಮಾಡಲು ಮುಂದಾಗಬೇಕಾಗಿದೆ.

Advertisement

ಯೋಗ ಕೇಂದ್ರ, ಫಿಜಿಯೋಥೆರಪಿ ಕೇಂದ್ರ:

ಯೋಗ ತರಬೇತಿಗೆ ಹಾಗೂ ಫಿಜಿಯೋಥೆರಪಿ ಕೇಂದ್ರ ಮಾಡಲು ಈ ಕಟ್ಟಡವನ್ನು ಬಳಸಬಹುದಾಗಿದ್ದು, ಈ ನಿಟ್ಟಿನಲ್ಲಿ ನೂತನ ಶಾಸಕರು ಇತ್ತ ಗಮನವರಿಸಬೇಕಾಗಿದೆ. ಒಟ್ಟಾರೆಯಾಗಿ ತಾಲೂಕು ಕೇಂದ್ರದಲ್ಲಿ ಆಯುರ್ವೇದಿಕ್‌ ಆಸ್ಪತ್ರೆ ಇಲ್ಲದಿರುವುದು ಬೇಸರದ ಸಂಗತಿಯಾಗಿದ್ದು, ಕೂಡಲೇ ಅಗತ್ಯ ವೈದರ ನೇಮಕಾತಿ ಮಾಡಿ ಕಟ್ಟಡದ ಸದ್ಬಳಕೆ ಮಾಡಲು ಆಯುಷ್‌ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ.

ಆಯುಷ್‌ ಆಯುರ್ವೇದ ಆಸ್ಪತ್ರೆಯಲ್ಲಿ ವೈದ್ಯರ ನೇಮಕಾತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ಶಾಸಕರು ಕೂಡ ಅಗತ್ಯ ಸೌಲಭ್ಯಗಳನ್ನು ಈ ಕಟ್ಟಡಕ್ಕೆ ಕಲ್ಪಿಸಲು ಮುಂದಾಗಬೇಕು.-ನವೀನ್‌ ಶೆಟ್ಟಿ, ಪಟ್ಟಣ ನಿವಾಸಿ

ಕಟ್ಟಡಕ್ಕೆ ಬೀಗ ಹಾಕಿರುವ ಕುರಿತು ಜಿಲ್ಲಾ ಅಯುಷ್‌ ನಿರ್ದೇಶಕರ ಗಮನಕ್ಕೆ ತರಲಾಗಿದ್ದು,  ಶೀಘ್ರದಲ್ಲೆ ಸಭೆ ನಡೆಸಿ ಆರ್ಯುವೇದ ವೈದ್ಯರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು.-ಸಿಮೆಂಟ್‌ ಮಂಜು, ಶಾಸಕರು  

-ಸುಧೀರ್‌ ಎಸ್‌.ಎಲ್‌.

Advertisement

Udayavani is now on Telegram. Click here to join our channel and stay updated with the latest news.

Next